ಬೆಂಗಳೂರು (ನ.2) : ರಾಜ್ಯ ಸರ್ಕಾರವು ಕಲಾವಿದರ ಪಿಂಚಣಿಯನ್ನು 1,500ರಿಂದ 2,000 ರು.ಗೆ ಏರಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಚಿವರು, ‘ರಾಜ್ಯ ಸರ್ಕಾರವು ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಲು ಸದಾ ಸಿದ್ಧವಿದೆ. ಈ ಹಿನ್ನೆಲೆಯಲ್ಲಿ 12,000 ಕಲಾವಿದರಿಗೆ ನೀಡುತ್ತಿದ್ದ ಪಿಂಚಣಿಯನ್ನು 15,000 ಮಂದಿಗೆ ಹೆಚ್ಚಿಸಲಾಗಿದೆ’ ಎಂದರು.
‘ಈ ಬಾರಿ ನಾವು ನೈಜ ಸಾಧನೆಯನ್ನು ಮಾತ್ರ ಪರಿಗಣಿಸಿ ಪ್ರಶಸ್ತಿ ನೀಡಿದ್ದೇವೆ. ಅಶೋಕ ಬಾಬು ನೀಲಗಾರ ಅವರು ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅವರ ಬಯೋಡಾಟವನ್ನು ಗಮನಿಸಿದಾಗ ಅವರ ಸಾಧನೆ ನಮ್ಮ ಅರಿವಿಗೆ ಬಂತು. ಪಿಂಚಣಿಗಾಗಿ ಸಲ್ಲಿಸಿದ್ದ ಅರ್ಜಿಯೇ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಕಾರಣವಾಯಿತು’ ಎಂದು ಹೇಳಿದರು.
‘ರಾಜ್ಯೋತ್ಸವ ಪ್ರಶಸ್ತಿಗಾಗಿ ಈ ಬಾರಿ ಸೇವಾ ಸಿಂಧು ಆ್ಯಪ್‌ನಲ್ಲಿ 9,000 ಅರ್ಜಿಗಳು ಬಂದಿದ್ದವು. ಆದರೆ ಅರ್ಜಿ ಹಾಕಿದವರಿಗಿಂತ, ಆಯ್ಕೆ ಸಮಿತಿ ಗುರುತಿಸಿದವರಿಗೆ ಪ್ರಶಸ್ತಿ ನೀಡಲಾಗಿದೆ. ಎಲ್ಲ ಕ್ಷೇತ್ರಗಳ ಸಾಧಕರನ್ನು ಗುರುತಿಸಿದ್ದೇವೆ. ಬಾನಯಾನದ ಮಹಾನ್ ವಿಜ್ಞಾನಿ, ಇಸ್ರೋದ ಮಾಜಿ ಮುಖ್ಯಸ್ಥ ಕೆ. ಶಿವನ್ ನಿಂದ ಹಿಡಿದು ಪೌರ ಕಾರ್ಮಿಕೆ ಮಲ್ಲಮ್ಮರ ತನಕ ವೈವಿಧ್ಯಮಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಸಂದಿದೆ’ ಎಂದರು.
‘ಗ್ರಾಮೀಣ ಭಾಗದಲ್ಲಿ ಪ್ರಚಾರ ಪಡೆಯದೇ ಸಾಧನೆ, ಸೇವಾ ಕಾರ್ಯ ಮಾಡುತ್ತಿದ್ದವರನ್ನು ಗುರುತಿಸಲಾಗಿದೆ. ಕೆಲವು ಸಾಧಕರಲ್ಲಿ ನಿಮಗೆ ಪ್ರಶಸ್ತಿ ಬಂದಿದೆ. ನಿಮ್ಮ ಭಾವಚಿತ್ರವೊಂದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಲು ನೀಡಬೇಕು ಎಂದು ಕೇಳಿಕೊಂಡಾಗ, ಅವರಲ್ಲಿ ಭಾವಚಿತ್ರವೂ ಇರಲಿಲ್ಲ. ಇಂತಹ ಎಲೆಮರೆಯ ಕಾಯಿಗಳಿಗೆ ಪ್ರಶಸ್ತಿ ನೀಡಲಾಗಿದೆ’ ಎಂದರು.
ಎಸ್ಸಿ,ಎಸ್ಟಿಗೆ ಫ್ರೀ ಕರೆಂಟ್ ಗೊಂದಲ: ಸಿದ್ದು ಆರೋಪಕ್ಕೆ ಸುನಿಲ್ ಕುಮಾರ್ ಗುದ್ದು