ರೋಹಿಣಿ ಸಿಂಧೂರಿ ನಿಯೋಜನೆ ರದ್ದು ಕೋರಿ ಹೈಕೋರ್ಟ್‌ಗೆ ಶರತ್‌ ಅರ್ಜಿ

By Kannadaprabha NewsFirst Published Jun 5, 2021, 10:42 AM IST
Highlights

* ಹೈಕೋರ್ಟ್‌ ಮೆಟ್ಟಿಲೇರಿದ ಐಎಎಸ್‌ ಅಧಿಕಾರಿ ಬಿ.ಶರತ್‌
* ರೋಹಿಣಿ ಸಿಂಧೂರಿ ನೇಮಕ ರದ್ದುಗೊಳಿಸುವಂತೆ ಮನವಿ 
* ವಿಚಾರಣೆ ಜೂ.7ಕ್ಕೆ ಮುಂದೂಡಿದ ನ್ಯಾಯಪೀಠ

ಬೆಂಗಳೂರು(ಜೂ.05): ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಐಎಎಸ್‌ ಅಧಿಕಾರಿ ಬಿ.ಶರತ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇದೇ ವೇಳೆ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ನಿಯೋಜಿಸಿದ ಆದೇಶವನ್ನು ಮರು ಪರಿಶೀಲಿಸಲು ಮತ್ತು ಅಧಿಕಾರಿಗಳ ವರ್ಗಾವಣೆಗೆ ಮಂಡಳಿ ರಚಿಸಲು ಸೂಚಿಸಿ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಎರಡು ಅರ್ಜಿಗಳ ಕುರಿತು ಶುಕ್ರವಾರ ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿತು.

ಡೀಸಿ VS ಆಯುಕ್ತೆ ಗುದ್ದಾಟ: ಸಿಎಸ್ ವರದಿ ಆಧರಿಸಿ ಸಿಎಂ ಮುಂದಿನ ಕ್ರಮ..?

ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ನಿಯೋಜಿಸಿಲು ಬಿ. ಶರತ್‌ ಅವರನ್ನು ವರ್ಗಾವಣೆ ಮಾಡಲಾಗಿತ್ತು. 2020ರ ಆಗಸ್ಟ್‌ನಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಿ.ಶರತ್‌ ಅವರನ್ನು ಸೆಪ್ಟೆಂಬರ್‌ ತಿಂಗಳಲ್ಲಿ ವರ್ಗಾವಣೆ ಮಾಡಿತ್ತು. ಸರ್ಕಾರದ ಈ ಕ್ರಮ ಪ್ರಶ್ನಿಸಿ ಶರತ್‌ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿ ಕುರಿತ ವಿಚಾರಣೆ ನಡೆಸಿದ್ದ ಸಿಎಟಿ, ಬಿ.ಶರತ್‌ ಅವರ ವರ್ಗಾವಣೆ ವಿಚಾರವಾಗಿ ಸಕ್ಷಮ ಪ್ರಾಧಿಕಾರವೇ ನಿರ್ಣಯಿಸಬೇಕು ಎಂದು ಸೂಚಿಸಿ, ಪ್ರಕರಣವನ್ನು ಸರ್ಕಾರಕ್ಕೆ ವರ್ಗಾಯಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೆಟ್ಟಿಲೇರಿರುವ ಐಎಎಸ್‌ ಅಧಿಕಾರಿ ಬಿ.ಶರತ್‌, ಸಿಎಟಿ ಆದೇಶ ಮತ್ತು ರೋಹಿಣಿ ಸಿಂಧೂರಿ ನೇಮಕ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ, ಇದೇ ವೇಳೆ ವರ್ಗಾವಣೆ ಆದೇಶ ಮರು ಪರಿಶೀಲಿಸಬೇಕು ಎಂದು ಸಿಎಟಿ ನೀಡಿದ ಆದೇಶವನ್ನು ಪ್ರಶ್ನಿಸಿರುವ ಸರ್ಕಾರ, ವರ್ಗಾವಣೆ ಆದೇಶ ಮರು ಪರಿಶೀಲಿಸಲು ಅವಕಾಶವಿಲ್ಲ ಎಂದು ವಾದಿಸಿದೆ.
 

click me!