ಉತ್ತಮ ಆರೋಗ್ಯಕ್ಕೆ ಆಯುರ್ವೇದ ಸಹಕಾರಿ

By Kannadaprabha NewsFirst Published Jul 29, 2020, 9:06 AM IST
Highlights

ಆಯುರ್ವೇದ ಭಾರತೀಯ ಶ್ರೇಷ್ಠ ಪರಂಪರೆಯ ಕೊಡುಗೆಯಾಗಿದೆ. ಆಯುರ್ವೇದದ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಇದಕ್ಕೆ ಕಾರಣ ಸರಿಯಾದ ಜ್ಞಾನ ಇಲ್ಲದಿರುವುದು. ಭಾರತೀಯ ಶ್ರೇಷ್ಠ ಇತಿಹಾಸ, ಜ್ಞಾನ ಪರಂಪರೆ, ಆಯುರ್ವೇದ ಕುರಿತು ಎಲ್ಲರಿಗೂ ಸೂಕ್ತ ತಿಳಿವಳಿಕೆ ಮೂಡಿಸುವ ಅವಶ್ಯಕತೆ ಇದೆ ಎಂದು ಕಲ್ಲಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿನಯಾನಂದ ಗುರೂಜಿ ಹೇಳಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಶಿವಮೊಗ್ಗ(ಜು.29): ನಮ್ಮ ಬದುಕು ಆರೋಗ್ಯಯುತ ಮತ್ತು ಉತ್ತಮವಾಗಿ ರೂಪಿಸಿಕೊಳ್ಳಲು ಆಯುರ್ವೇದ ಅತ್ಯಂತ ಸಹಕಾರಿ ಎಂದು ಕಲ್ಲಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿನಯಾನಂದ ಗುರೂಜಿ ಹೇಳಿದರು. ನಗರದ ಬಸವಕೇಂದ್ರದಲ್ಲಿ ಟಿಎಂಎಇಎಸ್‌ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರೂಜಿ ಮಾತನಾಡಿದರು.

ಆಯುರ್ವೇದ ಭಾರತೀಯ ಶ್ರೇಷ್ಠ ಪರಂಪರೆಯ ಕೊಡುಗೆಯಾಗಿದೆ. ಆಯುರ್ವೇದದ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಇದಕ್ಕೆ ಕಾರಣ ಸರಿಯಾದ ಜ್ಞಾನ ಇಲ್ಲದಿರುವುದು. ಭಾರತೀಯ ಶ್ರೇಷ್ಠ ಇತಿಹಾಸ, ಜ್ಞಾನ ಪರಂಪರೆ, ಆಯುರ್ವೇದ ಕುರಿತು ಎಲ್ಲರಿಗೂ ಸೂಕ್ತ ತಿಳಿವಳಿಕೆ ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಆಧುನಿಕ ಯುಗದಲ್ಲಿ ಬದಲಾದ ಆಹಾರ ಶೈಲಿ ಪದ್ದತಿಗಳೇ ವಿವಿಧ ರೀತಿ ರೋಗ ಬರುವುದಕ್ಕೆ ಕಾರಣ. ಆಯುರ್ವೇದ ಪದ್ಧತಿಯಲ್ಲಿ ಎಲ್ಲ ರೀತಿಯ ಕಾಯಿಲೆಗಳಿಗೂ ಔಷಧ ಲಭ್ಯವಿದೆ. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಆಯುರ್ವೇದಲ್ಲಿ ಇರುವ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿದುಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ನುಡಿದರು.

ಮನುಷ್ಯನಲ್ಲಿ ರೋಗ ನಿರೋಧಕ ಅತ್ಯಂತ ಅವಶ್ಯಕ. ವಿಜ್ಞಾನದಲ್ಲಿ ಏನೇ ಔಷಧಗಳನ್ನು ಕಂಡು ಹಿಡಿದಿದ್ದರೂ ಅವೆಲ್ಲಕ್ಕೂ ಒಂದಲ್ಲಾ ಒಂದು ರೀತಿಯಲ್ಲಿ ಆಯುರ್ವೇದವೇ ಮೂಲ ಜ್ಞಾನವಾಗಿದೆ. ಆಯುರ್ವೇದವೇ ಎಲ್ಲದಕ್ಕೂ ಆಧಾರ ಎಂದು ಅಭಿಪ್ರಾಯಿಸಿದರು.

ಕೊರೋನಾ ಸೋಂಕು ಕಾಣಿಸಿಕೊಂಡಾಗ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಬೇಕೆಂದು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಿಕೊಂಡೆ. ನಂತರ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಸಚಿವ ಕೆ.ಎಸ್‌. ಈಶ್ವರಪ್ಪ ಮತ್ತು ವಿಧಾನಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ ಅವರು ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೇದಿಕ್‌ ಕಿಟ್‌ ಬಿಡುಗಡೆ ಮಾಡಿದರು.

ಪ್ರತಿ ಪ್ರಜೆಗೂ ಉಚಿತ ಆಯುರ್ವೇದ ಔಷಧ: ಸಚಿವ ಈಶ್ವರಪ್ಪ

ಟಿಎಂಎಇಎಸ್‌ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಎ.ಹಿರೇಮಠ ಮಾತನಾಡಿ, ಇತ್ತೀಚೀನ ದಿನಗಳಲ್ಲಿ ಕರೊನಾ ಸೋಂಕು ಎಲ್ಲೆಡೆಯು ವ್ಯಾಪಿಸಿದೆ. ಮನುಷ್ಯನಲ್ಲಿನ ರೋಗ ನಿರೋಧಕ ಶಕ್ತಿಯು ಕೊರೋನಾ ಸೋಂಕು ತಗುಲು ಕಾರಣ ಆಗಿದೆ. ಆದ್ದರಿಂದ ಕಾಲೇಜಿನ ನೇತೃತ್ವದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧದ ಕಿಟ್‌ ಸಿದ್ಧಪಡಿಸಲಾಯಿತು. ಎಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ತೆಗೆದುಕೊಳ್ಳಬೇಕು. ಇದರಿಂದ ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಟಿಎಂಎಇಎಸ್‌ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಂತೋಷ್‌, ಮಾಜಿ ಮೇಯರ್‌ ಲತಾ ಗಣೇಶ್‌, ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್‌, ಡಾ. ವಿನಯ್‌, ಡಾ. ಕೇಶವದತ್ತ, ಡಾ. ರಂಜಿನಿ, ನಳಿನಿ, ಯಶೋಧಾ ಇತರರು ಇದ್ದರು.

ಶಿವಮೊಗ್ಗ ಬಸವಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ ಮತ್ತು ವಿಪ ಸದಸ್ಯ ಎಸ್‌.ರುದ್ರೇಗೌಡ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೇದಿಕ್‌ ಕಿಟ್‌ ಬಿಡುಗಡೆ ಮಾಡಿದರು.
 

click me!