
-ಪ್ರದೀಪ್ ಡಿ.ಎಂ.ಹಾವಂಜೆ,
ಉಡುಪಿ (ಏ.14) ‘ಬೋಧಿ ಸತ್ವ’ - ‘ಸದಾ ಜಾಗೃತವಾಗಿರುವ, ಸಮಾಜದ ಕಲ್ಯಾಣಕ್ಕಾಗಿ ಅವರು ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಕೊಂಡಿರುವವರು ಅವರು ಪ್ರಜ್ಞಾವಂತರು, ಕರುಣಾಮಯಿಗಳು ಮತ್ತು ಉತ್ತಮ ಚಾರಿತ್ರ್ಯವುಳ್ಳವರು’.
ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ 1954ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ವಿಶ್ವ ಬೌದ್ಧ ಧರ್ಮ ಸಮ್ಮೇಳನದಲ್ಲಿ ‘ಬೋಧಿಸತ್ವ’ ಎಂಬ ಬಿರುದು ನೀಡಿ ಗೌರವಿಸಲಾಯಿತು. ಡಾ। ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಅವರ ವಿಚಾರಧಾರೆಯು ಬುದ್ಧನ ಬೋಧನೆ ಮತ್ತು ಬೌದ್ಧ ಧರ್ಮದ ಸಾರವೇ ಆಗಿ ಸಂವಿಧಾನ ಗ್ರಂಥದಲ್ಲಿ ಮಾನವೀಯತೆಯ ಸಮಾನತೆಯನ್ನು ಪ್ರತಿನಿಧಿಸಿತು. ಬುದ್ಧನ ವಿಚಾರಧಾರೆಯು ಪಾಲಿ ಭಾಷೆಯಲ್ಲಿ ಅಡಕವಾಗಿ ಭಿಕ್ಕುಗಳ ಬದುಕಿಗೆ ದಾರಿದೀಪವಾಯಿತು ಬಾಬಾ ಸಾಹೇಬರ ಚಿಂತನೆಯು ಗೌತಮ ಬುದ್ಧನ ಬೋಧನೆಯನ್ನು ಪ್ರತಿಧ್ವನಿಸಿತು ಮತ್ತು ಮಾನವೀಯ ಮೌಲ್ಯ, ಮಾನವೀಯ ಧಮ್ಮಾವನ್ನು ಸಾರಿತು.
ಇದು ವಿಮೋಚನೆಯ ಮೂರು ಹಂತವಾಗಿ ಬುದ್ಧನ ಪ್ರಜ್ಞೆ ಮತ್ತು ಅರಿವು, ಒಗ್ಗಟ್ಟು ಮತ್ತು ಸಹೋದರತ್ವ, ಧಮ್ಮಾ ವಿಕ್ರಮ ಅನ್ಯಾಯದ ವಿರುದ್ಧದ ಸಂಘ ಹೋರಾಟ. ಈ ಮೂರು ತತ್ವಗಳನ್ನು ಪ್ರತಿನಿಧಿಸುತ್ತದೆ.
‘ಜೈ ಭೀಮ್’ ಘೋಷಣೆ ಬುದ್ಧನ ಶಾಂತಿ- ಕ್ರಾಂತಿಯ ಸಂದೇಶವೇ ಆಗಿದೆ. ‘ಜೈ ಭೀಮ್’ ಕೇವಲ ಪದವಲ್ಲ ಅಥವಾ ಗೌರವ ಸೂಚಕ ವ್ಯಕ್ತಿ ಗೌರವ ಪದ ಮಾತ್ರವಲ್ಲ ಇದು ಬಾಬಾ ಸಾಹೇಬರೊಂದಿಗೆ ಬುದ್ಧನ ‘ಮೈತ್ರಿ’ಯನ್ನು ಪ್ರತಿನಿಧಿಸುತ್ತದೆ. (ಇಲ್ಲಿ ಒಬ್ಬರಿಗೊಬ್ಬರು ಗೌರವ ಸಲ್ಲಿಸುವ ರೀತಿಯಲ್ಲಿ, ಜೊತೆಯಾಗಿ ಬುದ್ಧನ ತತ್ವದೊಂದಿಗೆ ಬೆಳೆದುಕೊಂಡಿದೆ.)
ಈ ಎಲ್ಲಾ ಚಿಂತನೆಗಳು ಗೌತಮ ಬುದ್ಧನ ಧಮ್ಮಾ ಸಾರವಾಗಿ ಮುಂದೆ ಬಾಬಾ ಸಾಹೇಬರ ಚಿಂತನೆಯಾಗಿ, ಸಂವಿಧಾನದ ಕರುಡು ಸಮಿತಿಯ ಅಧ್ಯಕ್ಷರಾದ ಬಾಬಾ ಸಾಹೇಬರು ಬುದ್ಧನ ವಿಚಾರಧಾರೆಗಳನ್ನು ಮನುಕುಲದ ಒಳಿತಾಗಿ ಕಾನೂನು ರೀತಿಯಲ್ಲಿ ಬಳಸಿಕೊಂಡು ‘ಇವ ನಮ್ಮವ ಇವ ನಮ್ಮವ’ ಎನ್ನುವ ಮೈತ್ರಿಯನ್ನು ಒಡಮೂಡಿಸಿದರು.
‘ಬದುಕು ಸುದೀರ್ಘವಾಗಿ ಇರುವುದಕ್ಕಿಂತ ಶ್ರೇಷ್ಠವಾಗಿರಬೇಕು’, ಬೋಧನೆಗಿಂತ ಆಚರಣೆ ದೊಡ್ಡದು, ಆತ್ಮ ಗೌರವನ್ನು ಬಿಟ್ಟು ಬದುಕುವುದು ಅವಮಾನಕರ, ಆತ್ಮ ಗೌರವವೇ ಜೀವನ... ಹೀಗೆ ಬಾಬಾ ಸಾಹೇಬರ ಚಿಂತನೆಗಳು, ಜೀವನ ಮತ್ತು ವಿಚಾರಧಾರೆಗಳನ್ನು ಅರ್ಥಪೂರ್ಣವಾಗಿ ಅಧ್ಯಯನ ಮಾಡುತ್ತಾ ಸಾಗಿದಾಗ ಅಲ್ಲಿ ಇರುವುದು ಅವರ ಬದುಕಿನ ಹೋರಾಟ, ತಂದೆ ಸುಬೇದರ್ ರಾಮಜಿ ಸಕ್ಬಾಲ್, ತಾಯಿ ಭೀಮಾ ಬಾಯಿ ರಾಮ್ಬಜಿ ಸಕ್ಬಾಲ್, ಮಡದಿ ರಮಾಬಾಯಿ ಅಂಬೇಡ್ಕರ ಇವರ ತ್ಯಾಗ, ಬುದ್ಧನ ಚಿಂತನೆ, ಕಣ್ಣ ಮುಂದೆ ಶೋಷಿತರ ಅವಮಾನ - ಸಂಕಟಗಳೇ ಕಾಣಿಸುತ್ತದೆ ಹೊರತು ಅವರ ಸ್ವಹಿತಾಸಕ್ತಿ ಎಂದಿಗೂ ಕಾಣಿಸುವುದಿಲ್ಲ. ಬರೀ ಅಲ್ಲಿರುವುದು ಹಗಲಿರುಳು, ಅವಮಾನ, ಛಲದಿಂದ ಗಳಿಸಿದ 32 ಗೌರವಯುತ ಪದವಿಗಳು!! (ಲಂಡನ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯ, Bar- at law, ಡಾಕ್ಟರೆಟ್ ಸೇರಿ) ಒಂಬತ್ತು ಭಾಷೆಗಳನ್ನು ಬಲ್ಲವರಾಗಿ, ದಿನಕ್ಕೆ 18 ಗಂಟೆಗಳ ಅಧ್ಯಯನ!! ‘ಜ್ಞಾನ ವಿಶ್ವವನ್ನು ಆಳುತ್ತದೆ’ ಎಂಬ ಬಲವಾದ ದೃಢ ಸಂಕಲ್ಪ ಅವರಲ್ಲಿತ್ತು. ಅವರ ಈ ಅಪಾರ ವಿದ್ವತ್ತೇ ಭಾರತದ ಸಂವಿಧಾನದಂತಹ ಬೃಹತ್ ಮತ್ತು ಸಮಗ್ರ ದಾಖಲೆಯನ್ನು ಬರೆಯಲು ಅವರಿಗೆ ಶಕ್ತಿಯನ್ನು ನೀಡಿತು.
ಜ್ಞಾನದ ದಿನ:
ವಿಶ್ವದೆಲ್ಲೆಡೆ ಬಾಬಾ ಸಾಹೇಬರು ಜನ್ಮ ದಿನವಾದ ಏಪ್ರಿಲ್ 14 ‘Symbol of Knowledge Day’ ಎಂದು ಆಚರಿಸಿಕೊಳ್ಳುತ್ತಿರುವ ಹೆಮ್ಮೆ, ಸಂಭ್ರಮದಲ್ಲಿ ಭಾರತೀಯರಾದ ನಾವು ಬಾಬಾ ಸಾಹೇಬರ ಬರೆದಿರುವ ಬಹುಮುಖ್ಯ ಕೃತಿಗಳಾದ ‘ಜಾತಿ ವಿನಾಶ, ದಿ ಬುದ್ಧ ಆ್ಯಂಡ್ ಹಿಸ್ ಧಮ್ಮಾ, ದಿ ಪ್ರಾಬ್ಲಮ್ ಆಫ್ ದಿ ರೂಪಿ (ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಬುನಾದಿಯಾದ ಕೃತಿ), Who were the Shudras, Caste in India, Waiting for Visa ಈ ಎಲ್ಲಾ ಮಹಾನ್ ಕೃತಿಗಳು ನಮಗೆ ಬಾಬಾ ಸಾಹೇಬರು ಜೀವನ ನಿಸ್ವಾರ್ಥ ಸೇವೆ ಮತ್ತು ಭಾರತೀಯ ಸಂವಿಧಾನದಲ್ಲಿ ಕೊಡುಗೆ ಮತ್ತು ಸಮೃದ್ಧ ಭಾರತದ ನಿರ್ಮಾಣದಲ್ಲಿ ನಮ್ಮ ಪಾತ್ರವನ್ನು ತಿಳಿಸುತ್ತದೆ. ಮಾತ್ರವಲ್ಲ, ಭೀಮ್ ರಾಮ್ ಅಂಬೇಡ್ಕರರ ವಿಚಾರಧಾರೆ ಮತ್ತು ಬುದ್ಧನ ಭಾರತದ ಬಗ್ಗೆ ತಿಳಿಸುತ್ತದೆ.
ಹೀಗೆ ಬಾಬಾ ಸಾಹೇಬ್ ಅಂಬೇಡ್ಕರರ ಜೀವನ, ಶಿಕ್ಷಣ, ಶೋಷಿತರ ಪರವಾದ ನಿಲುವು, ಮಹಿಳೆಯರ ಬದುಕಿಗೆ ಅವರ ಕೊಡುಗೆ, ಭಾರತದ ಕಟ್ಟಕಡೆಯ ವ್ಯಕ್ತಿಗೆ ಗೌರವಯುತವಾಗಿ ಬಾಳಿ ಬದುಕುವ ಹಕ್ಕಿದೆ ಎನ್ನುವ ಚಿಂತನೆಗಳು ಗೌತಮ ಬುದ್ಧನ ಧಮ್ಮಾ ಬೋಧನೆಯ ಸದ್ ಚಿಂತನೆಗಳೇ ಆಗಿದೆ. ಬಾಬಾ ಸಾಹೇಬರ ವಿಚಾರಧಾರೆ ಮತ್ತು ಅವರ ನಿಲುವುಗಳು ಹಾಗೂ ಭಾರತದ ಸಂವಿಧಾನದಲ್ಲಿ ಅವರ ಕೊಡುಗೆಗಳ ಬಗ್ಗೆ ತಿಳಿದು, ತಿಳಿಸಬೇಕಾದ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ. ಡಾ। ಬಿ.ಆರ್.ಅಂಬೇಡ್ಕರ್ ಅವರು ಎಂದೆಂದಿಗೂ ಬೋಧಿಸತ್ವ ಬಾಬಾ ಸಾಹೇಬರಾಗಿ ಜನಮನದಲ್ಲಿ ನೆಲೆಯಾದ ಭಾರತದ ಹೆಮ್ಮೆಯ ಪುತ್ರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ