
ಬೆಂಗಳೂರು : ರಾಜ್ಯದಲ್ಲಿ ಅನಧಿಕೃತ ಜಾನುವಾರು ಸಾಗಣೆ ಸಮಯದಲ್ಲಿ ವಶಪಡಿಸಿಕೊಂಡ ವಾಹನಗಳನ್ನು ‘ಬ್ಯಾಂಕ್ ಖಾತರಿ’ ಬದಲು ‘ನಷ್ಟ ಭರ್ತಿ ಮುಚ್ಚಳಿಕೆ’ (ಇಂಡೆಮ್ನಿಟಿ ಬಾಂಡ್) ನೀಡಿ ಬಿಡಿಸಿಕೊಳ್ಳಲು ಅನುವಾಗುವಂತೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ- 2020ಕ್ಕೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈಗ ಇರುವ ನಿಯಮದ ಪ್ರಕಾರ ಜಾನುವಾರುಗಳ ಅನಧಿಕೃತ ಸಾಗಣೆ ವೇಳೆ ಸಿಕ್ಕಿಬಿದ್ದ ವಾಹನಗಳನ್ನೂ ಬ್ಯಾಂಕ್ ಗ್ಯಾರಂಟಿ ನೀಡಿ ಮಾತ್ರ ಬಿಡಿಸಿಕೊಳ್ಳಬೇಕು. 3 ರಿಂದ 5 ಲಕ್ಷ ರು. ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಬ್ಯಾಂಕ್ ಖಾತರಿ ನೀಡುವುದು ಕಡ್ಡಾಯವಾಗಿತ್ತು. ಇದರಿಂದ ಸಣ್ಣಪುಟ್ಟ ವಾಹನ ಮಾಲೀಕರಿಗೆ ಸಮಸ್ಯೆಯಾಗುತ್ತಿತ್ತು. ವಾಹನಗಳ ಬಾಡಿಗೆಯಿಂದಲೇ ಜೀವನ ನಡೆಸುತ್ತಿರುವ ಕುಟುಂಬಗಳಿಗೆ ಕಷ್ಟವಾಗುತ್ತದೆ ಎಂಬ ಕಾರಣದಿಂದ ವಿಧೇಯಕಕ್ಕೆ ತಿದ್ದುಪಡಿ ತರಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಹೈಕೋರ್ಟ್ 2022ರಲ್ಲಿ ಪ್ರಕರಣವೊಂದರಲ್ಲಿ ಬ್ಯಾಂಕ್ ಗ್ಯಾರಂಟಿ ಬದಲು ಇಂಡೆಮ್ನಿಟಿ ಗ್ಯಾರಂಟಿ ನೀಡಿ ವಾಹನ ಬಿಡುಗಡೆ ಮಾಡಬಹುದು ಎಂದು ಹೇಳಿತ್ತು. ಹೀಗಾಗಿ ನಷ್ಟ ಪರಿಹಾರ ಅಥವಾ ನಷ್ಟ ಭರ್ತಿ ಮುಚ್ಚಳಿಕೆ (ಬಾಂಡ್) ನೀಡುವ ಮೂಲಕವೂ ವಾಹನ ಬಿಡಿಸಿಕೊಳ್ಳಬಹುದು. ಹೀಗಾಗಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ-2020ರಲ್ಲಿ ‘ಬ್ಯಾಂಕ್ ಖಾತರಿ’ ಎಂಬ ಪದ ಎಲ್ಲೆಲ್ಲಿ ಬರುವುದೋ ಆ ಪದದ ನಂತರ ‘ಅಥವಾ ನಷ್ಟ ಪರಿಹಾರ ಬಾಂಡ್’ ಎಂದು ತಿದ್ದುಪಡಿ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ