ಫ್ಲ್ಯಾಟ್‌ಗೊಂದೇ ನಾಯಿ ಸಾಕಲು ಅವಕಾಶ; ಲೈಸೆನ್ಸ್‌ ಕಡ್ಡಾಯ

By Kannadaprabha NewsFirst Published Feb 25, 2020, 8:37 AM IST
Highlights

1 ಫ್ಲ್ಯಾಟ್‌ಗೆ ಒಂದೇ ನಾಯಿ ಸಾಕು! ಹೆಚ್ಚು ನಾಯಿ ಸಾಕಲು ಅನುಮತಿ ಇಲ್ಲ | ಸ್ವತಂತ್ರ ಮನೆಯಲ್ಲಿ 3 ನಾಯಿ ಸಾಕಲು ಅವಕಾಶ | ನಾಯಿಗೆ ಲೈಸೆನ್ಸ್‌ ಕಡ್ಡಾಯ

ಬೆಂಗಳೂರು (ಫೆ. 25):  ಒಂದು ಫ್ಲ್ಯಾಟ್‌ಗೆ ಒಂದೇ ನಾಯಿ. ಸ್ವತಂತ್ರವಾಗಿ ಪ್ರತ್ಯೇಕ ವಾಸ ಮನೆಯಿದ್ದರೆ ಮೂರು ನಾಯಿ. ಹೀಗೆ ನಾಯಿ ಸಾಕುವುದಕ್ಕೂ ಮಿತಿ ವಿಧಿಸುವ ತನ್ನ ಷರತ್ತನ್ನು ಬದಲಾಯಿಸದೆಯೇ ‘ಪರಿಷ್ಕೃತ ಸಾಕು ನಾಯಿ ಪರವಾನಗಿ ಉಪ ನಿಯಮ- 2018’ರ ಕರಡನ್ನು ಬಿಬಿಎಂಪಿ ಸಿದ್ಧಪಡಿಸಿದ್ದು, ಜಾರಿ ಪ್ರಕ್ರಿಯೆ ಆರಂಭಿಸಿದೆ.

ಈ ಹಿಂದೆ 2018ರಲ್ಲಿ ಬಿಬಿಎಂಪಿ ಸಿದ್ಧಪಡಿಸಿ ಆದೇಶಿಸಿದ್ದ ‘ಸಾಕು ನಾಯಿ ಪರವಾನಗಿ ಉಪ ನಿಯಮ-2018’ರಲ್ಲಿ ಫ್ಲ್ಯಾಟ್‌ಗಳಲ್ಲಿ ಒಂದು ನಾಯಿ ಹಾಗೂ ಸ್ವತಂತ್ರ ವಾಸ ಮನೆಯಲ್ಲಿ ಗರಿಷ್ಠ ಮೂರು ನಾಯಿ ಸಾಕಬೇಕು. ಹೆಚ್ಚಿನ ನಾಯಿ ಸಾಕಿದರೆ ದಂಡ, ಪರವಾನಗಿ ಕಡ್ಡಾಯ, ಮೈಕ್ರೋ ಚಿಪ್‌ ಅಳವಡಿಕೆ ಕಡ್ಡಾಯ ಸೇರಿದಂತೆ ಹಲವಾರು ಷರತ್ತು ವಿಧಿಸಿತ್ತು. ಇದು ಪ್ರಾಣಿ ದಯಾ ಸಂಘಟನೆಗಳು ಮತ್ತು ಶ್ವಾನ ಪ್ರಿಯರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕೂಡಲೇ ಆದೇಶವನ್ನು ಬಿಬಿಎಂಪಿ ವಾಪಾಸ್‌ ಪಡೆದು ಪರಿಷ್ಕರಣೆ ಮಾಡುವುದಾಗಿ ತಿಳಿಸಿತ್ತು.

'ಬಿಎಸ್‌ವೈ ವಿರುದ್ಧ ಪತ್ರ ಬರೆದಿದ್ದು ಯಾರೆನ್ನುವುದು ಗೊತ್ತು'

ಅದರಂತೆ ಇದೀಗ ಬಿಬಿಎಂಪಿ ಪ್ರಾಣಿ ದಯಾಸಂಘಟನೆಗಳು ಮತ್ತು ಶ್ವಾನಪ್ರಿಯರೊಂದಿಗೆ ಚರ್ಚೆ ನಡೆಸಿ ‘ಪರಿಷ್ಕೃತ ಸಾಕು ನಾಯಿ ಉಪ ನಿಯಮ -2018’ ಸಿದ್ಧಪಡಿಸಿದ್ದಾರೆ. ಬಿಬಿಎಂಪಿಯ ಕೌನ್ಸಿಲ್‌ ಅನುಮೋದನೆಗೆ ಕರಡು ಪ್ರತಿಯನ್ನು ಸಲ್ಲಿಸಿದ್ದು, ಬಳಿಕ ಸರ್ಕಾರದ ಅನುಮೋದನೆಗೆ ಕಳುಹಿಸಲಾಗುತ್ತದೆ. ತದ ನಂತರ ಜಾರಿಗೆ ಬರಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರವಾನಗಿ ಕಡ್ಡಾಯ:

ಪರಿಷ್ಕೃತ ಕರಡು ಬೈಲಾದಲ್ಲಿ ಕಡ್ಡಾಯವಾಗಿ ನಾಯಿ ಸಾಕುವುದಕ್ಕೆ ಪರವಾನಗಿ ಪಡೆಯಬೇಕು ಹಾಗೂ ಪ್ರತಿ ವರ್ಷ ಪರವಾನಗಿ ನವೀಕರಿಸಬೇಕು ಎಂದು ಸೂಚಿಸಿದೆ. ಪರವಾನಗಿ ಪಡೆಯಲು ಬಿಬಿಎಂಪಿ ದೃಢಿಕರಿಸಿದ ಮೈಕ್ರೋ ಚಿಪ್‌ ಅಳವಡಿಕೆ, ಆ್ಯಂಟಿ ರೇಬಿಸ್‌ ಲಿಸಿಕೆ ಹಾಗೂ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿದ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದರೆ ಮಾತ್ರ ನಾಯಿ ಸಾಕುವುದಕ್ಕೆ ಪರವಾನಗಿ ನೀಡಲಾಗುತ್ತದೆ.

ನಾಯಿಗೆ ಹಿಂಸೆ ನೀಡುವಂತಿಲ್ಲ:

ಇನ್ನು ಮಾಲಿಕರು ನಾಯಿ ವಾಸಕ್ಕೆ ಸೂಕ್ತ ವ್ಯವಸ್ಥೆ, ನಾಯಿಗೆ ಹಿಂಸೆ, ಪ್ರಾಣಕ್ಕೆ ಹಾಗೂ ಸ್ವಾತಂತ್ರಕ್ಕೆ ಧಕ್ಕೆ ಉಂಟು ಮಾಡುವಂತಿಲ್ಲ. ನಾಯಿಯಿಂದ ಬೇರೆ ಪ್ರಾಣಿಗೆ, ಮನುಷ್ಯರ ಮೇಲೆ ದಾಳಿಯಾದರೆ ಅದಕ್ಕೆ ಮಾಲಿಕರೇ ಹೊಣೆ. ರಸ್ತೆ, ಮೈದಾನ, ಪಾರ್ಕ್ ಹಾಗೂ ಇನ್ನಿತರ ಕಡೆ ನಾಯಿ ಕರೆದುಕೊಂಡು ಹೋಗುವಾಗ ಸರಪಳಿ ಅಥವಾ ಹಗ್ಗ ಬಳಸಬೇಕು ಎಂಬ ಷರತ್ತು ವಿಧಿಸಿದೆ. ಷರತ್ತು ಉಲ್ಲಂಘನೆಯ ದಂಡವನ್ನು .100ರಿಂದ .500ಕ್ಕೆ ಪರಿಷ್ಕೃತ ಬೈಲಾದಲ್ಲಿ ಹೆಚ್ಚಳ ಮಾಡಲಾಗಿದೆ. ಎರಡನೇ ಬಾರಿಗೆ ತಪ್ಪಿಗೆ ದುಪಟ್ಟು ದಂಡ ವಿಧಿಸಲಾಗುವುದು ಎಂದು ಸೂಚಿಸಿದೆ.

ಸಾರ್ವಜನಿಕರಿಗೆ ಹಾಗೂ ನೆರೆ ಹೊರೆಯವರಿಗೆ ತೊಂದರೆ ಉಂಟು ಮಾಡಿದರೆ ಪರಿಶೀಲಿಸುವ ಅಧಿಕಾರ ಬಿಬಿಎಂಪಿ ಪಶುಪಾಲನಾ ವಿಭಾಗದ ಅಧಿಕಾರಿಗಳಿಗೆ ಇರಲಿದೆ. ಈ ನಿಯಮ ಉಲ್ಲಂಘಸಿದರೆ .1 ಸಾವಿರ ದಂಡ ವಿಧಿಸಲಾಗುವುದು. ಇದೇ ತಪ್ಪು ಮುಂದುವರಿಸಿದರೆ ಸರಿಪಡಿಸಿಕೊಳ್ಳುವವರೆಗೆ ದಿನಕ್ಕೆ .300 ರಂತೆ ದಂಡ ವಿಧಿಸಲಾಗುತ್ತದೆ. ಜತೆಗೆ ನಾಯಿ ವಶಕ್ಕೆ ಪಡೆಯುವ ಮತ್ತು ಪರವಾನಗಿ ರದ್ದು ಪಡಿಸುವ ಅಧಿಕಾರ ಬಿಬಿಎಂಪಿ ಹೊಂದಿರಲಿದೆ ಎಂದು ಪರಿಷ್ಕೃತ ಕರಡಿನಲ್ಲಿ ತಿಳಿಸಿದೆ.

ಮಾಲಿಕರಿಲ್ಲದ ನಾಯಿ ಹರಾಜು:

ಒಂದು ವೇಳೆ ಸಾಕು ನಾಯಿ ರೈಲ್ವೆ, ಬಸ್‌ ನಿಲ್ದಾಣ, ರಸ್ತೆ, ಪಾರ್ಕ್ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಅಲೆದಾಡುತ್ತಿದ್ದರೆ ವಶಕ್ಕೆ ಪಡೆಯುವ ಅಧಿಕಾರ ಪಾಲಿಕೆಗೆ ಇರಲಿದೆ. ನಾಯಿ ವಾಪಾಸ್‌ ಬಿಡಿಸಿಕೊಳ್ಳುವುದಕ್ಕೆ ಮಾಲಿಕ ಸೂಕ್ತ ದಾಖಲೆಯ ಜೊತೆಗೆ .1 ಸಾವಿರ ದಂಡ ಪಾವತಿಸಬೇಕು. ಒಂದು ವೇಳೆ ನಾಯಿ ಮಾಲಿಕರು ಬರದಿದ್ದರೆ ನಾಯಿಯನ್ನು ಹರಾಜು ಹಾಕುವ ಹಾಗೂ ದತ್ತು ನೀಡುವ ಅಧಿಕಾರ ಪಾಲಿಕೆಗೆ ಇರಲಿದೆ.

ಆನ್‌ಲೈನ್‌ ಮೂಲಕ ಪರವಾನಗಿ:

ಪರಿಷ್ಕೃತ ಕರಡು ನೀತಿಯಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಸಾಕು ನಾಯಿ ಪರವಾನಗಿ ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ. ಪರವಾನಗಿ ಪಡೆಯುವುದಕ್ಕೆ ಸಲ್ಲಿಸಿದ ಮಾಡಿದ ಮಾಹಿತಿಯನ್ನು ಮಾಲಿಕರ ಪತ್ತೆಗೆ ಬಳಸಲಾಗುತ್ತದೆ. ರೇಬಿಸ್‌ ಹಾಗೂ ಗಂಭೀರ ಸಾಂಕ್ರಾಮಿಕ ರೋಗದ ಲಕ್ಷಣ ಕಂಡು ಬಂದರೆ ಸಾರ್ವಜನಿಕ ಆರೋಗ್ಯಕ್ಕೆ ಮಹತ್ವ ನೀಡಿ ನಾಯಿಗೆ ದಯಾಮರಣ ನೀಡುವ ಅಧಿಕಾರ ಬಿಬಿಎಂಪಿಗೆ ಇರಲಿದೆ ಎಂದು ಪರಿಷ್ಕೃತ ಕರಡು ಬೈಲಾದಲ್ಲಿ ತಿಳಿಸಲಾಗಿದೆ.

ಪ್ರಾಣಿ ದಯಾ ಸಂಘ ಸಂಸ್ಥೆ ಹಾಗೂ ಶ್ವಾನ ಪ್ರಿಯರೊಂದಿಗೆ ಚರ್ಚಿಸಿ ನಿಯಮ ಪರಿಷ್ಕೃರಿಸಿ ಕರಡು ಸಿದ್ಧಪಡಿಸಲಾಗಿದೆ. ಕೌನ್ಸಿಲ್‌ ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಮತ್ತೆ ಸಾರ್ವಜನಿಕರಿಂದ ಅಕ್ಷೇಪಣೆಗೆ ಅವಕಾಶ ನೀಡಲಾಗುವುದು. ಬಳಿಕ ನೀತಿ ಜಾರಿ ಮಾಡುತ್ತೇವೆ.

-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತರು.

ಹೆಚ್ಚು ನಾಯಿ ಸಾಕಿದ್ದರೆ ಹೀಗೆ ಮಾಡಿ

ನಿಮ್ಮ ಫ್ಲ್ಯಾಟ್‌ ಹಾಗೂ ಸ್ವತಂತ್ರ ಮನೆಯಲ್ಲಿ ಪಾಲಿಕೆಯ ಹೊಸ ನಿಯಮದಲ್ಲಿ ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ನಾಯಿಗಳನ್ನು ಸಾಕುತ್ತಿದ್ದರೆ ‘ಪರಿಷ್ಕೃತ ಸಾಕು ನಾಯಿ ಪರವಾನಗಿ ಉಪ ನಿಯಮ-2018’ ಜಾರಿಗೆ ಬರುವ ಮುನ್ನ ಬಿಬಿಎಂಪಿ ಪಶುಪಾಲನಾ ವಿಭಾಗದಿಂದ ಸಾಕಿರುವ ಎಲ್ಲ ನಾಯಿಗಳಿಗೆ ಪರವಾನಗಿ ಪಡೆದುಕೊಳ್ಳಿ. ಆಗ ಫ್ಲ್ಯಾಟ್‌ಗೆ ಒಂದು. ಸ್ವತಂತ್ರ ಮನೆಗೆ ಮೂರು ನಾಯಿ ಮಾತ್ರ ಸಾಕಬೇಕು ಎಂಬ ಹೊಸ ನಿಯಮ ನಿಮಗೆ ಅನ್ವಯವಾಗುವುದಿಲ್ಲ. ಒಂದು ವೇಳೆ ಹೊಸ ನಿಯಮ ಜಾರಿಗೆ ಬಂದರೆ ಫ್ಲ್ಯಾಟ್‌ನಲ್ಲಿ ಒಂದು, ಸ್ವತಂತ್ರ ಮನೆಯಲ್ಲಿ ಗರಿಷ್ಠ ಮೂರಕ್ಕಿಂತ ಹೆಚ್ಚು ನಾಯಿ ಸಾಕುವುದಕ್ಕೆ ಪಾಲಿಕೆ ಪರವಾನಗಿ ಸಿಗುವುದಿಲ್ಲ.

ಮಾರಾಟಕ್ಕೆ ಅನ್ವಯವಿಲ್ಲ

‘ಪರಿಷ್ಕೃತ ಸಾಕು ನಾಯಿ ಬೈಲಾ-2018’ ಕೇವಲ ಮನೆಯಲ್ಲಿ ನಾಯಿ ಸಾಕುವವರಿಗೆ ಮಾತ್ರ ಅನ್ವಯಿಸಲಿದೆ. ಸಾಕು ನಾಯಿ ಮಾರಾಟ ಹಾಗೂ ಸಂತಾನೋತ್ಪತ್ತಿಗೆ ಬಳಸುವ ನಾಯಿಗಳಿಗೆ ಅನ್ವಯವಾಗುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

- ವಿಶ್ವನಾಥ್ ಮಲೆಬೆನ್ನೂರು 

click me!