‘ಗೌರಿ ಲಂಕೇಶ್’ ಆಗುವ ಕನಸ್ಸು ಕಂಡಿದ್ದ ಅಮೂಲ್ಯ!

By Kannadaprabha NewsFirst Published Feb 24, 2020, 7:49 AM IST
Highlights

‘ಗೌರಿ’ ಆಗುವ ಕನಸ್ಸು ಕಂಡಿದ್ದ ಅಮೂಲ್ಯ!| ಗೌರಿಯಿಂದ ಪ್ರಭಾವಿತ| ಗೌರಿ ಲಂಕೇಶ್‌ ಥರ ಆಗಬೇಕೆಂದು ಸ್ನೇಹಿತರ ಬಳಿ ಹೇಳುತ್ತಿದ್ದಳು| ಪೊಲೀಸ್‌ ತನಿಖೆ ವೇಳೆ ಬೆಳಕಿಗೆ| 70 ಮಂದಿ ತಂಡ ಕಟ್ಟಿರಾಜಾದ್ಯಂತ ನಡೆಯುತ್ತಿದ್ದ ಹೋರಾಟದಲ್ಲಿ ಭಾಗಿ| 25 ಕಾರ‍್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣ|

ಬೆಂಗಳೂರು[ಫೆ.24]: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ಬಂಧಿತೆ ಅಮೂಲ್ಯ ಲಿಯೋನ್‌ ಪತ್ರಕರ್ತೆ ‘ಗೌರಿ ಲಂಕೇಶ್‌’ ಆಗಬೇಕೆಂದು ಕನಸು ಕಂಡಿದ್ದಳು ಎಂಬುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಗೌರಿ ಲಂಕೇಶ್‌ ಅವರ ಚಿಂತನೆ, ಭಾಷಣಗಳಿಂದ ಪ್ರಚೋದನೆಗೊಳಗಾಗಿದ್ದ ಅಮೂಲ್ಯ ಎಡಪಂಥಿಯ ಚಿಂತನೆಗಳನ್ನೊಳಗೊಂಡ ವ್ಯಕ್ತಿಗಳು ಹಾಗೂ ಪ್ರಗತಿಪರರ ಆತ್ಮೀಯತೆ ಹೊಂದಿದ್ದಳು. ಸುಮಾರು 60-70 ಮಂದಿಯ ತಂಡ ಕಟ್ಟಿಕೊಂಡು ರಾಜ್ಯಾದ್ಯಂತ ನಡೆಯುತ್ತಿದ್ದ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದಳು. ಈ ಸಂದರ್ಭದಲ್ಲಿ ಅಮೂಲ್ಯ ತನ್ನ ಸ್ನೇಹಿತರ ಬಳಿ, ತಾನೂ ಮತ್ತೊಬ್ಬ ಗೌರಿ ಲಂಕೇಶ್‌ ಆಗಬೇಕೆಂದು ತನ್ನ ಉದ್ದೇಶವನ್ನು ವ್ಯಕ್ತಪಡಿಸುತ್ತಿದ್ದಳು ಎಂದು ಆಕೆಯ ಸ್ನೇಹಿತರು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಅಮೂಲ್ಯ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ರೀತಿ ನಡೆದುಕೊಳ್ಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

'ದೇಶದ್ರೋಹಿ ಅಮೂಲ್ಯ ಎನ್‌ಕೌಂಟರ್ ಮಾಡಿದ್ರೆ 10 ಲಕ್ಷ ಬಹುಮಾನ'

ಸಿಕ್ಕಿತ್ತು ವಿಐಪಿ ಪಾಸ್‌, ವೇದಿಕೆ ಏರುವ ಬ್ಯಾಡ್ಜ್‌:

ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಯೋಜಕರು ಅಮೂಲ್ಯಗೆ ಆಹ್ವಾನ ನೀಡಿರಲಿಲ್ಲ ಎಂದು ಹೇಳುತ್ತಿದ್ದರಾದರೂ ಆಯೋಜಕರಲ್ಲೇ ಒಬ್ಬರು ಆಕೆಗೆ ವಿಐಪಿ ಪಾಸ್‌ ನೀಡಿದ್ದು, ವೇದಿಕೆ ಏರುವ ಮೊದಲು ಬ್ಯಾಡ್ಜ್‌ ಕೂಡ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನಷ್ಟುಮಂದಿಗೆ ನೋಟಿಸ್‌ ಜಾರಿ ವಿಚಾರಣೆ ನಡೆಸಲಾಗುವುದು. ಅಮೂಲ್ಯಳನ್ನು ಮತ್ತೆ ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

25 ಪ್ರಚೋದಕ ಭಾಷಣ:

ಅಮೂಲ್ಯ ಇದುವರೆಗೂ ಸುಮಾರು 70ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, 25 ಕಾರ್ಯಕ್ರಮಗಳಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಈ ಕುರಿತು 70 ಭಾಷಣದ ವಿಡಿಯೋ ತುಣುಕುಗಳನ್ನು ವಿಶೇಷ ತನಿಖಾ ತಂಡ ಪರಿಶೀಲನೆ ನಡೆಸಿದೆ. ಅಲ್ಲದೆ, ಮೂವರು ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕರ ಪರವಾಗಿಯೂ ತನ್ನ ಭಾಷಣ ಮಾಡಿರುವ ವಿಡಿಯೋ ಕೂಡ ಪತ್ತೆಯಾಗಿದೆ.

ಅಮೂಲ್ಯ ಬಗ್ಗೆ ಆತುರ ಬೇಡ: ಡಿಕೆಶಿ

ಪಾಕ್‌ ಪರ ಘೋಷಣೆ ದೇಶದ ವಿಚಾರ, ಯಾರೂ ನಮ್ಮ ದೇಶಕ್ಕೆ ಅಗೌರವ ತೋರುವುದು, ಬೇರೆ ದೇಶದ ಪರ ನಿಲ್ಲುವುದು ಸರಿಯಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಪಾಕ್ ಪರ ಅಮೂಲ್ಯ ಘೋಷಣೆ: 6 ತಾಸು ಜೆಡಿಎಸ್‌ ಸದಸ್ಯನ ವಿಚಾರಣೆ!

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಜೈ ಅಂದರೆ ನಾನೂ ಅದಕ್ಕೆ ಪ್ರೋತ್ಸಾಹ ಕೊಡುವುದಿಲ್ಲ. ಆದರೆ, ಆ ಹೆಣ್ಣುಮಗಳು ಏನು ಹೇಳಬೇಕೆಂದಿತ್ತೋ ಏನೋ ಗೊತ್ತಿಲ್ಲ. ಹಿಂದೆಲ್ಲಾ ಅವಳು ವಿಶ್ವಮಾನವ ತತ್ವ ಸೇರಿದಂತೆ ಅವಳದೇ ಆದ ತತ್ವ ಇಟ್ಟುಕೊಂಡು ಮಾತನಾಡಿದ್ದಾಳೆ. ಈಗ ಭಾಷಣ ಮಾಡುವಾಗ ಅರ್ಧಕ್ಕೆ ಮೈಕ್‌ ಕಿತ್ತುಕೊಂಡು ಹೋಗಿದ್ದು ಗಮನಿಸಿದ್ದೇನೆ. ಧ್ವನಿ ಎತ್ತುವವರನ್ನು ಸಂಪೂರ್ಣ ಮೊಟಕುಗೊಳಿಸಲು ಅವಕಾಶವಿಲ್ಲ. ನೋಡೋಣ ಮುಂದೆ ಏನಾಗುತ್ತೆ, ಆತುರಪಡುವುದು ಬೇಡ ಎಂದು ತಿಳಿಸಿದರು.

"

ಪಾಕ್‌ ಪರ ಘೋಷಣೆ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸುತ್ತಿರುವ ಬಗ್ಗೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರಿಗೆ ಕಾಂಗ್ರೆಸ್‌ ಬಿಟ್ಟು ಬೇರೇನೂ ಕಾಣುತ್ತಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ದೇಶಕ್ಕೆ ಸಂಬಂಧಿಸಿದ ವಿಚಾರವೇ ಹೊರತು ಕಾಂಗ್ರೆಸ್‌ಗೆ ಸೀಮಿತವಲ್ಲ. ಅದನ್ನು ಕಾಂಗ್ರೆಸ್‌ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಟ್ಟಿದೆ. ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಭಾರತೀಯರಿದ್ದಾರೆ. ಅಲ್ಲಿ ಅಲ್ಪಸಂಖ್ಯಾತರಾಗಿರುವ ಭಾರತೀಯರನ್ನು ಯಾವ ಭಾವನೆಯಿಂದ ನೋಡಲಾಗುತ್ತಿದೆ ಎಂಬುದೂ ಮುಖ್ಯ. ಈ ತಿದ್ದುಪಡಿ ಆದ ಮೇಲೆ ಬೇರೆ ಬೇರೆ ದೇಶಗಳು ಭಾರತವನ್ನು ಹೇಗೆ ನೋಡಲಾರಂಭಿಸಿವೆ. ವಿಶ್ವಬ್ಯಾಂಕ್‌ ಹಾಗೂ ಯಾವೆಲ್ಲಾ ರಾಷ್ಟ್ರಗಳು ಭಾರತಕ್ಕೆ ಆರ್ಥಿಕ ನೆರವು ಕಡಿತಕ್ಕೆ ಯೋಚಿಸಿರವೆ ಎಂದು ಈಗಾಗಲೇ ಕೇಂದ್ರ ಸರ್ಕಾರಕ್ಕೂ ಗೊತ್ತಾಗಿದೆ’ ಎಂದರು.

ಅಮೂಲ್ಯ ಮೇಲಷ್ಟೇ ಅಲ್ಲ, ಆಯೋಜಕರ ವಿರುದ್ಧವೂ ಕ್ರಮ: ಭಾಸ್ಕರ್ ರಾವ್

click me!