
ಬೆಂಗಳೂರು (ಆ.30): ರಷ್ಯಾ ದಾಳಿಯಿಂದ ನಲುಗಿರುವ ಯುದ್ಧಭೂಮಿ ಉಕ್ರೇನ್‌ನಲ್ಲಿ ಬೆಂಗಳೂರು ಮೂಲದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ನೇತೃತ್ವದಲ್ಲಿ ಶಿಬಿರಗಳನ್ನು ತೆರೆದಿದ್ದು, ಯುದ್ಧ ಸಂತ್ರಸ್ತ ಸೈನಿಕರು ಹಾಗೂ ನಾಗರಿಕರಲ್ಲಿ ಯೋಗ-ಧ್ಯಾನದ ಮೂಲಕ ಶಾಂತಿ ನೆಲೆಸುವಂತೆ ಮಾಡಿದೆ.
ಯುದ್ಧದಿಂದ ಅವಶೇಷಗೊಂಡಿರುವ ನಗರಗಳಲ್ಲಿ ಸುಧಾರಣೆ ಕ್ರಮ ಹಾಗೂ ಯೋಗದ ಉಸಿರಾಟದ ಪ್ರಕ್ರಿಯೆಗಳಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಉಕ್ರೇನಿಯನ್ನರಿಗೆ ಆಸರೆಯಾಗಿದ್ದು, ಶಾಂತಿ, ವಿಶ್ರಾಂತಿ, ಸುರಕ್ಷತೆಯ ಭಾವ ಮೂಡಿಸಿದೆ ಎಂದು ಅಲ್ಲಿನ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಆರ್ಟ್ ಆಫ್ ಲಿವಿಂಗ್ ಶಿಕ್ಷಕರೊಬ್ಬರು ಮಾಹಿತಿ ಹಂಚಿಕೊಂಡಿದ್ದು, ‘ಉಕ್ರೇನ್ ಸೇನಾ ಅಧಿಕಾರಿಗಳು ಮೊದಲ ಬಾರಿಗೆ ಆರ್ಟ್ ಆಫ್ ಲಿವಿಂಗ್ ಪರಿಹಾರ ಶಿಬಿರಕ್ಕೆ ಕಾಲಿಟ್ಟಾಗ ಅವರನ್ನು ನೋಡಿ ನನ್ನ ಹೃದಯ ಕುಗ್ಗಿಹೋಯಿತು. ಅವರ ಕೈ-ಕಾಲು ಮತ್ತು ಬೆನ್ನಿನಲ್ಲಿ ಗಾಯಗಳಾಗಿದ್ದವು. ಅವರ ಕಣ್ಣುಗಳಲ್ಲಿ ಭಯ ಮತ್ತು ಶೂನ್ಯತೆಯ ಭಾವ ಮೂಡಿತ್ತು. ಆರ್ಟ್ ಆಫ್ ಲಿವಿಂಗ್‌ನ ಉಸಿರಾಟದ ಪ್ರಕ್ರಿಯೆ ಮತ್ತು ಧ್ಯಾನವನ್ನು ಕಲಿತ ಬಳಿಕ ಅವರು ಅಸಾಮಾನ್ಯ ರೀತಿಯಲ್ಲಿ ಸುಧಾರಣೆ ಕಾಣತೊಡಗಿದರು. ಉಕ್ರೇನ್ ಜನರಲ್ಲಿ ಯುದ್ಧದಿಂದ ಗೋಚರಿಸಿದ ಶೂನ್ಯತೆ, ಕೋಪ ಮತ್ತು ದುಃಖಗಳು ಕಡಿಮೆಯಾಗಲು ಪ್ರಾರಂಭಿಸಿವೆ’ ಎಂದು ಹೇಳಿದ್ದಾರೆ.
ರವಿಶಂಕರ್ ಗುರೂಜಿಗೆ ಸೇನೆ ಗೌರವ:
ಆರ್ಟ್ ಆಫ್ ಲಿವಿಂಗ್ ಪರಿಣಾಮ ಕಾರ್ಯವನ್ನು ಮೆಚ್ಚಿರುವ ಸ್ವತಃ ಉಕ್ರೇನ್ ಬೆಟಾಲಿಯನ್ ಕಮಾಂಡರ್, ರವಿಶಂಕರ್ ಗುರೂಜಿ ಅವರ ಮುಂದೆ ನಿಂತು ಗೌರವ ಪ್ರಶಸ್ತಿ ನೀಡಿ ವಂದಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ಗುರುದೇವ್..! ನಮ್ಮ ಸೈನಿಕರು ನಿಮ್ಮಿಂದ ಪಡೆದ ಜ್ಞಾನ ಮತ್ತು ಉಸಿರಾಟದ ಪ್ರಕ್ರಿಯೆಗಳಿಗೆ ನಾವು ಆಭಾರಿಯಾಗಿದ್ದೇವೆ. ನಮ್ಮ ದೇಶದ ಮೇಲೆ ಬಾಂಬ್‌ಗಳು ಬಿದ್ದಾಗ, ನಾವೆಲ್ಲರೂ ದೇಶಕ್ಕಾಗಿ ಹೋರಾಡಲು ಸಜ್ಜಾದೆವು. ಆದರೆ, ಯುದ್ಧಾನಂತರದಲ್ಲಿ ಉಂಟಾದ ನಷ್ಟದಿಂದ ನಾವು ಅನುಭವಿಸುವ ಕೋಪ, ದ್ವೇಷ, ಹತಾಶೆ ಮತ್ತು ಅಪಾರ ಶೂನ್ಯತೆಯ ತೀವ್ರತೆ ನಮ್ಮನ್ನು ದಿನದ 24 ಗಂಟೆ ಕಾಡುತ್ತಿತ್ತು. ಈ ಭಾವನೆಯನ್ನು ಆರ್ಟ್ ಆಫ್ ಲಿವಿಂಗ್ ಶಿಬಿರಗಳು ಬದಲಾಯಿಸಿದ್ದು, ಗಂಭೀರ ಗಾಯಗಳಾದವರು ಸಹ ತಮ್ಮ ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ. ಅವರ ಕಣ್ಣುಗಳಲ್ಲಿ ಈಗ ಮತ್ತೆ ಜೀವನದ ಬಗ್ಗೆ ಉತ್ಸಾಹವು ತುಂಬಿದೆ’ ಎಂದು ಶ್ಲಾಘಿಸಿದ್ದಾರೆ.
8000ಕ್ಕೂ ಹೆಚ್ಚು ಜನರಿಗೆ ಸಹಾಯ:
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು 2022 ರಿಂದ ಸೈನಿಕರು, ಸ್ಥಳಾಂತರಗೊಂಡ ನಾಗರಿಕರು ಮತ್ತು ಆಕ್ರಮಿತ ಪ್ರದೇಶಗಳ ಮಕ್ಕಳನ್ನು ಒಳಗೊಂಡಂತೆ 8,000ಕ್ಕೂ ಹೆಚ್ಚು ಜನರಿಗೆ ತಮ್ಮ ಶಿಬಿರಗಳ ಮೂಲಕ ಯೋಗ-ಧ್ಯಾನಗಳನ್ನು ಕಲಿಸಿದೆ. ಸ್ವಯಂಸೇವಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅಗತ್ಯವಿರುವಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಗುರೂಜಿ ಹೇಳುವಂತೆ, ‘ಶಾಂತಿ ಎಂದರೆ ಸಂಘರ್ಷ ಇಲ್ಲದಿರುವಿಕೆ ಮಾತ್ರವಲ್ಲ, ಬದಲಾಗಿ ಅನುಕಂಪದ ಉಪಸ್ಥಿತಿ ಇರುವುದಾಗಿದೆ’ ಎಂದು ಸಂಸ್ಥೆಯ ಶಿಕ್ಷಕರು ಹೇಳಿದ್ದಾರೆ.
ಉಜ್ಜಯಿ ಉಸಿರಾಟದಿಂದ ಬದುಕಿ ಬಂದ ಸೈನಿಕ!
2014ರಿಂದ ಉಕ್ರೇನ್ ಸೈನ್ಯದ ಪ್ರಥಮ ಪಡೆಯ ಎಂಪಿಜೆಡ್ (ನೈತಿಕ ಮತ್ತು ಮಾನಸಿಕ ಬೆಂಬಲ) ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ನತಾಲಿಯಾ ಅವರು ಒಬ್ಬ ಯೋಧನ ಅನುಭವ ಹಂಚಿಕೊಂಡಿದ್ದು, ಯುದ್ಧ ಭೂಮಿಯಲ್ಲಿ ಸೈನಿಕರು ಡ್ರೋನ್ ದಾಳಿ ಸಮಯದಲ್ಲಿ ಕೇವಲ 80 ಸೆಂ.ಮೀ. ಅಗಲದ ಕಂದಕಗಳಲ್ಲಿ ಅಡಗಿ ಕುಳಿತಿರಬೇಕಾಗುತ್ತದೆ. ಅಂತಹ ಒಂದು ಸಂದರ್ಭದಲ್ಲಿ ಸೈನಿಕರೊಬ್ಬರು, ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಕಲಿತ ಸರಳ ಉಸಿರಾಟದ ಪ್ರಕ್ರಿಯೆಯಾದ ಉಜ್ಜಯಿ ಉಸಿರಾಟವನ್ನು ಪ್ರಯೋಗ ಮಾಡಿ ಬದುಕುಳಿದಿದ್ದು, ಜತೆಗೆ ನನ್ನ ಘಟಕದ ಇನ್ನೂ ನಾಲ್ವರನ್ನು ರಕ್ಷಿಸಿದ್ದಾರೆ. ಈಗ ಈ ಪ್ರಕ್ರಿಯೆಯನ್ನು ಅವರು ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ