ಅಂತರ್‌ಜಿಲ್ಲೆ, ಅಂತಾರಾಜ್ಯ ಓಡಾಟ ಇಂದೇ ಕೊನೆ: ರಸ್ತೆಗಿಳಿದವರಿಗೆ ಬೆತ್ತದೇಟು!

By Kannadaprabha News  |  First Published May 9, 2021, 7:18 AM IST

ರಸ್ತೆಗಿಳಿದವರಿಗೆ ಬೆತ್ತದೇಟು!| ಅಂತರ್‌ಜಿಲ್ಲೆ, ಅಂತಾರಾಜ್ಯ ಓಡಾಟ ಇಂದೇ ಕೊನೆ| ಅನಗತ್ಯವಾಗಿ ಸಂಚರಿಸಿದವರಿಗೆ ಲಾಠಿ ರುಚಿ| 8000ಕ್ಕೂ ಹೆಚ್ಚು ವಾಹನಗಳು ವಶಕ್ಕೆ| ನಾಳೆಯಿಂದ ಸೆಮಿ ಲಾಕ್ಡೌನ್‌ ಶುರು| ಮತ್ತಷ್ಟು ಬಿಗಿ ನಿರ್ಬಂಧಕ್ಕೆ ಪೊಲೀಸರು ಸಜ್ಜು| 


ಬೆಂಗಳೂರು(ಮೇ.09): ಕೊರೋನಾ ಸೋಂಕು ತಡೆಗೆ ಸರ್ಕಾರ ಘೋಷಿಸಿರುವ ಜನತಾ ಕಫä್ರ್ಯ ನಿಬಂಧನೆಗಳನ್ನು ಗಾಳಿಗೆ ತೂರುತ್ತಿರುವ ಸಾರ್ವಜನಿಕರಿಗೆ ಶನಿವಾರ ಪೊಲೀಸರು ದಂಡ, ಲಾಠಿ ರುಚಿ ತೋರಿಸುವ ಮೂಲಕ ತೀವ್ರ ಬಿಸಿ ಮುಟ್ಟಿಸಿದ್ದಾರೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಕಫä್ರ್ಯ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದ್ದಾರೆ. ಬೇಕಾಬಿಟ್ಟಿರಸ್ತೆಗಿಳಿದಿರುವ 8100ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡುವುದರೊಂದಿಗೆ ದಂಡವನ್ನೂ ವಿಧಿಸಿದ್ದಾರೆ. ಈ ಮೂಲಕ ಸೋಮವಾರದಿಂದ ಆರಂಭವಾಗಲಿರುವ ಸೆಮಿ ಲಾಕ್‌ಡೌನ್‌ ಮತ್ತಷ್ಟುಕಠಿಣವಾಗಿರಲಿದೆ ಎಂಬ ಪರೋಕ್ಷ ಎಚ್ಚರಿಕೆಯನ್ನೂ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಲ್ಲಿ ಬೆಳಗ್ಗೆಯಿಂದಲೇ ರಸ್ತೆಗಿಳಿದಿದ್ದ ಪೊಲೀಸರು ಮಧ್ಯಾಹ್ನದ ನಂತರ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು. ಸಕಾರಣವಿಲ್ಲದೆ ವಾಹನಗಳಲ್ಲಿ ಓಡಾಡುತ್ತಿದ್ದವರಿಗೂ ಬಿಸಿ ಮುಟ್ಟಿಸಿದ ಪೊಲೀಸರು ಬೆತ್ತದ ರುಚಿ ತೋರಿಸಿದ್ದಷ್ಟೇ ಅಲ್ಲದೆ, ವಾಹನಗಳನ್ನೂ ವಶಕ್ಕೆ ಪಡೆದರು. ಈ ವೇಳೆ ಪೊಲೀಸರ ಜತೆ ವಾಗ್ವಾದ ನಡೆಸಿದವರನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದರು. ಚಿಕ್ಕಬಳ್ಳಾಪುರ, ಬೆಳಗಾವಿ, ಚಿತ್ರದುರ್ಗ, ಗದಗ ಸೇರಿದಂತೆ ಉಳಿದ ಕೆಲ ಜಿಲ್ಲೆಗಳಲ್ಲೂ ಅನಗತ್ಯವಾಗಿ ಓಡಾಡುತ್ತಿದ್ದವರು ಪೊಲೀಸರ ಲಾಠಿಯೇಟಿನ ರುಚಿ ನೋಡಬೇಕಾಯಿತು.

Tap to resize

Latest Videos

"

ಬೆಳಗಾವಿ ಮಾರುಕಟ್ಟೆಯಲ್ಲಿ ಅಗತ್ಯವಸ್ತುಗಳ ಖರೀದಿಗೆ ಇದ್ದ ಸಮಯ ಮುಕ್ತಾಯವಾದರೂ ಕೆಲವರು ವ್ಯಾಪಾರ ಮುಂದುವರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿ ಅವರನ್ನು ತೆರವುಗೊಳಿಸಿದರು. ಚಿತ್ರದುರ್ಗದಲ್ಲಿ ಮಧ್ಯಾಹ್ನದ ವೇಳೆ ನಿಯಮಮೀರಿ ಓಡಾಡಿದವರಿಗೆ, ಚಿಕ್ಕಬಳ್ಳಾಪುರದ ಟೌನ್‌ಹಾಲ್‌ ಬಳಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ಬೀಸಿದರು.

8 ಸಾವಿರ ವಾಹನ ವಶಕ್ಕೆ: ರಾಜ್ಯಾದ್ಯಂತ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅನಗತ್ಯವಾಗಿ ರಸ್ತೆಗಿಳಿದಿದ್ದ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 3,268 ವಾಹನಗಳನ್ನು ಜಪ್ತಿ ಮಾಡಿದ್ದಾರೆ. 1950 ಪ್ರಕರಣಗಳನ್ನು ದಾಖಲಿಸಿ . 1,87,677 ದಂಡ ವಸೂಲಿ ಮಾಡಲಾಗಿದೆ. ರಾಜಧಾನಿ ಬೆಂಗಳೂರಲ್ಲಿ ಪೊಲೀಸರು ರಸ್ತೆಗಿಳಿದ 3000ಕ್ಕೂ ಅಧಿಕ ವಾಹನಗಳನ್ನು ಮುಟ್ಟುಗೋಲು ಹಾಕಿದ್ದು, ಕೊರೋನಾ ನಿಯಮ ಉಲ್ಲಂಘನೆಗೆ ಸಂಬಂಧಿಸಿ 24 ಪ್ರಕರಣ ದಾಖಲಿಸಿದ್ದಾರೆ. ಇನ್ನು ಶಿವಮೊಗ್ಗದಲ್ಲಿ 254 ವಾಹನ ವಶಕ್ಕೆ ಪಡೆದಿದ್ದು, 2 ಅಂಗಡಿಗಳ ಮಾಲೀಕರ ವಿರುದ್ಧ ಕೇಸು ದಾಖಲಾಗಿದೆ. ಜನತಾ ಕಫ್ರ್ಯೂ ನಿಯಮ ಉಲ್ಲಂಘನೆ ಸಂಬಂಧ 305 ಪ್ರಕರಣ ದಾಖಲಿಸಿ 1,33,200 ರು. ದಂಡ ವಿಧಿಸಲಾಗಿದೆ. ದಾವಣಗೆರೆ 90 ವಾಹನ ಜಪ್ತಿ ಮಾಡಲಾಗಿದ್ದು, ಮಾಸ್ಕ್‌ ಧರಿಸದ್ದಕ್ಕೆ 967 ಪ್ರಕರಣ ದಾಖಲಾಗಿದ್ದು 1,39,300 ರು. ದಂಡ ವಸೂಲಿ ಮಾಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಒಟ್ಟಾರೆ 303 ವಾಹನಗಳನ್ನು ಮುಟ್ಟುಗೋಲು ಹಾಕಿರುವ ಪೊಲೀಸರು 23,900 ರು. ದಂಡವನ್ನೂ ವಸೂಲಿ ಮಾಡಿದ್ದಾರೆ.

ಇನ್ನು ಹಾಸನದಲ್ಲಿ 604, ಹಾವೇರಿಯಲ್ಲಿ 104, ಗದಗದಲ್ಲಿ 120, ಚಿಕ್ಕಮಗಳೂರಲ್ಲಿ 267, ತುಮಕೂರಲ್ಲಿ 75 ಹಾಗೂ ರಾಮನಗರ 32 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!