
ಬೆಂಗಳೂರು (ಮೇ 13): ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಿರಿಯ ಪ್ರಚಾರಕರು ಹಾಗೂ ಕರ್ನಾಟಕದಲ್ಲಿ ಸಂಘದ ತಳಹದಿಯನ್ನು ಗಟ್ಟಿಗೊಳಿಸಿದ ಶಿಸ್ತಿನ ಸಿಪಾಯಿ ಮೈ.ಚ. ಜಯದೇವ (ಮೈಸೂರು ಚನ್ನಬಸಪ್ಪ ಜಯದೇವ) ಅವರ ಜೀವನ ಪಯಣವನ್ನು ಸಾರುವ ‘ಅವಿಶ್ರಾಂತ ಧ್ಯೇಯಜೀವಿ‘ ಪುಸ್ತಕ ಲೋಕಾರ್ಪಣ ಕಾರ್ಯಕ್ರಮವನ್ನು ಮೇ 14 ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವಿವರ:
ರಾಷ್ಟ್ರೋತ್ಥಾನ ಪರಿಷತ್ ಆಯೋಜಿಸಿರುವ ಈ ವಿಶೇಷ ಸಮಾರಂಭವು ಮೇ 14, ಗುರುವಾರ ಸಂಜೆ 6.30ಕ್ಕೆ ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ (ಟೌನ್‌ಹಾಲ್) ನಡೆಯಲಿದೆ. ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಪುಸ್ತಕವನ್ನು ಲೋಕಾರ್ಪಣೆ ಮಾಡಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಆರ್‌ಎಸ್‌ಎಸ್‌ನ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಲೇಖಕರಾದ ಡಾ. ಬಾಬು ಕೃಷ್ಣಮೂರ್ತಿ, ಶ್ರೀ ಬೇಳೂರು ಸುದರ್ಶನ ಹಾಗೂ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕುಮಾರ್ ಉಪಸ್ಥಿತರಿರಲಿದ್ದಾರೆ.
ಮೈ.ಚ. ಜಯದೇವ ಅವರು 1965ರ ಆರಂಭದ ದಿನಗಳಿಂದಲೇ ರಾಷ್ಟ್ರೋತ್ಥಾನ ಪರಿಷತ್ತನ್ನು ಕಟ್ಟಿ ಬೆಳೆಸಿದವರು. ಸಂಘಟನಾ ಚತುರರಾಗಿದ್ದ ಇವರು, 'ಒಂದು ಜೀವನ, ಒಂದು ಧೈಯ' ಎಂಬ ಸೂತ್ರಕ್ಕೆ ಬದ್ಧರಾಗಿದ್ದವರು. ಅಸಾಮಾನ್ಯ ದಕ್ಷತೆ ಮತ್ತು ದೂರದರ್ಶಿತ್ವದ ಮೂಲಕ ರಾಷ್ಟ್ರೋತ್ಥಾನ ಪರಿಷತ್ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸ್ಥಿರವಾದ ಹೆಜ್ಜೆಗಳನ್ನು ಇಡಲು ಕಾರಣಕರ್ತರಾದರು.
ಐದು ದಶಕಗಳಿಗೂ ಹೆಚ್ಚು ಕಾಲ ಸಂಘದ ವಿವಿಧ ಜವಾಬ್ದಾರಿಗಳನ್ನು (ಮಹಾನಗರ ಕಾರ್ಯವಾಹದಿಂದ ಅಖಿಲ ಭಾರತೀಯ ಕಾರ್ಯಕಾರಿಣಿಯವರೆಗೆ) ನಿರ್ವಹಿಸಿದ್ದ ಜಯದೇವ ಅವರು, ಕೇವಲ ಸಂಘಟನೆಯಷ್ಟೇ ಅಲ್ಲದೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗಳಿಗೆ ದಾರಿದೀಪವಾಗಿದ್ದರು. ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅಮೃತ ಶಿಶುನಿವಾಸ ಮತ್ತು ಅಬಲಾಶ್ರಮದಂತಹ ಸಂಸ್ಥೆಗಳು ಸ್ವತಂತ್ರವಾಗಿ ಬೆಳೆಯಲು ಅವರು ತೆರೆಯ ಹಿಂದೆ ನಿಂತು ಮಾರ್ಗದರ್ಶನ ನೀಡಿದ್ದರು.
ಮೈ.ಚ. ಜಯದೇವ ಅವರ ಈ ಎಲ್ಲ ಆದರ್ಶಮಯ ಬದುಕು ಮತ್ತು ಹಿರಿಯರು ಹಂಚಿಕೊಂಡ ನೆನಪುಗಳ ಸಂಕಲನವೇ ಈ ‘ಅವಿಶ್ರಾಂತ ಧ್ಯೇಯಜೀವಿ‘ ಪುಸ್ತಕ. ಸಮಾಜಮುಖಿ ಕಾರ್ಯಕರ್ತರಿಗೆ ಮತ್ತು ಸಂಘದ ಕಾರ್ಯಶೈಲಿಯನ್ನು ಅರಿಯಬಯಸುವವರಿಗೆ ಈ ಪುಸ್ತಕ ಅತ್ಯಮೂಲ್ಯ ಆಕರ ಗ್ರಂಥವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ