ಶಾಸಕರೇ ಕಪ್ಪು ಜಾಕೆಟ್‌ ಹಾಕ್ಯಾರಾ, ಏನ್ಮಾಡ್ಲಿ ಸಾರ್‌?: ತಡಿಬ್ಯಾಡಾ.. ಎಂದ ಅಧಿಕಾರಿ!

Published : May 05, 2025, 11:56 AM IST
ಶಾಸಕರೇ ಕಪ್ಪು ಜಾಕೆಟ್‌ ಹಾಕ್ಯಾರಾ, ಏನ್ಮಾಡ್ಲಿ ಸಾರ್‌?: ತಡಿಬ್ಯಾಡಾ.. ಎಂದ ಅಧಿಕಾರಿ!

ಸಾರಾಂಶ

- ಸರ್ಕಾರಿ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಬಟ್ಟೆ ಮೇಲೆ ಪೊಲೀಸರ ಹದ್ದಿನ ಕಣ್ಣು । ಸಿದ್ದರಾಮಯ್ಯ ಒಂದಡಿ ಜಾಗ ಒತ್ತುವರಿ ಮಾಡಿದ್ದೇಕೆ?

- ಸರ್ಕಾರಿ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಬಟ್ಟೆ ಮೇಲೆ ಪೊಲೀಸರ ಹದ್ದಿನ ಕಣ್ಣು । ಸಿದ್ದರಾಮಯ್ಯ ಒಂದಡಿ ಜಾಗ ಒತ್ತುವರಿ ಮಾಡಿದ್ದೇಕೆ?

ಒಳಗೆ ಹೋದ ತಕ್ಷಣ ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರು ಮಾತ್ರ ಕಪ್ಪು ಬಣ್ಣದ ಜಾಕೆಟ್‌ ಹಾಕ್ಕೊಂಡು ಬಂದಿದ್ದ ಶಾಸಕರನ್ನು ದುರುಗುಟ್ಟಿ ನೋಡಿದರಲ್ಲದೆ, ಅಲ್ಲೇ ನಿಂತಿದ್ದ ಮತ್ತೊಬ್ಬ ಪೊಲೀಸಪ್ಪನಿಗೆ ಶಾಸಕರು ಕಪ್ಪು ಬಣ್ಣದ ಬಟ್ಟೆ ಹಾಕ್ಕೊಂಡು ಬಂದ್ರೆ ನಡಿಯುತ್ತಾ ಸಾರ್‌... ಎಂದು ಪ್ರಶ್ನಿಸಿದ್ದೂ ಆಯ್ತು. ಅದಕ್ಕೆ ಉತ್ತರ ಹೊಳೆಯದೆ ಆ ಪೊಲೀಸಪ್ಪ ಜನರ ನಡುವಿನಿಂದ ಸ್ವಲ್ಪ ದೂರ ಹೋಗಿ ನಿಂತಿದ್ದು ಅಷ್ಟೇ ಸತ್ಯ.

ಸಾಹೇಬರೇ, ಶಾಸಕರೇ ಕರಿ ಬಣ್ಣದ ಕೋಟು (ಹಾಫ್‌ ಜಾಕೆಟ್‌) ಹಾಕ್ಕೊಂಡು ಬಂದಿದ್ದಾರೆ, ಏನ್ಮಾಡ್ಲಿ, ವಾಪಸ್‌ ಕಳಿಸಲೇನು?

ಇದು ಹುಬ್ಬಳ್ಳಿಯಲ್ಲಿ ಕಳೆದ ಮೂರು ದಿನದ ಹಿಂದೆಯಷ್ಟೇ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಪೊಲೀಸ್‌ ಪೇದೆಯೊಬ್ಬ ಹಿರಿಯ ಅಧಿಕಾರಿಗಳಿಗೆ ಕೇಳಿದ ಮಾತು.

ವಿಷಯಾ ಏನಪ್ಪ ಅಂದ್ರೆ, ಕಳೆದ ವಾರ ಬೆಳಗಾವಿಯಲ್ಲಿ ಕಾಂಗ್ರೆಸ್‌ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ನುಗ್ಗಿ ಕಪ್ಪು ಬಟ್ಟೆ ಪ್ರದರ್ಶಿಸಿದ್ದರು. ಇದಕ್ಕೆ ಸಿದ್ದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಿಟ್ಟಿನಲ್ಲೇ ಪೊಲೀಸ್‌ ಅಧಿಕಾರಿ ಮೇಲೆ ಕೈ ಮಾಡಲೂ ಮುಂದಾಗಿದ್ದರು. ಇದಕ್ಕೆ ಸಾಕಷ್ಟು ಆಕ್ಷೇಪವೂ ಉಂಟಾಗಿತ್ತು.

ಇದನ್ನೂ ಓದಿ: ಚಿನ್ನಾಭರಣ ಜೇಬಲ್ಲಿಟ್ಟು ಗುತ್ತಿಗೆದಾರರು ಪ್ರತಿಭಟಿಸಿದ್ದೇಕೆ? ಭ್ರಷ್ಟ ರಾಜಕಾರಣಿಗಳಿಗೆ ರಾತ್ರಿ ಹೊತ್ತು ನಿದ್ರೆ ಬರುತ್ತಾ?!

ಇಲ್ಲಿ ವಿಷಯ ಅದಲ್ಲ. ಅದಾಗಿ ಎರಡ್ಮೂರು ದಿನದಲ್ಲೇ ಹುಬ್ಬಳ್ಳಿಯಲ್ಲಿ ಪ್ರತಿಭಟನಾ ಸಮಾವೇಶವನ್ನು ‘ಕೈ’ಪಡೆ ಏರ್ಪಡಿಸಿತ್ತು. ಹೀಗಾಗಿ ಅಲ್ಲಿನ ಘಟನೆ ಇಲ್ಲಿ ಎಲ್ಲಿ ಮರುಕಳಿಸುತ್ತದೆಯೋ ಎಂಬ ಆತಂಕ ಪೊಲೀಸ್‌ ಇಲಾಖೆಯದ್ದು. ಅದಕ್ಕಾಗಿ ಭಾರೀ ಸರ್ಪಗಾವಲು ಆಯೋಜಿಸಿತ್ತು. ಕೈ ಕಾರ್ಯಕರ್ತರಷ್ಟೇ ಸಂಖ್ಯೆಯಲ್ಲಿ ಪೊಲೀಸ್‌ ಸಿಬ್ಬಂದಿ ಕೂಡ ಇತ್ತು.

ಪೊಲೀಸ್‌ ಅಧಿಕಾರಿಗಳು ಯಾರೊಬ್ಬರೂ ಕಪ್ಪು ಬಟ್ಟೆ ಧರಿಸಿಕೊಂಡು ಬರಬಾರದು ಎಂಬ ಅಘೋಷಿತ ಫರ್ಮಾನು ಹೊರಡಿಸಿದ್ದರು. ಅಲ್ಲದೆ, ಸಮಾವೇಶಕ್ಕೆ ಬರುತ್ತಿದ್ದ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿಯೇ ಒಳ ಕಳುಹಿಸುತ್ತಿದ್ದರು. ಕಪ್ಪು ಬಣ್ಣದ ಬಟ್ಟೆ ಹಾಕಿಕೊಂಡು ಬಂದವರಿಗೆ ಒಳಗೆ ಹೋಗಲು ಅವಕಾಶವನ್ನೇ ನೀಡದೆ ವಾಪಸ್‌ ಕಳುಹಿಸುತ್ತಿದ್ದರು.

ಈ ನಡುವೆ ವಿವಿಐಪಿಗಳು ತೆರಳುವ ಗೇಟ್‌ ಬಳಿಯೂ ಇದೇ ರೀತಿ ತಪಾಸಣೆ ನಡೆದಿತ್ತು. ಆಗ ಒಂದಿಬ್ಬರು ಶಾಸಕರು ಕಪ್ಪು ಬಣ್ಣದ ಹಾಫ್‌ ಜಾಕೆಟ್‌ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿಕೊಂಡು ಬರುತ್ತಿದ್ದರು. ಅವರು ಗೇಟ್‌ನೊಳಗೆ ಬರಲು ಸ್ವಲ್ಪ ದೂರ ಇದ್ದಾಗಲೇ ತಪಾಸಣೆ ಮಾಡುತ್ತಿದ್ದ ಪೇದೆಗೆ ಇವರನ್ನು ವಾಪಸ್‌ ಕಳುಹಿಸಬೇಕೋ? ಅಥವಾ ಒಳಗೆ ಬಿಡಬೇಕೋ ಎಂಬ ಗೊಂದಲ ಶುರುವಾಯ್ತು. ಒಳಗೆ ಬಿಟ್ಟರೆ ಅಧಿಕಾರಿ ಬೈತಾರೆ, ಒಳ ಬಿಡದಿದ್ದಲ್ಲಿ ಶಾಸಕರು ತರಾಟೆಗೆ ತೆಗೆದುಕೊಳ್ತಾರೆ. ಕೊನೆಗೆ ಯಾಕೆ ರಿಸ್ಕ್‌ ತೆಗೆದುಕೊಳ್ಳೋದು, ಹಿರಿಯ ಅಧಿಕಾರಿಯನ್ನೇ ಕೇಳಿದರಾಯ್ತು ಎಂದುಕೊಂಡು ಸಮೀಪದಲ್ಲೇ ಇದ್ದ ಅಧಿಕಾರಿ ಬಳಿ ಹೋಗಿ... 

"ಏನ್ಮಾಡೋದು ಸಾರ್‌... ಶಾಸಕರೇ ಕಪ್ಪು ಬಣ್ಣದ ಬಟ್ಟೆ ಧರಿಸಿಕೊಂಡು ಬಂದಿದ್ದಾರೆ ಏನ್ಮಾಡ್ಲಿ ಅಂತ ಕೇಳಿಬಿಟ್ಟ.." ಅದಕ್ಕೆ ಆ ಅಧಿಕಾರಿ ಶಾಸಕರನ್ನು ತಡಿಬ್ಯಾಡ ಅಂತ ಹೇಳಿ ಕಳುಹಿಸಿದ್ರು.

ಆದ್ರೆ ಒಳಗೆ ಹೋದ ತಕ್ಷಣ ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರು ಮಾತ್ರ ಕಪ್ಪು ಬಣ್ಣದ ಜಾಕೆಟ್‌ ಹಾಕ್ಕೊಂಡು ಬಂದಿದ್ದ ಶಾಸಕರನ್ನು ದುರುಗುಟ್ಟಿ ನೋಡಿದರಲ್ಲದೆ, ಅಲ್ಲೇ ನಿಂತಿದ್ದ ಮತ್ತೊಬ್ಬ ಪೊಲೀಸಪ್ಪನಿಗೆ ಶಾಸಕರು ಕಪ್ಪು ಬಣ್ಣದ ಬಟ್ಟೆ ಹಾಕ್ಕೊಂಡು ಬಂದ್ರೆ ನಡಿಯುತ್ತಾ ಸಾರ್‌... ಎಂದು ಪ್ರಶ್ನಿಸಿದ್ದೂ ಆಯ್ತು. ಅದಕ್ಕೆ ಉತ್ತರ ಹೊಳೆಯದೆ ಆ ಪೊಲೀಸಪ್ಪ ಜನರ ನಡುವಿನಿಂದ ಸ್ವಲ್ಪ ದೂರ ಹೋಗಿ ನಿಂತಿದ್ದು ಅಷ್ಟೇ ಸತ್ಯ.

ಸರ್ಕಾರಕ್ಕೆ ಹೋದ ಹಣ, ಸ್ಮಶಾನಕ್ಕೆ ಹೋದ ಹೆಣ ವಾಪಸ್‌ ಬರೋದಿಲ್ರಿ!

ಈ ಮಾತನ್ನು ಬೇರಿನ್ಯಾರೋ ಹೇಳಿಲ್ಲ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್‌.ಎಂ. ರೇವಣ್ಣ ಸಾಹೇಬ್ರು ಹೇಳಿದ್ದು.
ಶಾಸಕರಾಗಿ, ಸಚಿವರಾಗಿ, ಸರ್ಕಾರವನ್ನು ತೀರಾ ಹತ್ತಿರದಿಂದ ನೋಡಿರುವ ರೇವಣ್ಣ ಅವರ ಅನುಭವದ ಮಾತಿದು.

ಕಲಬುರಗಿ ಜಿಪಂ ಸಭಾಂಗಣದಲ್ಲಿ ಈಚೆಗೆ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ವೇಳೆ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾದವರಿಗೂ ಸಾವಿರಾರು ರುಪಾಯಿ ವಿದ್ಯುತ್‌ ಬಿಲ್‌ ಬಂದ್ರೆ ಹೆಂಗೆ ಎಂಬ ಪ್ರಶ್ನೆ ಧುತ್ತೆಂದು ಅವರ ಮುಂದೆ ಬಿತ್ತು.

ಕಲಬುರಗಿ ಸುತ್ತಲಿನ ಕುಸನೂರ್‌, ರಾಜಾಪುರದಲ್ಲಿ ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾಗಿರುವ ಮನೆಗಳಿಗೇ 25, 35 ಸಾವಿರ ರು. ವಿದ್ಯುತ್‌ ಬಿಲ್‌ ಬರುತ್ತಿದೆ. ಬಿಲ್‌ ಭರಿಸದಿದ್ರೆ ಕೇಸ್‌ ಹಾಕುವುದಾಗಿ ಜೆಸ್ಕಾಂನವರು ಧಮ್ಕಿ ಹಾಕ್ತಿದ್ದಾರೆಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ್‌, ಸದಸ್ಯೆ ನಿರ್ಮಲಾ ಸಾಕ್ಷಿ ಸಮೇತ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್‌ ಎಂ ರೇವಣ್ಣ ಸುಸ್ತೋ ಸುಸ್ತು.

ಇಂತಹ ಸಮಸ್ಯೆ ಮೊದಲ ಬಾರಿ ಕೇಳಿ ಬಂದಾಗ ಸಹಜವಾಗಿ ರೇವಣ್ಣ ಕೊಂಚ ಸಿಟ್ಟಿಗೆದ್ದು, ಯಾವ ಕಾರಣಕ್ಕೆ ಹೀಗಾಗುತ್ತಿದೆ, ಯೋಜನೆಯಡಿ ನೋಂದಣಿಯಾಗಿರೋ ಬಡವರ ಮನೆಗಳಿಗ್ಯಾಕೆ 25 , 35 ಸಾವಿರ ಬಿಲ್‌ ಎಂದು ಜೆಸ್ಕಾಂನಿಂದ ಸ್ಪಷ್ಟನೆ ಬಯಸಿದರು.

ಕೆಲ ಮನೆಗಳಿಗೆ ಒಂದೇ ಬಾರಿಗೆ ಎಲ್ಲಾ ಬಿಲ್‌ ನೀಡಿದ್ದರಿಂದ ಹೀಗಾಗಿದೆ, ಗೃಹಜ್ಯೋತಿ ಆರಂಭದಿಂದ ಇಲ್ಲಿಯವರೆಗೂ ಬಳಸಿದ ಯುನಿಟ್‌ ಮೈನಸ್‌ ಮಾಡಿ 17 ಲಕ್ಷ ರು. ಹಣ ಕಡಿತ ಮಾಡಿದ್ದೇವೆಂದು ಜೆಸ್ಕಾಂ ಇಂಜಿನಿಯರ್‌ಗಳು ಸಮಜಾಯಿಷಿ ನೀಡಿದರಾದರೂ ಅದಕ್ಕೆ ತೃಪ್ತರಾಗದ ರೇವಣ್ಣ ‘ಸರ್ಕಾರಕ್ಕೆ ಹೋದ ಹಣ, ಸ್ಮಶಾನಕ್ಕೆ ಹೋದ ಹೆಣ ವಾಪಸ್‌ ಬರೋದಿಲ್ರಿ”, ಸ್ವಲ್ಪನಾದ್ರೂ ಮಾನವೀಯತೆಯಿಂದ ಕೆಲ್ಸ ಮಾಡ್ರಿ, ಹೆಚ್ಚಿನ ಬಿಲ್‌ ಬಂದಿರೋ ಕಡೆ ಕ್ಯಾಂಪ್‌ ಹಾಕಿ ಸಮಸ್ಯೆಗೆ ಪರಿಹಾರ ಹುಡುಕ್ರಿ, ತಪ್ಪೆಸಗಿರೋರ ವಿರುದ್ಧ ತೆಪ್ಪಗಿರದೆ ಕ್ರಮ ಕೈಗೊಳ್ಳಿರೆಂದು ಖಡಕ್‌ ಸೂಚನೆ ನೀಡಿ ಚರ್ಚೆಗೆ ತೆರೆ ಎಳೆದರೆನ್ನಿ.

ಬುದ್ಧಿ ಕಲಿಸಲು ಒತ್ತುವಾರಿ ಮಾಡಿದ್ದ ಸಿದ್ದು

ಚಿಕ್ಕವರಿದ್ದಾಗ ಬೇರೆಯವರು ಅನುಭವಿಸುತ್ತಿದ್ದ ಕಷ್ಟ ನೋಡಿಯೇ ಅನ್ನಭಾಗ್ಯ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರು ಹತ್ತಾರು ಬಾರಿ ಹೇಳಿದ್ದಾರೆ. ಈಗ ಅಂಥ ಯೋಜನೆಗಳ ಲಿಸ್ಟ್‌ಗೆ ಹೊಸದೊಂದು ಯೋಜನೆ ಸೇರಿಸಬೇಕಾಗಿದೆ. ಅದು ಯಾವುದಪ್ಪಾ ಅಂದ್ರೆ ‘ಭೂಮಿ ಬೀಟ್’ ಯೋಜನೆ.
ಅವರು ಭೂ ಒತ್ತುವರಿಯಿಂದಾಗುವ ಕಿರಿಕಿರಿ, ನ್ಯಾಯ ಪಂಚಾಯತಿಗಳನ್ನು ರಾಜಕೀಯಕ್ಕೆ ಬರುವ ಮುನ್ನ ಅನುಭವಿಸಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾರಸ್ಯಕರವಾಗಿ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡರು.

ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ 1000 ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಆದೇಶ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಬಿಎಸ್ಸಿ ವ್ಯಾಸಂಗದ ನಂತರ ಒಂದು ವರ್ಷ ಓದು ಮೊಟಕುಗಳಿಸಿ ನಮ್ಮೂರು ಸಿದ್ದರಾಮನ ಹುಂಡಿಯಲ್ಲಿ ತಮ್ಮ ಜಮೀನಿನಲ್ಲಿ ಸ್ವತಃ ಕೃಷಿ ಮಾಡಲಾರಂಭಿಸಿದೆ. ಈ ವೇಳೆ ತಮ್ಮ ಪಕ್ಕದ ಜಮೀನಿನ ವ್ಯಕ್ತಿಯೊಬ್ಬ ತಮ್ಮ ಜಮೀನಿನ ಎರಡು ಅಡಿಯಷ್ಟು ಜಾಗ ಒತ್ತುವರಿ ಮಾಡಿಕೊಂಡು ಉಳುಮೆ ಮಾಡಿಕೊಂಡ. ಅವನಿಗೆ ಬುದ್ಧಿಕಲಿಸಬೇಕು ಎಂದು ನಾನು, ಒತ್ತುವರಿಯಾಗಿದ್ದ ತಮ್ಮ ಎರಡು ಅಡಿ ಜಮೀನು ಜೊತೆಗೆ ಒತ್ತುವರಿದಾರರಿಗೆ ಸೇರಿದ ಜಮೀನ ಒಂದಡಿ ಸೇರಿಸಿಕೊಂಡು ಉಳುಮೆ ಮಾಡಿದೆ. ಆಗ ಆತ ಬಂದು ಜಗಳ ತೆಗೆದಿದ್ದಾನೆ. ನೀನು ನಮ್ಮ ಜಮೀನು ಒತ್ತುವರಿ ಮಾಡಿದ್ದಕ್ಕೆ ನಾನೂ ಒತ್ತುವರಿ ಮಾಡಿದೆ ಎಂದು ಹೇಳಿದೆ. ಕೊನೆಗೆ ಊರಿನವರು ಈ ಬಗ್ಗೆ ಪಂಚಾಯಿತಿ ನಡೆಸಿದರಾದರೂ ನನ್ನದೇ ತಪ್ಪು ಎಂದು ತೀರ್ಪು ನೀಡಿದರು. ಇದರಿಂದ ಬೇಸರಗೊಂಡು ಊರು ಬಿಟ್ಟು ಕಾನೂನು ಪದವಿ ಓದಲು ಮೈಸೂರಿಗೆ ಬಂದೆ” ಎಂದರು.

ಇದನ್ನೂ ಓದಿ: ರಿಪೋರ್ಟರ್ಸ್ ಡೈರಿ: ಕಳ್ಳ ಸುಳ್ಳ ಹೇಳಿಕೆಯಿಂದ ಈಶ್ವರಪ್ಪ ಎಸ್ಕೇಪ್!

ಮುಂದುವರೆದು ‘ಕೆಲವರಿಗೆ ಅಕ್ಕಪಕ್ಕದವರ ಜಮೀನು ಉಳುಮೆ ಚಟ ಇರುತ್ತದೆ. ಇಲ್ಲದಿದ್ದರೆ ಅವರಿಗೆ ನಿದ್ದೆಯೇ ಬರಲ್ಲ. ಹಿಂದೆ ನನಗೆ ಆಗಿದ್ದ ಅನುಭವದಿಂದಾಗಿ ಇಂತಹದ್ದನ್ನು ತಡೆಯಲೆಂದೇ ‘ಭೂ ಬೀಟ್‌’ ಯೋಜನೆ ಜಾರಿಗೆ ತಂದಿದ್ದೇವೆ. ಗ್ರಾಮ ಆಡಳಿತ ಅಧಿಕಾರಿಗಳು ಭೂ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಿ ರೈತರಿಗೆ ಒದಗಿಸಿಕೊಡಬೇಕು. ಸಮರ್ಪಕ ಸರ್ವೆ ಕಾರ್ಯ ನಡೆಸುವುದು, ಕಲ್ಲುನೆಟ್ಟು ಹದ್ದುಬಸ್ತು ಮಾಡುವ ಕೆಲಸ ಮಾಡಿದರೆ ಗ್ರಾಮೀಣ ಜನ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು,

  • -ಶಿವಾನಂದ ಗೊಂಬಿ
  • -ಶೇಷಮೂರ್ತಿ ಅವಧಾನಿ
  • -ಲಿಂಗರಾಜು ಕೋರಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌
ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌