ವಾಲ್ಮೀಕಿ ನಿಗಮ ಹಗರಣ: ಬಿಜೆಪಿ ಕಾಲದ ಲೆಕ್ಕ ಶೋಧ

By Kannadaprabha NewsFirst Published Jul 4, 2024, 5:30 AM IST
Highlights

ಬಿಜೆಪಿ ಸರ್ಕಾರದ ಅವಧಿಯಲ್ಲೂ ವಾಲ್ಮೀಕಿ ನಿಗಮದ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅದಕ್ಕೆ ಸೂಕ್ತ ದಾಖಲೆಗಳೊಂದಿಗೆ ವರದಿ ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದೆ. 
 

ಬೆಂಗಳೂರು(ಜು.04): ಹಿಂದಿನ ಸರ್ಕಾರದ ಅವಧಿಯಲ್ಲೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆಯಾಗಿದೆ ಎಂಬ ಮಾಹಿತಿಯ ಸತ್ಯಾಸತ್ಯತೆ ಅರಿಯುವ ಸಲುವಾಗಿ ಕಳೆದ 10 ವರ್ಷಗಳಲ್ಲಿ ನಿಗಮದ ಅನುದಾನ ಬಳಕೆ ಕುರಿತಂತೆ ಮಾಹಿತಿ ನೀಡುವಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಅವರಿಗೆ ಸೂಚಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲೂ ವಾಲ್ಮೀಕಿ ನಿಗಮದ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅದಕ್ಕೆ ಸೂಕ್ತ ದಾಖಲೆಗಳೊಂದಿಗೆ ವರದಿ ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ ಇತ್ತೀಚೆಗೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಹಾಗೂ ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಈ ವೇಳೆ ಕಳೆದ 10 ವರ್ಷಗಳಲ್ಲಿ ನಿಗಮದ ಅನುದಾನ ಬಿಡುಗಡೆ, ಆರ್ಥಿಕ ಮತ್ತು ಭೌತಿಕ ಪ್ರಗತಿಯ ವಿವರ ನೀಡುವಂತೆ ಸೂಚಿಸಿದ್ದಾರೆ.

Latest Videos

ವಾಲ್ಮೀಕಿ ನಿಗಮ ಹಗರಣದ ತನಿಖೆಗೆ ಶೀಘ್ರವೇ ಸಿಬಿಐ ಎಂಟ್ರಿ; ರಾಜ್ಯದ ಮತ್ತಷ್ಟು ಪ್ರಭಾವಿಗಳಿಗೆ ಜೈಲು ಸೇರುವ ಭೀತಿ

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ದದ್ದಲ್‌, ನಿಗಮದ ಇತ್ತೀಚಿನ ಬೆಳವಣಿಗೆಗಳು ಹಾಗೂ ಕಾರ್ಯವೈಖರಿ ಕುರಿತಂತೆ ತಿಳಿಯಲು ಕಳೆದ ಜೂ.26ರಂದು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಈ ವೇಳೆ ಕಳೆದ 10 ವರ್ಷಗಳಲ್ಲಿ ನಿಗಮದಿಂದ ಬಿಡುಗಡೆಯಾಗಿರುವ ಅನುದಾನ ಯಾವ್ಯಾವ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಬಗ್ಗೆ ಹಾಗೂ ಫಲಾನುಭವಿಗಳ ಪಟ್ಟಿಗಳನ್ನು ನೀಡುವಂತೆ ಸೂಚಿಸಲಾಗಿದೆ. ಎಲ್ಲ 31 ಜಿಲ್ಲೆಗಳಿಗೆ ಬಿಡುಗಡೆಯಾಗಿರುವ ಅನುದಾನದ ಮಾಹಿತಿ ಕೇಳಿದ್ದೇವೆ. ಈ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದರು.

ಸದ್ಯ ಆಗಿರುವ ಪ್ರಕರಣದಂತೆಯೇ ಹಿಂದೆಯೂ ಅಕ್ರಮ ನಡೆದಿದೆ ಎಂಬ ಅನುಮಾನವಿದೆ. ಈ ಬಗ್ಗೆ ಮಾಹಿತಿಯಿದ್ದು, ಅದರ ಸತ್ಯಾಸತ್ಯತೆ ತಿಳಿದುಕೊಳ್ಳಲು ಕಳೆದ 10 ವರ್ಷಗಳ ಮಾಹಿತಿ ಪಡೆಯಲಾಗುತ್ತಿದೆ. ಈಗಾಗಲೇ ಸಿಬಿಐ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಉಳಿದ ದಾಖಲೆಗಳಲ್ಲಿಯೇ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ವಾಲ್ಮೀಕಿ ನಿಗಮ ಹಗರಣ ಇನ್ನೊಬ್ಬ ಶಾಸಕನ ಕೊರಳಿಗೂ ಉರುಳು ಪಕ್ಕಾ? ಕೊಟ್ಟವರು ಯಾರು.? ಪಡೆದವರು ಯಾರು..?

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮಗೂ ಪಾಲು ಸಿಕ್ಕಿದೆ ಎಂಬ ಆರೋಪದ ಬಗ್ಗೆ ಉತ್ತರಿಸಿದ ಬಸನಗೌಡ ದದ್ದಲ್‌, ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಿಂದ ತಿಳಿದಿದ್ದೇನೆ. ಅವರು ಏನೇ ಹೇಳಿಕೆ ನೀಡಿದರೂ, ಅದು ಸತ್ಯವಾಗುವುದಿಲ್ಲ. ಅವರು ಹೇಳಿರುವ ಹೆಸರಿನ ಯಾವುದೇ ಆಪ್ತ ಸಹಾಯಕರು ನನ್ನ ಬಳಿ ಕೆಲಸ ಮಾಡುತ್ತಿಲ್ಲ. ಅಲ್ಲದೆ ಅವರು ಎಸ್‌ಐಟಿ ಮುಂದೆ ಹೇಳಿರುವ ವ್ಯಕ್ತಿಗಳಿಗೆ ನೋಟಿಸ್‌ ನೀಡಿ ತನಿಖೆ ನಡೆಸಲಿ ಎಂದು ತಿಳಿಸಿದರು.

ನನಗೆ ಹಗರಣದ ಬಗ್ಗೆ, ಹೊಸ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಬಗ್ಗೆ ಈ ಹಿಂದೆಯೂ ಹೇಳಿದ್ದೇನೆ. ಎಸ್‌ಐಟಿ ತನಿಖೆಯಲ್ಲಿ ಎಲ್ಲ ರೀತಿಯ ಸತ್ಯ ಹೊರಬರುತ್ತದೆ. ಎಸ್‌ಐಟಿ, ಸಿಬಿಐ ಸೇರಿ ಯಾವುದೇ ಸಂಸ್ಥೆ ನನ್ನನ್ನು ಕರೆದರೂ ಹೋಗಿ ಮಾಹಿತಿ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

click me!