
ವಿನೋದ್ ಕುಮಾರ್ ಬಿ ನಾಯ್ಕ್
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳಿಗೆ ವಿಷ ಹಾಕಿ ಕೊಂದ ಪ್ರಕರಣ ಇನ್ನೂ ಹಸಿ ಹಸಿಯಾಗಿಯೇ ಇದೆ. ವಿಷ ಹಾಕಿದ ಆರೋಪಿಗಳನ್ನು ಬಂಧಿಸಿದ್ದೂ ಆಯಿತು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳನ್ನು ಸದ್ಯಕ್ಕೆ ಕಡ್ಡಾಯ ರಜೆಯ ಮೇಲೆ ಕಳಿಸಿದ್ದೂ ಆಯಿತು. ಈ ಭಾಗದಲ್ಲಿ ನಡೆದ ಈ ದುರ್ಘಟನೆ ಇಲ್ಲಿನ ಹಳ್ಳಿಗಳಲ್ಲಿನ ಅನೇಕ ಒಳ್ಳೆಯ ಅಂಶಗಳನ್ನು ಹೊಸಕಿ ಹಾಕಿಬಿಟ್ಟಿದೆ.
ಮಲೆ ಮಹದೇಶ್ವರ ಅರಣ್ಯ ಪ್ರದೇಶದಿಂದ ಕೇವಲ 100 ಕಿಲೋ ಮೀಟರ್ ದೂರದಲ್ಲಿರುವ ವಿಶ್ವವಿಖ್ಯಾತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಿಂದೊಮ್ಮೆ ಅಂದರೆ 25-30 ವರ್ಷಗಳ ಹಿಂದೆ ಇದೇ ರೀತಿ ಹುಲಿ, ಚಿರತೆಗಳಿಗೆ ವಿಷ ಹಾಕುವ ಪ್ರವೃತ್ತಿ ಇತ್ತು. ಅನೇಕ ವನ್ಯಜೀವಿಗಳು “ಪ್ರತೀಕಾರದ ಹತ್ಯೆ”ಗೆ ಬಲಿಯಾಗಿದ್ದವು. ಆದರೆ, ಅನೇಕ ವರ್ಷಗಳಿಂದ ಬಂಡೀಪುರದ ಸುತ್ತಮುತ್ತಲ ಕೆಲ ಹಳ್ಳಿಗಳಲ್ಲಿ ಬೇರೂರಿದ್ದ “ವಿಷದ ಮನಸ್ಥಿತಿ” ಈಗ ಸಂಪೂರ್ಣ ಬದಲಾಗಿದೆ.
31 ವರ್ಷಗಳ ಹಿಂದೆ ಬಂಡೀಪುರದ ಪ್ರಕೃತಿ ಸೊಬಗಿಗೆ ಮನಸೋತು ಪಕ್ಕದ ಮಂಗಲ ಎನ್ನುವ ಗ್ರಾಮದಲ್ಲಿ ನೆಲೆನಿಂತಿದ್ದು, ಸುನೀತಾ ಎನ್ನುವ ಚಿತ್ರ ಕಲಾವಿದೆ. ಬೆಂಗಳೂರು ಮಹಾನಗರದ ಜಂಜಡಕ್ಕೆ ಬೇಸತ್ತು, ಪ್ರಕೃತಿಯ ಮಡಿಲಲ್ಲಿ ವಾಸಿಸಲು ಬಂಡೀಪುರಕ್ಕೆ ಸ್ಥಳಾಂತರಗೊಂಡ ಸುನೀತಾ ಅವರಿಗೆ ಈಗ 62 ವರ್ಷ. ಮಂಗಲ ಗ್ರಾಮದಲ್ಲಿ ಶ್ರೀಮರಿಯಮ್ಮ ಚಾರಿಟಬಲ್ ಟ್ರಸ್ಟ್ ಎನ್ನುವ ಸಂಸ್ಥೆಯನ್ನು ಹಳ್ಳಿಯ ಹೆಣ್ಣು ಮಕ್ಕಳ ಜತೆ ಸೇರಿ ನಡೆಸುತ್ತಿರುವ ಸುನೀತಾ ಅವರಿಗೆ, ಅಲ್ಲಿನ ಜನರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಅರ್ಥವಾಗಿತ್ತು.
2007ರಲ್ಲಿ ಬಂಡೀಪುರದಲ್ಲೂ ಕಾಡಂಚಿನ ಗ್ರಾಮಗಳಲ್ಲಿ ನೂರಾರು, ಸಾವಿರಾರು ಜಾನುವಾರುಗಳಿದ್ದವು. ಈಗಲೂ ಇವೆ. ಇಲ್ಲೂ ಹುಲಿ, ಚಿರತೆಗಳು ದನಕರುಗಳನ್ನು ಬೇಟೆಯಾಡುತ್ತಿದ್ದವು. ಆಗ ಜಾನುವಾರು ಕಳೆದುಕೊಂಡವರು “ಪ್ರತೀಕಾರದ ಹತ್ಯೆ” ಮಾಡಲು ವಿಷ ಹಾಕುತ್ತಿದ್ದರು. ಆ ವಿಷಕ್ಕೆ ಚಿರತೆ, ಹುಲಿಗಳು ಜೀವ ಕಳೆದುಕೊಳ್ಳುತ್ತಿದ್ದವು. ಇಂತಹ ಅನೇಕ ಪ್ರಕರಣಗಳು ನಡೆದು, ಹಳ್ಳಿಗಳಲ್ಲಿ ಅರಣ್ಯ ಇಲಾಖೆಯ ಮೇಲೆ ಮತ್ತು ಹಳ್ಳಿಗರ ಮೇಲೆ ಅರಣ್ಯಾಧಿಕಾರಿಗಳ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು.
ಇದನ್ನು ಅರ್ಥ ಮಾಡಿಕೊಂಡ ಸುನೀತಾ, ಯೋಚಿಸಿದಾಗ ಗೊತ್ತಾಗಿದ್ದು, ಅರಣ್ಯ ಇಲಾಖೆ ಜಾನುವಾರುಗಳಿಗೆ ಪರಿಹಾರ ಕೊಡಲು ಆಗುತ್ತಿದ್ದ ವಿಳಂಬ ಧೋರಣೆ ಸಹ ಒಂದು ಕಾರಣ ಎನ್ನುವುದು. ತಕ್ಷಣ ಕಾರ್ಯೋನ್ಮುಖರಾದ ಆಕೆ ಪರಿಚಿತರಿಂದ, ತಮ್ಮ ಕುಟುಂಬದವರಿಂದ ದಾನದ ರೂಪದಲ್ಲಿ ಹಣ ಪಡೆದು, ಜಾನುವಾರು ಕಳೆದುಕೊಂಡವರಿಗೆ ತಕ್ಷಣವೇ ತಾವೇ ಕೈಲಾದಷ್ಟು ಪರಿಹಾರ ನೀಡತೊಡಗಿದರು. ಆ ಮೂಲಕ ಅವರು ಹಳ್ಳಿ ಜನರು “ಪ್ರತೀಕಾರದ ಹತ್ಯೆ”ಗೆ ಮುಂದಾಗದಂತೆ ತಡೆಯೊಡ್ಡತೊಡಗಿದರು. ತಮ್ಮ ಕಲಾಕೃತಿ/ಪೇಂಟಿಂಗ್ಸ್‌ಗಳನ್ನು ಮಾರಾಟ ಮಾಡಿ ಆ ಹಣವನ್ನೂ ಜಾನುವಾರುಗಳಿಗೆ ಪರಿಹಾರವಾಗಿ ನೀಡತೊಡಗಿದರು. ಇದರಿಂದಾಗಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ “ವಿಷದ ಮನಸ್ಥಿತಿ” ಹಂತಹಂತವಾಗಿ ಅತ್ಯಂತ ಪರಿಣಾಮಕಾರಿಯಾಗಿ ಕಡಿಮೆಯಾಯಿತು. ಜನರು ಹುಲಿ, ಚಿರತೆಗಳಿಗೆ ವಿಷ ಹಾಕುವುದನ್ನು ನಿಲ್ಲಿಸಿಬಿಟ್ಟರು.
ಸುನೀತಾರವರು, 18 ವರ್ಷಗಳಲ್ಲಿ ಇದುವರೆಗೆ 1 ಕೋಟಿ 22 ಲಕ್ಷದ 50 ಸಾವಿರದ 400 ರೂಪಾಯಿಗಳನ್ನು ಪರಿಹಾರವಾಗಿ ನೀಡಿದ್ದಾರೆ. ಬಂಡೀಪುರದಲ್ಲಿ 2392, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 851, ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 545 ಹೀಗೆ ಒಟ್ಟು 3788 ಪ್ರಕರಣಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಪರಿಹಾರದ ಹಣವನ್ನು ನೀಡಿದ್ದಾರೆ.
ಪ್ರಕರಣಗಳು ಹೆಚ್ಚಿದಂತೆಲ್ಲ, ಹೆಚ್ಚಿನ ಹಣದ ಅವಶ್ಯಕತೆ ಉಂಟಾಯಿತು. ಅದಕ್ಕಾಗಿ ಟೆಂಪಲ್ ಟ್ರೀ ಡಿಸೈನ್ಸ್ ಎನ್ನುವ ತಮ್ಮದೇ ಆದ ವನ್ಯಜೀವಿ ಗಿಫ್ಟ್‌ಗಳ ಕಂಪನಿಯೊಂದನ್ನು ಹುಟ್ಟು ಹಾಕಿದರು. ಆ ಕಂಪನಿ ಮೂಲಕ ಟೀ ಶರ್ಟ್, ಕ್ಯಾಪ್, ಕೀ ಚೈನು ಮತ್ತಿತರೆ ವಸ್ತುಗಳನ್ನು ಮಾರಾಟ ಮಾಡಿ ಆ ಹಣವನ್ನೂ ಸಹ ರೈತರಿಗೆ ಪರಿಹಾರವನ್ನಾಗಿ ನೀಡಲು ಬಳಸುತ್ತಿದ್ದಾರೆ. ಸುನೀತಾರವರ ಈ ಮಹತ್ಕಾರ್ಯದಿಂದ ಬಂಡೀಪುರ, ನಾಗರಹೊಳೆ ಮತ್ತು ಮುದುಮಲೈ ಕಾಡಂಚಿನ ಗ್ರಾಮಗಳಲ್ಲಿ ಈಗ ವಿಷ ಹಾಕುವ ಪ್ರವೃತ್ತಿ ಸಂಪೂರ್ಣವಾಗಿ ನಿಂತು ಹೋಗಿದೆ. ಒಬ್ಬ ಚಿತ್ರ ಕಲಾವಿದೆ ತಾನು ವಾಸ ಮಾಡುವ ಕಾಡಂಚಿನ ಗ್ರಾಮಗಳಲ್ಲಿ ಮೂಡಿಸಿರುವ ಅತ್ಯಂತ ಪರಿಣಾಮಕಾರಿ ಛಾಪು ಇದು. ಇದನ್ನು ರಾಜ್ಯದ ಬೇರೆ ಕಡೆ ವಿಸ್ತರಿಸಲು ಸುನೀತಾ ಮತ್ತವರ ತಂಡವೇ ಬರಬೇಕು ಎಂದೇನೂ ಇಲ್ಲ. ಬೇರೆ ಆಸಕ್ತರೂ ಇಂತಹ ಉತ್ತಮ ಕೆಲಸಕ್ಕೆ ಮುಂದಾಗಬಹುದು.
ವನ್ಯಜೀವಿಗಳ ಜತೆ ನಿಜವಾದ ಸಹಬಾಳ್ವೆ ಎಂದರೆ ಇದೆ ಅಲ್ಲದೇ..??? ಇದೇ ಸಮರ್ಪಕವಾದ ವನ್ಯಜೀವಿ ಸಂರಕ್ಷಣಾ ಕೆಲಸ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ..?? ಸುನೀತಾರಂತಹವರ ಸಂತತಿ ಹೆಚ್ಚಾಗಲಿ. ಉತ್ತಮ ಪರಿಸರದಿಂದಾಗಿ ಮನುಕುಲಕ್ಕೂ ಒಳಿತಾಗಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ