
ಮೈಸೂರು (ಅ.26): ಪರಿಷ್ಕರಣೆಯಲ್ಲಿ ಅರ್ಹರ ಕಾರ್ಡ್ ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾವಣೆ ಆಗಿದ್ದಲ್ಲಿ ಎರಡು ದಿನಗಳಲ್ಲಿ ಪುನಃ ಬಿಪಿಎಲ್ ಕಾರ್ಡ್ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಸ್ಥಾಪಿಸಿರುವ ಆಹಾರ ಮಳಿಗೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಪಡಿತರ ಕಾರ್ಡ್ ಗಳ ಪರಿಷ್ಕರಣೆ ನಡೆಸಲಾಗಿತ್ತಿದ್ದು, ಅರ್ಹರು ಒಂದು ವೇಳೆ ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾವಣೆಯಾಗಿದ್ದರೆ ಸಂಬಂಧಿಸಿದ ತಾಲೂಕಿನಲ್ಲಿ ತಹಸೀಲ್ದಾರರಿಗೆ ಭೇಟಿ ಮಾಡಿ ಮನವಿ ಸಲ್ಲಿಸಬೇಕು. ಅವರು ಪರಿಶೀಲನೆ ನಡೆಸಿ ಪುನಃ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ ವಹಿಸುವರು ಎಂದರು.
ಅನ್ನಭಾಗ್ಯ ಯೋಜನೆಯಡಿ ಅರ್ಹ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿ ವಿತರಣೆ ಮಾಡುತ್ತಿದ್ದು, ಮುಂದಿನ ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಒಳಗೊಂಡ ಇಂದಿರಾ ಕಿಟ್ ವಿತರಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಆಹಾರ ಬಹಳ ಮುಖ್ಯವಾಗಿದ್ದು, ಆಹಾರವನ್ನು ವ್ಯರ್ಥ ಮಾಡದೇ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಚಲ್ಲದಿರಿ ಅನ್ನ ಬಡವರಿಗದೇ ಚಿನ್ನ ಎಂದು ಹೇಳಿದರು.
ಅಂತ್ಯೋದಯ ಅಂದರೆ ಹಸಿವನ್ನು ಅಂತ್ಯ ಮಾಡುವುದು. ಆಹಾರ ಸಚಿವರಾಗಿ ಮುನಿಯಪ್ಪ ಅವರು ಬಿಪಿಎಲ್ ಅಂತ್ಯೋದಯ ಕುಟುಂಬಗಳಿಗೆ 10 ಕೆ.ಜಿ ಉಚಿತ ಅಕ್ಕಿ ನೀಡುವ ಯೋಜನೆ ತಂದರು. ಇದನ್ನು ಈಗ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿಗೆ ಇಂದಿರಾ ಕಿಟ್ ಮೂಲಕ ಬೇಳೆ, ಎಣ್ಣೆ ಅಂತಹ ಆಹಾರಧಾನ್ಯ ನೀಡಲು ಸಂಪುಟದಲ್ಲಿ ಅನುಮೋದನೆ ಪಡೆದಿದ್ದಾರೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರಿಗೂ ಬದುಕುವ ಹಕ್ಕು:
ನಮ್ಮ ಸರ್ಕಾರವು ಪ್ರತಿಯೊಬ್ಬರಿಗೂ ಬದುಕುವ ಹಕ್ಕು ನೀಡುವ ಸಲುವಾಗಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು ಪ್ರತಿ ಕುಟುಂಬಗಳಿಗೂ ಆಹಾರ ಧಾನ್ಯ ನೀಡುತ್ತಿದ್ದೇವೆ. ಅದರಂತೆ ಇಂದು ಆಹಾರ ಇಲಾಖೆ ಮಳಿಗೆಯಲ್ಲಿ ಅನೇಕ ಉಪಯುಕ್ತ ಮಾಹಿತಿಗಳು ಇವೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಆಹಾರ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಮಂಟೇಸ್ವಾಮಿ, ತೂಕ ಮತ್ತು ಮಾಪನ ಇಲಾಖೆ ಅಧಿಕಾರಿ ಮಹದೇವಸ್ವಾಮಿ ಮೊದಲಾದವರು ಇದ್ದರು.
ಆಹಾರ ಮಳಿಗೆಯಲ್ಲಿ ಹಳ್ಳಿಯ ಚಿತ್ರಣ
ಸರ್ಕಾರದ ಮಹಾತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಕುರಿತು ವಸ್ತುಪ್ರರ್ದಶನದಲ್ಲಿ ಹಳ್ಳಿಯ ಜೀವನಶೈಲಿಯ ಕುರಿತ ಪ್ರದರ್ಶನ ಮಾಡಲಾಗಿದ್ದು, ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ, ಜೋಳ, ರಾಗಿಯ ಕುರಿತು ಹಾಗೂ ಕಾನೂನು ಮಾಪನ ಶಾಸ್ತ್ರದ ಇಲಾಖೆಯ ತೂಕದ ಸಾಮಗ್ರಿಗಳ ಕುರಿತು ವಸ್ತುಪ್ರದರ್ಶನವನ್ನು ಮಾಡಲಾಗಿದೆ. ಹಸಿವು ಮುಕ್ತ ಕರ್ನಾಟಕ ಸಂಕಲ್ಪದೊಂದಿಗೆ ಸಮೃದ್ಧ ಹಳ್ಳಿಯ ಚಿತ್ರಣವನ್ನು ಪ್ರದರ್ಶಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ