ಅಡಕೆ ಬೆಳೆಗಾರರಿಗೆ ಇದು ಗುಡ್ ನ್ಯೂಸ್

By Kannadaprabha NewsFirst Published Feb 13, 2021, 2:04 PM IST
Highlights

ಕೆಲ ದಿನಗಳ ಹಿಂದೆ ಸರ್ಕಾರಿ ವೆಬ್‌ಸೈಟ್‌ನಲ್ಲಿಯೇ ಅಡಕೆ ಮಾದಕ ವಸ್ತುವೆಂದು ಹೇಳಲಾಗಿತ್ತು. ಆದರೆ ಬಳಿಕ ಅದನ್ನು ತೆಗೆಯಲಾಗಿದ್ದು ಇದೀಗ ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿಯೇ ಇಲ್ಲಿದೆ. 

 ಶಿರಸಿ (ಫೆ.13):   ಅಡಕೆಯಲ್ಲಿ ಔಷಧಿಯ ಗುಣಗಳಿದ್ದು, ಆರೋಗ್ಯಕ್ಕೆ ಪೂರಕವಾಗಿದೆ. ಅಡಕೆ ಬೆಳೆಗಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತೋಟಗಾರಿಕೆ ಇಲಾಖೆ ಸಚಿವ ಆರ್‌. ಶಂಕರ ಹೇಳಿದರು.

ನಗರದ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದ ಅವರು, ಮಾಧ್ಯಮದೊಂದಿಗೆ ಮಾತನಾಡಿದರು. ಅಡಕೆಯ ಆಮದು ಕಡಿಮೆಗೊಂಡಿರುವುದರಿಂದ ಸ್ಥಳೀಯವಾಗಿ ಉತ್ತಮ ದರ ಲಭಿಸುತ್ತಿದೆ. ಅಡಕೆ ಚಹಾ ಕೂಡ ಮಾರುಕಟ್ಟೆಯಲ್ಲಿದೆ. ಅಡಕೆ ಬಳಕೆಯಿಂದ ಆರೋಗ್ಯ ಸಮಸ್ಯೆ ಆಗಲಾರದು. ಅಡಕೆ ಬೆಳೆಗೆ ಕೆಲವೆಡೆ ರೋಗಗಳೂ ಕಾಣಿಸಿಕೊಂಡಿವೆ. ಎಲ್ಲೆಲ್ಲಿ ಸಮಸ್ಯೆ ಇದೆ ಎಂಬ ಸಮಗ್ರ ಸಮೀಕ್ಷೆ ನಡೆಸುತ್ತೇವೆ. ಸ್ವತಃ ನಾನೇ ತೆರಳಿ ವೀಕ್ಷಣೆ ಮಾಡಲಿದ್ದೇನೆ. ರೋಗ ನಿಯಂತ್ರಣಕ್ಕೆ ಯಾವ ರೀತಿಯ ಔಷಧ ಕಂಡು ಹಿಡಿಯಬೇಕು ಎಂಬ ಬಗ್ಗೆ ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಲಿದ್ದೇನೆ. ಕೆಲವೆಡೆ ತೆಂಗಿನ ಬೆಳೆಗೆ ಬಿಳಿ ನೊಣ ಕಾಡುತ್ತಿದೆ. ಈ ಎಲ್ಲವನ್ನೂ ಪರಿಗಣಿಸಲಿದ್ದೇವೆ ಎಂದರು.

ರೈತರಿಗೆ ಸಂತಸದ ಸುದ್ದಿ: ಅಡಕೆಗೆ ಬಂಪರ್‌ ಬೆಲೆ..! ...

ಅಧಿಕಾರಿಗಳು ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ಆಯೋಜನೆ ಮಾಡಬೇಕು. ಪ್ರತಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಯೋಜನೆ ಹಾಕಿಕೊಳ್ಳುತ್ತೇವೆ. ಹೊಸ ತಳಿಯ ಮತ್ತು ಹೆಚ್ಚು ಇಳುವರಿ ನೀಡುವ ತಳಿಗಳನ್ನು ರೈತರು ಬೆಳೆಯಲು ಉತ್ತೇಜಿಸಬೇಕಾಗಿದೆ. ಫಲಫುಷ್ಪ ಪ್ರದರ್ಶನ ಕೋವಿಡ್‌ ಕಾರಣದಿಂದಾಗಿ ಈ ವರ್ಷ ನಡೆಸುತ್ತಿಲ್ಲ. ಇದರ ಅರ್ಥ ಇಲಾಖೆಯಲ್ಲಿ ಹಣ ಇಲ್ಲ ಎಂದಲ್ಲ. ಯಾವ ಕಾಲಕ್ಕೆ ಏನು ಮಾಡಬೇಕು ಎಂಬುದನ್ನು ನಾವು ಗಮನಿಸುತ್ತಲೇ ಇದ್ದೇವೆ ಎಂದರು.

ತೋಟಗಾರಿಕೆ ಇಲಾಖೆಯನ್ನು ನಾನು ಈಗಷ್ಟೇ ವಹಿಸಿಕೊಂಡಿರುವುದರಿಂದ ಎಲ್ಲ ಜಿಲ್ಲೆಗಳ ಸಮಸ್ಯೆಗಳನ್ನು ಗಮನಿಸುತ್ತಿದ್ದೇನೆ. ಮುಖ್ಯಮಂತ್ರಿಗಳಲ್ಲಿಯೂ ನಾನು ಈ ಕುರಿತು ಮಾತನಾಡಿದ್ದು, ಬಜೆಟ್‌ನಲ್ಲಿ ರೈತರ ಸಲುವಾಗಿ ಹೆಚ್ಚು ಅನುದಾನ ನೀಡುವಂತೆ ಕೇಳಿದ್ದೇನೆ. ಈ ಕುರಿತು ಮುಖ್ಯಮಂತ್ರಿಗಳೂ ಸಹ ಒಪ್ಪಿಗೆ ಸೂಚಿಸಿದ್ದಾರೆ. ಬೆಳೆದ ಹಣ್ಣು ತರಕಾರಿ ಸಂರಕ್ಷಣೆಗೆ ರಾಜ್ಯದ ಹಲವೆಡೆ ಕೋಲ್ಡ್‌ ಸ್ಟೋರೇಜ್‌ ಬೇಡಿಕೆ ಇದೆ. ಕೆಲವೆಡೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ರೈತರು ಕೇಳುತ್ತಿದ್ದಾರೆ. ರೈತರ ಬಳಿ ಸ್ವತಃ ನಾನೇ ತೆರಳಿ ಅವರ ಸಮಸ್ಯೆ ಆಲಿಸಿದ್ದೇನೆ ಎಂದರು.

ಇತ್ತೀಚಿನ ವರ್ಷಗಳ ಅತಿವೃಷ್ಟಿಯಿಂದಾದ ಹಾನಿಗೆ ಪರಿಹಾರ ನೀಡುವ ಕಾರ್ಯ ನಡೆಸುತ್ತಿದ್ದೇವೆ. ಕೆಲವೆಡೆ ಸೂಕ್ತ ಮಾಹಿತಿ ತಂತ್ರಾಂಶಕ್ಕೆ ಅಳವಡಿಸದೇ ಇರುವುದರಿಂದ ಪರಿಹಾರ ನೀಡುವಿಕೆ ಸಾಧ್ಯವಾಗಿಲ್ಲ. ಆದಷ್ಟುಶೀಘ್ರವಾಗಿ ಇವರಿಗೂ ಪರಿಹಾರ ಒದಗಿಸಲಿದ್ದೇವೆ.

ಅಧಿಕಾರಿಗಳು ನಾಲ್ಕು ಗೋಡೆ ಮಧ್ಯೆ ಕುಳಿತು ಕೆಲಸ ಮಾಡಿದರೆ ಸಾಲದು. ಜನಸಾಮಾನ್ಯರ ಬಳಿ ತೆರಳಲೇಬೇಕು. ಜನಸಂಪರ್ಕ ಸಭೆ ನಡೆಸಿದಾಗ ರೈತರು ಮತ್ತು ಅಧಿಕಾರಿಗಳು ನೇರ ಸಂಪರ್ಕಕ್ಕೆ ಬಂದು, ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಬಹುದಾಗಿದೆ ಎಂದರು.

ಮಾರಿಕಾಂಬಾ ದೇವಾಲಯದ ಅಧ್ಯಕ್ಷ ವೆಂಕಟೇಶ ನಾಯ್ಕ ಇದ್ದರು.

click me!