
ಬೆಂಗಳೂರು (ಅ.17) : ರಾಜ್ಯ ರಾಜಧಾನಿ ಬೆಂಗಳೂರು ಮಳೆ ಇತಿಹಾಸದಲ್ಲಿ ಈ ವರ್ಷ ಅತ್ಯಂತ ಹೆಚ್ಚು ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಭಾನುವಾರ ಸಂಜೆ 8.30ರ ಹೊತ್ತಿಗೆ ಒಟ್ಟು 170.34 ಸೆಂ.ಮೀ.ಗಿಂತ ಹೆಚ್ಚು ಮಳೆ ನಗರದಲ್ಲಿ ಸುರಿದಿದ್ದು, ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ. ಭಾನುವಾರ ಬೆಳಗ್ಗೆ 8.30ರ ಮಾಹಿತಿ ಪ್ರಕಾರ ನಗರದಲ್ಲಿ ಈ ವರ್ಷ 169 ಸೆಂ.ಮೀ. ಮಳೆಯಾಗಿತ್ತು. ನಂತರ ನಗರದಲ್ಲಿ 1.34 ಸೆಂ.ಮೀಗಿಂತ ಹೆಚ್ಚು ಮಳೆಯಾಗುವ ಮೂಲಕ 2017ರಲ್ಲಿ ದಾಖಲಾಗಿದ್ದ 170 ಸೆಂ.ಮೀ. ಮಳೆಯ ದಾಖಲೆ ಈ ವರ್ಷದ ಮಳೆ ಮುರಿದಿದೆ.
Mysuru ಮಳೆಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ : ಅಪಾರ ನಷ್ಟ
ಸಾಮಾನ್ಯವಾಗಿ ಆಕ್ಟೋಬರ್ ಮೊದಲ ವಾರದ ಬಳಿಕ ನೈಋುತ್ಯ ಮುಂಗಾರು ಬಲ ಕಳೆದುಕೊಂಡು ಹಿಂಗಾರು ಮಾರುತಕ್ಕೆ ಅವಕಾಶ ಮಾಡಿಕೊಡುತ್ತದೆ. ಆದರೆ ಈ ಬಾರಿ ಇನ್ನೂ ನೈಋುತ್ಯ ಮುಂಗಾರು ಸಕ್ರಿಯವಾಗಿದ್ದು, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಮಳೆಗೆ ಕಾರಣವಾಗುವ ಹಿಂಗಾರು ಮಾರುತ ನಗರ ಪ್ರವೇಶಿಸಲು ಬಾಕಿ ಇದೆ. ಹಾಗೆಯೇ ವಾರ್ಷಿಕ ಮಳೆಯ ಲೆಕ್ಕ ಹಾಕಲು ಇನ್ನೂ ಎರಡೂವರೆ ತಿಂಗಳೂ ಬಾಕಿ ಇರುವಾಗಲೇ ಸರ್ವಕಾಲದ ದಾಖಲೆ ನಿರ್ಮಾಣವಾಗಿದೆ.
ಬೆಂಗಳೂರಿನ ಮಳೆಯ ಬಗ್ಗೆ ಸುಮಾರು 130 ವರ್ಷಗಳ ದಾಖಲೆಯಿದ್ದು, ಈ ವರ್ಷದಷ್ಟುಮಳೆ ಹಿಂದೆಂದೂ ವರದಿಯಾಗಿರಲಿಲ್ಲ. ಕಳೆದ ಒಂಬತ್ತು ತಿಂಗಳಿನಲ್ಲಿ ಹೆಚ್ಚು ಕಡಿಮೆ ಪ್ರತಿ ತಿಂಗಳು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮುಂಗಾರು ಪೂರ್ವ, ಮುಂಗಾರು ಮತ್ತು ಅಕ್ಟೋಬರ್ ತಿಂಗಳ ಈವರೆಗಿನ ಮಳೆಯ ಪ್ರಮಾಣವನ್ನು ಗಮನಿಸಿದರೂ ವಾಡಿಕೆ ಮೀರಿ ಮಳೆ ವರದಿ ಆಗಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರಿನ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 97 ಸೆಂ.ಮೀ. ಆದರೆ ಇತ್ತಿಚಿನ ವರ್ಷಗಳಲ್ಲಿ ಇದಕ್ಕಿಂತ ಹೆಚ್ಚು ಮಳೆಯನ್ನು ಪಡೆಯುತ್ತಿದೆ. 2020 ಮತ್ತು 2021ನೇ ಸಾಲಿನಲ್ಲಿಯೂ 120 ಸೆಂ.ಮೀ.ನಷ್ಟುಮಳೆಯಾಗಿತ್ತು. ಆದರೆ ಈ ವರ್ಷ ತನ್ನ ಸರಾಸರಿಗಿಂತ ಎರಡು ಪಟ್ಟು ಹೆಚ್ಚು ಮಳೆ ಉದ್ಯಾನ ನಗರಿಯಲ್ಲಿ ಸುರಿಯುವ ಸಾಧ್ಯತೆಯಿದೆ.
ಇನ್ನೂ ಎರಡೂವರೆ ತಿಂಗಳ ಮಳೆ ಬಾಕಿ
ನಗರದ ಮಳೆಯ ಪ್ರವೃತ್ತಿ ಈ ವರ್ಷ ಸಂಪೂರ್ಣ ಬದಲಾಗಿದೆ. ಮುಂಗಾರು ಪೂರ್ವದಲ್ಲಿ 32.55 ಸೆಂ.ಮೀ ಮಳೆಯಾಗಿದ್ದು, ವಾಡಿಕೆಗಿಂತ (15.61) ದ್ವಿಗುಣ ಮಳೆಯಾಗಿತ್ತು. ಮುಂಗಾರು ಅವಧಿಯಲ್ಲಿ ಹೆಚ್ಚು ಕಡಿಮೆ 65 ಸೆಂ.ಮೀ ಮಳೆ ಸುರಿದರೆ ಈ ವರ್ಷ 100 ಸೆಂ.ಮೀ ಗಿಂತ ಹೆಚ್ಚು ಮಳೆ ದಾಖಲಾಗಿದೆ. ಇನ್ನು ಹಿಂಗಾರು ಅವಧಿಯಲ್ಲಿ 20ರಿಂದ 25 ಸೆಂ.ಮೀ ಮಳೆಯಾಗುವ ನಿರೀಕ್ಷೆಯಿದೆ.
40 ವರ್ಷದ ಬಳಿಕ ರಂಗಸಮುದ್ರ ಕೆರೆ ಭರ್ತಿ
ದಕ್ಷಿಣ ತಾಲೂಕದಲ್ಲಿ ಅತೀ ಹೆಚ್ಚು ಮಳೆ
ಮುಂಗಾರು ಋುತುವಿನ ಜೂನ್ 1ರಿಂದ ಸೆಪ್ಟೆಂಬರ್ 30ರ ಅವಧಿಯಲ್ಲಿ ನಗರ ವ್ಯಾಪ್ತಿಯ ಎಲ್ಲ ತಾಲೂಕು, ಹೋಬಳಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮೂರು ತಾಲೂಕಿನಲ್ಲಿ ವಾಡಿಕೆಗಿಂತ 2 ತಾಲೂಕಿನಲ್ಲಿ ಭಾರಿ ಮಳೆಯಾಗಿದೆ. ಇನ್ನು ಹೋಬಳಿಯ ಲೆಕ್ಕದಲ್ಲಿ ತೆಗೆದುಕೊಂಡರೆ 28 ಹೋಬಳಿಯಲ್ಲಿ 21 ಹೋಬಳಿಯಲ್ಲಿ ಭಾರಿ ಮಳೆಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಅತ್ಯಂತ ಹೆಚ್ಚು ಮಳೆ 82.7 ಸೆಂ.ಮೀ ಮಳೆಯಾಗಿದೆ. ಯಲಹಂಕದಲ್ಲಿ 80.6 ಸೆಂ.ಮೀ, ಬೆಂಗಳೂರು ಪೂರ್ವ 79.4, ಆನೇಕಲ್ 76.1, ಬೆಂಗಳೂರು ಉತ್ತರ 75.9 ಸೆಂ.ಮೀ ಮಳೆ ಸುರಿದಿದೆ.
ಈ ವರ್ಷ ಮಳೆಯಬ್ಬರ ಎಷ್ಟಿತ್ತೆಂದರೆ ನಗರದ ಕೆಲ ಭಾಗದಲ್ಲಿ ಜನರನ್ನು ತಮ್ಮ ಮನೆಯಿಂದ ರಕ್ಷಿಸಲು ಬೋಟ್ ಬಳಸುವ ಪ್ರಮೇಯ ಬಂದಿತ್ತು. ಹಾಗೆಯೇ ಜನ ಟ್ರ್ಯಾಕ್ಟರ್‌ನಲ್ಲಿ ಓಡುವ ಸ್ಥಿತಿ ಸೃಷ್ಟಿಯಾಗಿತ್ತು. ಕೆರೆಗಳ ಕೋಡಿ ಹರಿದು, ಜನವಸತಿ ಪ್ರದೇಶಗಳು ಜಲಾವೃತ್ತಗೊಂಡಿದ್ದವು.
ಇಂದೂ ನಗರದಲ್ಲಿ ಭಾರೀ ಮಳೆ ಸಾಧ್ಯತೆ:
ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಅಬ್ಬರಿಸುತ್ತಿರುವ ಮಳೆರಾಯ ಶುಕ್ರವಾರವೂ ತನ್ನ ಅಬ್ಬರವನ್ನು ಮುಂದುವರೆಸಿದೆ. ಶಿವಾನಂದ ವೃತ್ತ, ಮಲ್ಲೇಶ್ವರ, ಎಂಜಿ ರಸ್ತೆ, ಡಬ್ಬಲ್ ರೋಡ್, ಆನಂದ್‌ರಾವ್ ವೃತ್ತ, ಶೇಷಾದ್ರಿ ರಸ್ತೆ, ಮೆಜೆಸ್ಟಿಕ್, ಚಾಮರಾಜಪೇಟೆ ಸೇರಿ ನಗರ ಹಲವು ಬಡಾವಣೆಗಳು ಭಾರಿ ಮಳೆಯಾಗಿದೆ. ಧಾರಾಕಾರ ಮಳೆಯಿಂದ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಉಂಟಾಗಿತ್ತು. ನಗರದಲ್ಲಿ ಬೆಳಗ್ಗೆಯೆಲ್ಲ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ ಸಣ್ಣದಾಗಿ ಮಳೆಯಾಗಿ ನಂತರ ತಣ್ಣಗಾಗಿತ್ತು. ರಾತ್ರಿ 7ರ ನಂತರ ನಗರದ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಹಲವು ಮರ ಧರೆಗೆ: ಮಳೆಯಿಂದಾಗಿ ಹೆಬ್ಬಾಳದ ಎನ್‌ಇಟಿ ಬಸ್ ನಿಲ್ದಾಣ, ಸಂಜಯನಗರ, ವಿಜಯನಗರ ಸೇರಿದಂತೆ ವಿವಿಧ ಕಡೆ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಅಲ್ಲದೆ, ಹಲವು ಕಡೆಗಳಲ್ಲಿ ಮರದ ರೆಂಬೆಗಳು ಬಿದ್ದಿರುವ ವರದಿಯಾಗಿದೆ.
ವಿದ್ಯಾಪೀಠದಲ್ಲಿ ಹೆಚ್ಚು ಮಳೆ
ವಿದ್ಯಾಪೀಠದಲ್ಲಿ 6.2 ಸೆಂ.ಮೀ, ನಾಯಂಡಹಳ್ಳಿ 5.95, ಹಂಪಿ ನಗರ 5.75, ಅಗ್ರಹಾರ ದಾಸರಹಳ್ಳಿ 5.3, ನಂದಿನಿ ಬಡಾವಣೆ 5.2, ರಾಜರಾಜೇಶ್ವರಿ ನಗರ 5.1, ಕೊಟ್ಟಿಗೆಪಾಳ್ಯ 5, ಪೀಣ್ಯ ಕೈಗಾರಿಕಾ ಪ್ರದೇಶ 4.8, ರಾಜರಾಜೇಶ್ವರಿ ನಗರ 4.5, ಕೆಂಗೇರಿ 4.45, ಮಾರುತಿ ಮಂದಿರ ವಾರ್ಡ್ 4.3, ನಾಗಪುರ 4.2, ಬೇಗೂರು, ಹೆಮ್ಮಿಗೆಪುರ, ಚೊಕ್ಕಸಂದ್ರ ತಲಾ 4 ಸೆಂ.ಮೀ ಮಳೆಯಾಗಿದೆ. ವಾರಾಂತ್ಯ ಮಳೆ: ವಾರಾಂತ್ಯದ ಶನಿವಾರ ಮತ್ತು ಭಾನುವಾರವೂ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ