ಹಳ್ಳಿಗಳ ಅಭಿವೃದ್ಧಿಗೆ ಅಮೃತ ಗ್ರಾಪಂ ಆರಂಭ

Kannadaprabha News   | Asianet News
Published : Sep 24, 2021, 11:52 AM IST
ಹಳ್ಳಿಗಳ ಅಭಿವೃದ್ಧಿಗೆ ಅಮೃತ ಗ್ರಾಪಂ ಆರಂಭ

ಸಾರಾಂಶ

*   ‘ಅಮೃತ ಗ್ರಾಮ ಪಂಚಾಯಿತಿ’ ಯೋಜನೆ ಉದ್ಘಾಟಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ *   750 ಗ್ರಾಮ ಪಂಚಾಯತ್‌ಗಳನ್ನು 2022ರ ಮಾರ್ಚ್ ಅಂತ್ಯದ ವೇಳೆಗೆ ಸಮಗ್ರವಾಗಿ ಅಭಿವೃದ್ಧಿ *   ಸೌಲಭ್ಯ ಪಡೆದುಕೊಳ್ಳಲು ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಆನ್ಲೈನ್ ಸೇವೆ   

ಬೆಂಗಳೂರು(ಸೆ.24): ರಾಜ್ಯದ 750 ಗ್ರಾಮ ಪಂಚಾಯಿತಿ(Gram Panchayat) ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಬೀದಿ ದೀಪ, ಎಲ್ಲ ಮನೆಗೆ ಕುಡಿಯುವ ನೀರಿನ ಕೊಳಾಯಿ ಸಂಪರ್ಕ, ಶಾಲೆ, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯ ಸೌಲಭ್ಯ, ಗೋದಾಮು ನಿರ್ಮಾಣ, ಕೆರೆ, ಕಲ್ಯಾಣಿಗಳ ಪುನಶ್ಚೇತನ ಸೇರಿದಂತೆ ಇಡೀ ಪಂಚಾಯಿತಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ರಾಜ್ಯ ಸರ್ಕಾರದ ಮಹತ್ವದ ‘ಅಮೃತ ಗ್ರಾಮ ಪಂಚಾಯಿತಿ’ ಯೋಜನೆಗೆ ಚಾಲನೆ ನೀಡಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅನುಷ್ಠಾನಕ್ಕೆ ತರಲಿರುವ ಈ ಯೋಜನೆಯನ್ನು ಗುರುವಾರ ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್(Giriraj Singh) ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಅಮೃತ ಗ್ರಾಮ ಪಂಚಾಯತ್ ಯೋಜನೆಯಲ್ಲಿ 750 ಗ್ರಾಮ ಪಂಚಾಯಿತಿಗಳ ಸರ್ವಾಂಗೀಣ ಅಭಿವೃದ್ಧಿಯ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಪಂಚಾಯಿತಿಗೆ ಸರಾಸರಿ 3 ಕೋಟಿ ರುಪಾಯಿಗಳಂತೆ ಸುಮಾರು 2,300 ಕೋಟಿ ರುಪಾಯಿ ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ, 2022ರ ಮಾರ್ಚ್ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸಿದ ಪಂಚಾಯಿತಿಗಳಿಗೆ ಹೆಚ್ಚುವರಿಯಾಗಿ 25 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.

ಕೊಪ್ಪಳ: ಕೋವಿಡ್‌ ನಿರ್ವಹಣೆ, ದೇಶಕ್ಕೆ ಮುನಿರಾಬಾದ್‌ ಮಾದರಿ..!

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಮಾತನಾಡಿ, ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿದೆ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕೇಂದ್ರದಿಂದ ಅತಿ ಹೆಚ್ಚು ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ ನೂತನವಾಗಿ ಜಾರಿ ಮಾಡಿರುವ ಅಮೃತ ಗ್ರಾಮ ಪಂಚಾಯತ್ ಯೋಜನೆಯಲ್ಲಿ ಇ- ಗ್ರಂಥಾಲಯ ಪರಿಕಲ್ಪನೆ ಉತ್ತಮ ಸೇವೆಯಾಗಿದೆ ಎಂದು ಶ್ಲಾಘಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಯೋಜನೆ ಬಗ್ಗೆ ವಿವರಿಸಿ, ನರೇಗಾ ಯೋಜನೆಯಡಿ ರಾಜ್ಯಕ್ಕೆ ನೀಡಿದ್ದ 13 ಕೋಟಿ ಮಾನವ ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, 20 ಕೋಟಿಗೆ ಮಾನವ ದಿನಗಳಿಗೆ ಹೆಚ್ಚಳ ಮಾಡಬೇಕು. ಅಲ್ಲದೆ, 1,700 ಕಿ.ಮೀ ರಸ್ತೆ ನಿರ್ಮಾಣ ಹಾಗೂ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಶಾಲೆಗಳ ದುರಸ್ತಿಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.
ಉನ್ನತ ಶಿಕ್ಷಣಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ತೋಟಗಾರಿಕೆ ಸಚಿವ ಮುನಿರತ್ನ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಳ್ಳಿಗಳಲ್ಲೂ ಮನೆ ಬಾಗಿಲಿಗೆ ಸರ್ಕಾರಿ ಸೇವೆ

ಸರ್ಕಾರದ ವಿವಿಧ ಸೇವೆಗಳನ್ನು ಗ್ರಾ.ಪಂ.ಗಳ ಮೂಲಕ ಜನ ಸಾಮಾನ್ಯರಿಗೆ ತಲುಪಿಸಲು ಹೊಸ ಯೋಜನೆ ರೂಪಿಸುತ್ತಿದ್ದು, ಜ.26 ರಂದು ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ಪಿಂಚಣಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಗ್ರಾಮ ಪಂಚಾಯತ್‌ಗಳ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಆನ್ಲೈನ್ ಸೇವೆ ಒದಗಿಸಲಾಗುವುದು. ಜೊತೆಗೆ ‘ಗ್ರಾಮ ಸೇವಾ’ ಎಂಬ ಹೊಸ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು.

ಏನಿದು ಅಮೃತ ಗ್ರಾಮ ಪಂಚಾಯ್ತಿ ಯೋಜನೆ?

750 ಗ್ರಾಮ ಪಂಚಾಯತ್‌ಗಳನ್ನು 2022ರ ಮಾರ್ಚ್ ಅಂತ್ಯದ ವೇಳೆಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಆಯ್ಕೆಯಾದ ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಶೇ.100ರಷ್ಟು ಘನ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ, ವೈಜ್ಞಾನಿಕವಾಗಿ ತ್ಯಾಜ್ಯ ನೀರು ವೈಜ್ಞಾನಿಕ ನಿರ್ವಹಣೆ, ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ, ಅಮೃತ್ ಉದ್ಯಾನವನಗಳ ನಿರ್ಮಾಣ, ಗ್ರಂಥಾಲಯಗಳ ಡಿಜಿಟಲೀಕರಣ, ಆಟದ ಮೈದಾನ ಹಾಗೂ ಆವರಣ ಗೋಡೆಗಳನ್ನು ನಿರ್ಮಾಣ, ರೈತರಿಗೆ ಗೋದಾಮ ನಿರ್ಮಾಣ ಹಾಗೂ ಕೆರೆಗಳು ಮತ್ತು ಕಲ್ಯಾಣಿಗಳ ಪುನಶ್ಚೇತನಗೊಳಿಸಲಾಗುವುದು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!
ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!