'ಸರ್ಕಾರ ತರಾತುರಿ ವರದಿ ಜಾರಿ ಮಾಡಿದ್ರೆ ಎಚ್ಚರ..' ಒಳಮೀಸಲಾತಿ ವರದಿಗೆ ಬೋವಿಗುರುಪೀಠದ ಸ್ವಾಮೀಜಿಯಿಂದ ತೀವ್ರ ವಿರೋಧ

Published : Aug 06, 2025, 07:50 PM ISTUpdated : Aug 06, 2025, 07:54 PM IST
inter reservation bhovishri

ಸಾರಾಂಶ

ಒಳಮೀಸಲಾತಿ ವರದಿಯನ್ನು ತರಾತುರಿಯಲ್ಲಿ ಅಂಗೀಕರಿಸದಂತೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಎಲ್ಲಾ ಸಮುದಾಯಗಳೊಂದಿಗೆ ಸಮಾಲೋಚನೆ ನಡೆಸಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. 

ಬಾಗಲಕೋಟೆ (ಆ.6): ಒಳಮೀಸಲಾತಿ ವರದಿಯ ಅಂಗೀಕಾರಕ್ಕೆ ಬೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ತರಾತುರಿಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೆ, ಎಲ್ಲಾ ಸಮುದಾಯಗಳೊಂದಿಗೆ ಸಮಾಲೋಚನೆ ನಡೆಸಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತರಾತುರಿಯಲ್ಲಿ ವರದಿಯನ್ನು ಜಾರಿಗೊಳಿಸಿದರೆ, ಕಾನೂನಾತ್ಮಕವಾಗಿ ಮತ್ತು ಸಾರ್ವಜನಿಕವಾಗಿ ಹೋರಾಟ ರೂಪಿಸಬೇಕಾಗುತ್ತದೆ. ಸಚಿವ ಸಂಪುಟದಲ್ಲಿ ಸುಧೀರ್ಘ ಚರ್ಚೆ ನಡೆಸಿ, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ವರದಿಯನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ.

ನಾಗಮೋಹನದಾಸ್ ಆಯೋಗದ ವರದಿ:

ಸುಪ್ರೀಂ ಕೋರ್ಟ್‌ನ ಒಳಮೀಸಲಾತಿ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನಾಗಮೋಹನದಾಸ್ ಆಯೋಗವನ್ನು ರಚಿಸಿ, ಎರಡು ತಿಂಗಳ ಕಾಲ ಸಮೀಕ್ಷೆ ನಡೆಸಿತ್ತು. ಈ ವರದಿಯನ್ನು ಸರ್ಕಾರ ನಿನ್ನೆ ಸ್ವೀಕರಿಸಿದ್ದು, ನಾಳೆ ಸಚಿವ ಸಂಪುಟದಲ್ಲಿ ಮಂಡಿಸಲಿದೆ. ಆದರೆ, ಈ ವರದಿಯನ್ನು ಅಧಿಕೃತ ಎಂದು ಪರಿಗಣಿಸಲು ಸ್ವಾಮೀಜಿ ನಿರಾಕರಿಸಿದ್ದಾರೆ. 'ವರದಿಯ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ತಿಳಿದಿದ್ದು, ಹಲವು ಸಮುದಾಯಗಳಿಗೆ ಅಸಮಾಧಾನವಿದೆ' ಎಂದು ಅವರು ಹೇಳಿದ್ದಾರೆ.

ತರಾತುರಿಯಲ್ಲಿ ಜಾರಿ ಮಾಡಿದರೆ ಎಚ್ಚರ:

101 ಜಾತಿಗಳಿಗೆ ಅನ್ಯಾಯವಾಗದಂತೆ ವೈಜ್ಞಾನಿಕವಾಗಿ ವರದಿ ತಯಾರಾಗಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು. ಯಾರದೋ ಒತ್ತಡಕ್ಕೆ ಒಳಗಾಗಿ ವರದಿಯನ್ನು ಸ್ವೀಕರಿಸಿದ್ದಾರೆ ಎಂಬ ಅನುಮಾನ ಜನರಲ್ಲಿ ಮೂಡಬಾರದು. ಸರ್ಕಾರ ತಕ್ಷಣ ವರದಿಯನ್ನು ಸಾರ್ವಜನಿಕರಿಗೆ ವಿತರಿಸಿ, ಆಯಾ ಸಮುದಾಯಗಳ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಆಗ್ರಹಿಸಿದ್ದಾರೆ. ಗದ್ದಲ-ಗಲಾಟೆಯಿಂದ ಸದನದಲ್ಲಿ ವರದಿಯನ್ನು ಅಂಗೀಕರಿಸದೆ, 1 ಕೋಟಿ 8 ಲಕ್ಷ ಪರಿಶಿಷ್ಟ ಜಾತಿಗಳ ಜನರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.

ಹಿಂದಿನ ಆಂದೋಲನದ ಉಲ್ಲೇಖ:

ಹಿಂದಿನ ಸರ್ಕಾರದ ಸದಾಶಿವ ವರದಿಯಲ್ಲಿ 3% ಮೀಸಲಾತಿ ಮತ್ತು ಬೋವಿ, ಬಂಜಾರ, ಕೊರಮ, ಕೊರಚ ಸಮುದಾಯಗಳಿಗೆ 4.5% ಮೀಸಲಾತಿ ಸೇರ್ಪಡೆಯಾಗಿತ್ತು. ಆದರೆ, ವೈಜ್ಞಾನಿಕ ಚರ್ಚೆಯಿಲ್ಲದೆ ಏಕಾಏಕಿ ತೀರ್ಮಾನ ಕೈಗೊಂಡಿದ್ದಕ್ಕೆ ಬೋವಿ, ಬಂಜಾರ, ಕೊರಮ, ಕೊರಚ ಬಚಾವೊ ಆಂದೋಲನ ನಡೆದಿತ್ತು. ಈ ಆಂದೋಲನದಿಂದ ಪ್ರಸ್ತುತ ಸರ್ಕಾರಕ್ಕೆ ಶಕ್ತಿ ದೊರೆತಿದ್ದು, ಈಗಿನ ಸರ್ಕಾರ ಇದರ ಲಾಭ ಪಡೆದುಕೊಂಡಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

2011ರ ಜನಗಣತಿಯ ಆಧಾರದ ಬದಲು, ಇಂದಿನ ಜನಗಣತಿಯ ಅಂಕಿಅಂಶಗಳನ್ನು ಗಮನಿಸಿ, ಕಾದು ಪ್ರಮಾಣೀಕರಿಸಿ, ಕೇಂದ್ರದ ವರದಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸ್ವಾಮೀಜಿ ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!