‘ಚರ್ಮಗಂಟು’ ತಡೆಗೆ 7 ಲಕ್ಷ ಲಸಿಕೆ ಪೂರೈಕೆ: ಸಚಿವ ಪ್ರಭು ಚವ್ಹಾಣ್‌

By Kannadaprabha News  |  First Published Oct 17, 2022, 2:30 AM IST

ರಾಜ್ಯಾದ್ಯಂತ ಜಾನುವಾರುಗಳನ್ನು ಕಾಡುತ್ತಿರುವ ಚರ್ಮಗಂಟು ರೋಗ ತಡೆಗೆ ಸರ್ವ ಪ್ರಯತ್ನ ನಡೆಯುತ್ತಿದೆ. ಸರ್ಕಾರದಿಂದ ಈಗಾಗಲೇ 7 ಲಕ್ಷ ಲಸಿಕೆಗಳನ್ನೂ ಪೂರೈಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದರು.


ಬೀದರ್‌ (ಅ.17): ರಾಜ್ಯಾದ್ಯಂತ ಜಾನುವಾರುಗಳನ್ನು ಕಾಡುತ್ತಿರುವ ಚರ್ಮಗಂಟು ರೋಗ ತಡೆಗೆ ಸರ್ವ ಪ್ರಯತ್ನ ನಡೆಯುತ್ತಿದೆ. ಸರ್ಕಾರದಿಂದ ಈಗಾಗಲೇ 7 ಲಕ್ಷ ಲಸಿಕೆಗಳನ್ನೂ ಪೂರೈಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದರು. ಔರಾದ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 45 ಸಾವಿರ ಪಶುಗಳಿಗೆ ಚರ್ಮರೋಗ ಅಂಟಿಕೊಂಡಿದ್ದು, ಶೇ.90 ರಷ್ಟು ಪಶುಗಳು ಗುಣಮುಖವಾಗಿವೆ. 2 ಸಾವಿರ ಪಶುಗಳು ಮೃತಪಟ್ಟಿದ್ದು, ರಾಜ್ಯದ ಯಾವುದೇ ಮೂಲೆಯಲ್ಲಿ ಲಸಿಕೆಯ ಕೊರತೆಯಿಲ್ಲ. ಬೀದರ್‌ ಜಿಲ್ಲೆಯಲ್ಲಿ ಸುಮಾರು 300 ಪಶುಗಳಿಗೆ ಈ ರೋಗ ತಗುಲಿದ್ದು, 10 ಪಶುಗಳು ಮರಣ ಹೊಂದಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. 

ಇದರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ರೋಗ ತಡೆಗೆ .15 ಕೋಟಿ ನೀಡಿದ್ದು ಶ್ಲಾಘನೀಯ ಎಂದು ಪ್ರಭು ಚವ್ಹಾಣ್‌ ಹೇಳಿದರು. ಔರಾದ್‌ ತಾಲೂಕಿನ ಬಲ್ಲೂರ್‌ ಗ್ರಾಮದಲ್ಲಿ ಅ.18ರಂದು ಸಿಪೆಟ್‌ ಕಾಲೇಜು ಭೂಮಿಪೂಜೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಗಮಿಸಲಿದ್ದಾರೆ. ಕೇಂದ್ರದ ಸಚಿವ ಭಗವಂತ ಖೂಬಾ ಅವರ ಸಹಕಾರದಿಂದ ಈ ಸಿಪೆಟ್‌ ಒಲಿದು ಬಂದಿದೆ. ಅವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಪ್ರಭು ಚವ್ಹಾಣ್‌ ಮಾಹಿತಿ ನೀಡಿದರು.

Tap to resize

Latest Videos

ಬೀದರ್‌: ಸಚಿವ ಪ್ರಭು ಚವ್ಹಾಣ್‌ ಗ್ರಾಮ ಸಂಚಾರ, ಜನರ ಸಂಕಷ್ಟಗಳಿಗೆ ಸ್ಪಂದನೆ

ಚರ್ಮಗಂಟು ರೋಗ ತಡೆಗೆ 13 ಕೋಟಿ ಬಿಡುಗಡೆ: ರಾಜ್ಯದಲ್ಲಿ ಹರಡುತ್ತಿರುವ ಜಾನುವಾರುಗಳ ಚರ್ಮಗಂಟು ರೋಗವನ್ನು ತಡೆಯಲು ಲಸಿಕೆ, ಚಿಕಿತ್ಸೆ ಮತ್ತು ಮೃತಪಟ್ಟರಾಸುಗಳಿಗೆ ಪರಿಹಾರ ಒದಗಿಸುವ ಸಂಬಂಧ 13 ಕೋಟಿ ರು. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಅವರು ಜಾನುವಾರುಗಳ ಚರ್ಮಗಂಟು ರೋಗದ ಕುರಿತು ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮೃತ ರಾಸುಗಳ ಪರಿಹಾರಕ್ಕೆ ಈಗಾಗಲೇ ಎರಡು ಕೋಟಿ ರು. ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ಐದು ಕೋಟಿ ರು. ಮತ್ತು ಜಾನುವಾರುಗಳ ಚಿಕಿತ್ಸೆಗೆ ಹಾಗೂ ಲಸಿಕೆಗೆ ಒಟ್ಟು ಎಂಟು ಕೋಟಿ ರು. ಬಿಡುಗಡೆ ಮಾಡುವಂತೆ ಹೇಳಿದರು.

ರಾಜ್ಯದ 28 ಜಿಲ್ಲೆಯ 160 ತಾಲೂಕುಗಳ 4380 ಗ್ರಾಮಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. 45,645 ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದು, 26,135 ಜಾನುವಾರುಗಳು ಗುಣಮುಖವಾಗಿವೆ. 2070 ಜಾನುವಾರುಗಳು ಮರಣ ಹೊಂದಿವೆ. ರೋಗಪೀಡಿತ ಜಾನುವಾರುಗಳನ್ನು ಪ್ರತ್ಯೇಕಿಸಲು ಪ್ರತಿ ಗ್ರಾಮದಲ್ಲಿ ವ್ಯವಸ್ಥೆ ಮಾಡಬೇಕು. ಮರಣ ಹೊಂದಿದ ಜಾನುವಾರುಗಳಿಗೆ 2 ಕೋಟಿ ರು. ನೀಡಲಾಗಿದ್ದು, 46.15 ಲಕ್ಷ ರು. ಪರಿಹಾರ ವಿತರಿಸಲಾಗಿದೆ. ಬಾಕಿ ಪರಿಹಾರ ತ್ವರಿತವಾಗಿ ವಿತರಿಸಬೇಕು ಎಂದು ನಿರ್ದೇಶನ ನೀಡಿದರು.

Bidar: ಸಾಂಸ್ಕೃತಿಕ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ: ಸಚಿವ ಪ್ರಭು ಚವ್ಹಾಣ್‌

6.57 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರೋಗ ಕಾಣಿಸಿಕೊಂಡ 5 ಕಿ.ಮೀ. ಸುತ್ತಳತೆಯಲ್ಲಿ ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ಹಾಕಬೇಕು ಎಂದು ಅಧಿಕಾರಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ರೋಗ ತೀವ್ರವಾಗಿರುವ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆಯನ್ನು ಹಾಕಲು ಸೂಚಿಸಿದರು. ಅಲ್ಲದೇ, ತಕ್ಷಣ 15 ಲಕ್ಷ ಡೋಸ್‌ ಲಸಿಕೆಗಳನ್ನು ಒದಗಿಸಬೇಕು. ಲಸಿಕೆ ಪೂರೈಕೆ ಕುರಿತು ಕೇಂದ್ರ ಸರ್ಕಾರ ಅನುಮೋದಿಸಿದ ಕಂಪನಿಗಳೊಂದಿಗೆ ಮಾತುಕತೆ ನಡೆಸಿ, ಲಸಿಕೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

click me!