
ನವದೆಹಲಿ (ಫೆ.11): ಬೆಂಗಳೂರು ಮತ್ತು ಬೆಳಗಾವಿ ನಡುವೆ ವೆಂದೇ ಭಾರತ್ ರೈಲು ಸಂಚಾರದ ಬಗ್ಗೆ ಬೇಡಿಕೆ ಇಟ್ಟ ಸಂಸದ ಜಗದೀಶ್ ಶೆಟ್ಟರ್ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿ ಮೇರೆಗೆ ಶೀಘ್ರದಲ್ಲಿಯೇ ವಂದೇ ಭಾರತ್ ರೈಲು ಸೇವೆ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಮತ್ತು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಚಿವ ಪ್ರಲ್ಹಾದ ಜೋಶಿ ಅವರ ದೆಹಲಿ ಸಂಸದೀಯ ಕಚೇರಿಯಲ್ಲಿ ಸಚಿವದ್ವಯರು ಮತ್ತು ಮಾಜಿ ಸಿಎಂ ಸೇರಿ "ಬೆಂಗಳೂರಿನಿಂದ ಬೆಳಗಾವಿವರೆಗೆ ಒಂದೇ ಭಾರತ್ ರೈಲು ಸಂಚಾರ ಕುರಿತ ಸಾಧಕ-ಬಾಧಕ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.
ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವ ಕುರಿತು ಈ ಹಿಂದೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಬೆಳಗಾವಿ ಶಾಸಕ ಅಭಯ ಪಾಟೀಲ್ ಸಹ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿಯ ತಮ್ಮ ಲೋಕಸಭಾ ಕ್ಷೇತ್ರದ ಕಾರ್ಯಾಲಯದಲ್ಲಿ ನೈರುತ್ಯ ವಲಯದ ರೇಲ್ವೆ ಜನರಲ್ ಮ್ಯಾನೇಜರ್ , DRM ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬೆಂಗಳೂರಿನಿಂದ ಬೆಳಗಾವಿವರೆಗೆ ವಂದೇ ಭಾರತ್ ರೈಲು ಸಂಚಾರ ವಿಸ್ತರಣೆ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.
ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ದೇಶದ ಎಲ್ಲಾ ಭಾಗದಿಂದ ವಂದೇ ಭಾರತ್, ನಮೋ ಭಾರತ್ ಟ್ರೈನ್
ವಂದೇ ಭಾರತ್ ರೈಲು ಬೆಳಗ್ಗೆ ಬೆಳಗಾವಿಯಿಂದ ಹೊರಟು ಬೆಂಗಳೂರು ತಲುಪಿ ಮತ್ತೆ ಬೆಂಗಳೂರಿಂದ ಬೆಳಗಾವಿಗೆ ರಾತ್ರಿ ತಲುಪುವ ಹಾಗೆ ವೇಳೆ ನಿಗದಿಗೊಳಿಸಿ ಎಂದು ಸಚಿವ ಪ್ರಲ್ಹಾದ ಜೋಶಿ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ರೈಲ್ವೆ ಅಧಿಕಾರಿಗಳು ತಾಂತ್ರಿಕ ಅಂಶಗಳನ್ನು ವಿಶ್ಲೇಷಿಸಿ, ಸಾಧಕ-ಬಾಧಕಗಳನ್ನು ಅವಲೋಕಿಸಿ ವರದಿ ಸಲ್ಲಿಸಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ವರದಿ ಪರಿಗಣಿಸಿ ಬೆಂಗಳೂರು -- ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ತೋರಿದ್ದಾರೆ.
ವೇಳಾಪಟ್ಟಿ ಶೀಘ್ರ ಬಿಡುಗಡೆ: ಅತೀ ಶೀಘ್ರದಲ್ಲಿಯೇ ಬೆಳಗಾವಿ - ಬೆಂಗಳೂರಿನ ಮಧ್ಯೆ ವಂದೇ ಭಾರತ್ ರೈಲಿನ ಆರಂಭದ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಈ ರೈಲು ಸಂಚಾರದಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಭಾಗದ ಜನತೆಗೆ ಬೆಂಗಳೂರು ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದ ಸಚಿವರು, ನಮ್ಮ ಮನವಿಗೆ ಸ್ಪಂದಿಸಿ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಲು ಸಮ್ಮತಿ ಸೂಚಿಸಿದ ಕೇಂದ್ರ ರೈಲ್ವೆ ಸಚಿವರಿಗೆ ಧನ್ಯವಾದ ಅರ್ಪಿಸುವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ