
ಗಂಗಾವತಿ (ಜು.07): ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆಂಜನೇಯ ಜನ್ಮಸ್ಥಳಕ್ಕೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಭೇಟಿ ನೀಡಿದ ವೇಳೆ ಪೂಜೆ, ಆರತಿ ಮಾಡಲು ಅರ್ಚಕ ವಿದ್ಯಾದಾಸ ಬಾಬಾ ನಿರಾಕರಿಸಿದ ಘಟನೆ ಭಾನುವಾರ ನಡೆದಿದೆ. ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದ ನಂತರ ಮೊದಲ ಬಾರಿಗೆ ಅಂಜನಾದ್ರಿ ಬೆಟ್ಟ ಏರಿ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲು ಸುರೇಳ ಇಟ್ನಾಳ ಹೋಗಿದ್ದರು.
ಈ ವೇಳೆ ದೇವಸ್ಥಾನದಲ್ಲಿದ್ದ ವಿದ್ಯಾದಾಸ ಬಾಬಾ ತಾವು ಪೂಜೆ ಮಾಡದೆ, ನೀವು ಮುಜರಾಯಿ ಇಲಾಖೆಯಿಂದ ನೇಮಕಗೊಂಡಿರುವ ಅರ್ಚಕರನ್ನು ಕರೆದುಕೊಂಡು ಬಂದಿದ್ದೀರಿ. ಅವರಿಂದ ಪೂಜೆ ಮಾಡಿಸಿ ಎಂದು ಹೇಳಿದರು. ಕೊನೆಗೆ ಇಲಾಖೆಯಿಂದ ನೇಮಕಗೊಂಡಿದ್ದ ಅರ್ಚಕರು ಜಿಲ್ಲಾಧಿಕಾರಿಗಳಿಂದ ಸಂಕಲ್ಪ ಮಾಡಿಸಿ ಪೂಜೆ ನೆರವೇರಿಸಿದರು. ಇತ್ತೀಚಿಗೆ ವಿದ್ಯಾದಾಸಾ ಬಾಬಾ ಅವರು ಆಂಜನೇಯಸ್ವಾಮಿ ಮುಂದೆ ಕಾಣಿಕೆ ಪೆಟ್ಟಿಗೆ ಇಟ್ಟಿರುವುದಕ್ಕೆ ಇಲಾಖೆ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡಿದ್ದರು. ಅಲ್ಲದೇ ಈ ವಿಷಯವಾಗಿ ನ್ಯಾಯಾಂಗದ ಮೆಟ್ಟಿಲು ಏರಿದ್ದರು.
ಭಕ್ತರಿಗೆ ವರದಾನವಾಗುವ ಸಮುಚ್ಚಯ ಕೇಂದ್ರ: ಐತಿಹಾಸಿಕ ಆಂಜನೇಯ ಜನ್ಮಸ್ಥಳ ಪ್ರಗತಿಯತ್ತ ಸಾಗಿದ್ದು, ಇನ್ನೂ 6 ತಿಂಗಳಲ್ಲಿ ಭಕ್ತರಿಗೆ ವಾಸ್ತವ್ಯ ಮಾಡಲು ಸಮುಚ್ಚಯ ಕೇಂದ್ರ ಪೂರ್ಣಗೊಂಡು ವರದಾನವಾಗಲಿದೆ. ಕಳೆದ 2024-25ನೇ ಸಾಲಿನಲ್ಲಿ ಸರ್ಕಾರ ₹100 ಕೋಟಿ ಅನುದಾನ ನೀಡಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಪ್ರವಾಸೋದ್ಯಮ ಇಲಾಖೆಯ ನೇತೃತ್ವದಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ. ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದ್ದು, ಬರುವ ಭಕ್ತರು ಸೇರಿದಂತೆ ವಿದೇಶಿ ಪ್ರವಾಸಿಗರಿಗೂ ಅನುಕೂಲವಾಗುವ ರೀತಿಯಲ್ಲಿ ಕಟ್ಟಡದ ಪ್ರಥಮ ಹಂತದಲ್ಲಿ ಸಮುಚ್ಚಯ ನಿರ್ಮಾಣವಾಗಲಿದೆ.
ಏನೇನು ನಿರ್ಮಾಣ?: ಅಂಜನಾದ್ರಿ ಬೆಟ್ಟದ ಕೆಳಗೆ ಕಟ್ಟಡಗಳ ನಿರ್ಮಾಣ ಕಾರ್ಯ ನಡೆದಿದೆ. ಮೊದಲನೇ ಹಂತದಲ್ಲಿ 12 ಕಾಮಗಾರಿಗಳು ನಡೆದಿದ್ದು, ಪ್ರವಾಸಿ ಮಂದಿರ, ಸಾರ್ವಜನಿಕ ಶೌಚಾಲಯ, ವಾಣಿಜ್ಯ ಮಳಿಗೆಗಳು ಡಿಸೆಂಬರ್‌ನಲ್ಲಿ ನಿರ್ಮಾಣವಾಗಲಿವೆ. ಭೋಜನದ ಹಾಲ್, ಸಮುದಾಯ ಭವನ, ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲಿದೆ. ಅಲ್ಲದೇ ವಾಣಿಜ್ಯ ಮಳಿಗೆ, ಸಾರ್ವಜನಿಕರಿಗೆ ಶೌಚಾಲಯ, ಸ್ನಾನದ ಘಟ್ಟ, ವಿಐಪಿಗಳಿಗೆ ಅತಿಥಿ ಗೃಹ ನಿರ್ಮಾಣ, ಸಿಬ್ಬಂದಿಗೆ 20 ವಸತಿ ಗೃಹಗಳು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವ ವ್ಯವಸ್ಥೆ ಪ್ರವಾಸೋದ್ಯಮ ಇಲಾಖೆ ಕೈಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ