
ಬೆಂಗಳೂರು (ಆ.28): ದೇಶದಲ್ಲಿ ಸುಗಮ ರೈಲು ಸಂಚಾರ ಮತ್ತು ಸರಕು ಸಾಗಣೆಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ 7 ಅತಿಸಾಂದ್ರತೆಯ (High Density) ಚತುಷ್ಪಥ (4-Lane Track) ಮೇಲ್ದರ್ಜೆಗೇರಿಸುವ ರೈಲ್ವೆ ಯೋಜನೆಯಲ್ಲಿ ಕರ್ನಾಟಕದ ಒಂದೇ ಒಂದು ಮಾರ್ಗವನ್ನೂ ಸೇರಿಸದೆ ಇರುವುದು ತೀವ್ರ ಅನ್ಯಾಯದ ಪರಮಾವಧಿ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ (M.B. Patil) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಈ ತಾರತಮ್ಯದ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಪ್ರಧಾನಿ ಹಾಗೂ ಕೇಂದ್ರಕ್ಕೆ ಪತ್ರ ಬರೆಸುವುದರ ಜತೆಗೆ, ಖುದ್ದಾಗಿ ನಾವೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ದೆಹಲಿ-ಹೌರಾ, ಹೌರಾ-ಚೆನ್ನೈ, ಚೆನ್ನೈ-ಮುಂಬೈ, ಮುಂಬೈ-ದೆಹಲಿ, ದೆಹಲಿ-ಚೆನ್ನೈ, ಮುಂಬೈ-ಹೌರಾ ಮತ್ತು ದೆಹಲಿ-ಗುವಾಹಟಿ ಸೇರಿದಂತೆ ಒಟ್ಟು 7 ರೈಲ್ವೆ ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿದ್ದಾರೆ. ಆದರೆ ಕರ್ನಾಟಕದ ಪ್ರಮುಖ ಮಾರ್ಗಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ.
ರಾಜ್ಯದಲ್ಲಿಯೂ ವಿಪರೀತ ಸಂಚಾರ ದಟ್ಟಣೆ ಇರುವ ಈ ಕೆಳಗಿನ ಮಾರ್ಗಗಳನ್ನು ತಕ್ಷಣವೇ ಚತುಷ್ಪಥ ಮಾರ್ಗಗಳನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ:
'ರಾಜ್ಯದಲ್ಲಿ ರೈಲ್ವೆ ಯೋಜನೆಗಳು ವೇಗವಾಗಿ ಜಾರಿಯಾಗಲಿ ಎಂಬ ಉದ್ದೇಶದಿಂದ ನಾವು 50:50 ವೆಚ್ಚ ಹಂಚಿಕೆ ಸೂತ್ರದಲ್ಲಿ ಕೇಂದ್ರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಇಂತಹ ಸಹಕಾರವಿಲ್ಲ. ಆದರೂ ಕೇಂದ್ರ ಸರ್ಕಾರವು ತಮಿಳುನಾಡು, ಆಂಧ್ರಪ್ರದೇಶಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಕರ್ನಾಟಕಕ್ಕೆ ನೀಡುತ್ತಿಲ್ಲ. ಕೇಂದ್ರದ ಈ ಮಲತಾಯಿ ಧೋರಣೆಯಿಂದಾಗಿ ನಮ್ಮ ಹೆದ್ದಾರಿಗಳು ಹಾಗೂ ರಸ್ತೆಗಳ ಮೇಲೆ ವಾಹನಗಳ ಮಿತಿಮೀರಿದ ಒತ್ತಡ ಬೀಳುತ್ತಿದೆ' ಎಂದು ಪಾಟೀಲ ದೂರಿದ್ದಾರೆ.
ರಾಜ್ಯದಲ್ಲಿ 330 ಕಿ.ಮೀ ಉದ್ದದ ಕರಾವಳಿ ತೀರವಿದ್ದರೂ, ಬಂದರು ಪಟ್ಟಣಗಳಾದ ಮಂಗಳೂರು, ಭಟ್ಕಳ, ಹೊನ್ನಾವರ, ಕುಂದಾಪುರ, ಕಾರವಾರಗಳಿಂದ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ ಅಥವಾ ಶಿವಮೊಗ್ಗಕ್ಕೆ ಸಮರ್ಪಕ ರೈಲ್ವೆ ಸಂಪರ್ಕ ಕಲ್ಪಿಸಿಲ್ಲ. ಇದಲ್ಲದೆ, ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲುಗಳು ರಾಜ್ಯದೊಳಗೆ 100 ಕಿ.ಮೀ ಕೂಡ ಸಂಚರಿಸುವುದಿಲ್ಲ. ಇದರಿಂದ ನೆರೆ ರಾಜ್ಯಗಳಿಗಷ್ಟೇ ಲಾಭ. ಬದಲಾಗಿ ಬೆಂಗಳೂರು – ಹುಬ್ಬಳ್ಳಿ – ಪುಣೆ ಮಾರ್ಗದಲ್ಲಿ ಹೈಸ್ಪೀಡ್ ರೈಲು ಮಾರ್ಗ ನಿರ್ಮಿಸಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ.
'ಬೆಂಗಳೂರು ಜಾಗತಿಕ ಮಟ್ಟದಲ್ಲಿ ಐಟಿ, ನವೋದ್ಯಮ, ಆರ್&ಡಿ, ಸೆಮಿಕಂಡಕ್ಟರ್ ಮತ್ತು ಹೂಡಿಕೆಯ ಪ್ರಮುಖ ಕೇಂದ್ರವಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರವೇ ಸ್ವಯಂಪ್ರೇರಿತವಾಗಿ ರಾಜ್ಯಕ್ಕೆ ಬೃಹತ್ ಯೋಜನೆಗಳನ್ನು ನೀಡಬೇಕಿತ್ತು. ಈ ಅನ್ಯಾಯದ ವಿರುದ್ಧ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳು ಮೌನ ಮುರಿದು ಧ್ವನಿ ಎತ್ತಬೇಕು. ರಾಜ್ಯದ ಹಿತಾಸಕ್ತಿ ಮತ್ತು ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು' ಎಂದು ಎಂ.ಬಿ. ಪಾಟೀಲ ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ