
ಬೆಂಗಳೂರು (ಮೇ.3): ‘ಕಳೆದ ಬಜೆಟ್‌ನಲ್ಲಿ ಬಾಕಿ ಇರುವ ಘೋಷಣೆಗಳನ್ನು ತುರ್ತು ಕಾರ್ಯಗತಗೊಳಿಸಿ. 2026-27ನೇ ಸಾಲಿನ ಬಜೆಟ್‌ನ 565 ಘೋಷಣೆಗಳ ಜಾರಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದು ಮೇ ತಿಂಗಳೊಳಗೆ ಆದೇಶಗಳ ಮೂಲ ಅನುಷ್ಠಾನ ಪ್ರಕ್ರಿಯೆ ಆರಂಭಿಸಿ. ಇಲಾಖಾವಾರು ಬಾಕಿ ಇರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಿ, ಹಣಕಾಸು ಇಲಾಖೆ ಮಂಜೂರಾತಿ ನೀಡಿರುವ 24,300 ಹುದ್ದೆಗಳ ಭರ್ತಿಗೆ ಕ್ರಮ ವಹಿಸಿ.’
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಶನಿವಾರ ಮುಖ್ಯ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ನೀಡಿದ ಖಡಕ್ ಸೂಚನೆ. ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಬದಲಾವಣೆ ಗೊಂದಲ ಮುಂದುವರೆದಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ.
ಕಳೆದ ವರ್ಷದ ಬಜೆಟ್‌ನ 15 ಘೋಷಣೆಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಇದಕ್ಕೆ ಯಾರು ಹೊಣೆ? ಬಜೆಟ್ ಘೋಷಣೆಗಳ ಅನುಷ್ಠಾನ ಆಯಾ ವರ್ಷವೇ ಆಗಬೇಕು. ಈ ಬಾರಿಯ ಬಜೆಟ್‌ನಲ್ಲಿ 218 ಹೊಸ ಕಾರ್ಯಕ್ರಮಗಳು ಸೇರಿದಂತೆ ಒಟ್ಟು 565 ಘೋಷಣೆಗಳು ಮಾಡಿದ್ದೇವೆ. ಈ ಪೈಕಿ ಈಗಾಗಲೇ ಹಣಕಾಸು ಇಲಾಖೆಯಿಂದ 13 ಘೋಷಣೆಗಳಿಗೆ ಅನುಮೋದನೆ ದೊರೆತಿದೆ. ಮೇ ತಿಂಗಳ ಒಳಗಾಗಿ ಎಲ್ಲಾ ಘೋಷಣೆಗಳ ಬಗ್ಗೆ ಹಣಕಾಸು ಇಲಾಖೆಯ ಅನುಮೋದನೆ ಪಡೆದು ಸರ್ಕಾರಿ ಆದೇಶಗಳನ್ನು ಮಾಡಿ, ಅನುಷ್ಠಾನ ಕಾರ್ಯ ಆರಂಭಿಸಬೇಕು. ಇಲ್ಲವಾದಲ್ಲಿ 2026-27ರಲ್ಲಿ ಎಲ್ಲ ಘೋಷಣೆಗಳ ಅನುಷ್ಠಾನ ಸಾಧ್ಯವಿಲ್ಲ. ಯಾವುದೇ ತೊಂದರೆಗಳು ಇದ್ದಲ್ಲಿ, ಮುಖ್ಯ ಕಾರ್ಯದರ್ಶಿ ಅವರು ಹಾಗೂ ನನ್ನ ಗಮನಕ್ಕೆ ತನ್ನಿ. ಇಲ್ಲದಿದ್ದರೆ ಆಯಾ ಕಾರ್ಯದರ್ಶಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಲಾಖೆಗಳಲ್ಲಿ 60 ದಿನಗಳ ಮೇಲೆ ಬಾಕಿ ಇರುವ ಕಡತಗಳು ಸುಮಾರು 10000 ಕ್ಕಿಂತ ಹೆಚ್ಚಿವೆ. ಅವುಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ವಹಿಸಿ. ಯಾವುದೇ ಹೊಸ ಕಡತಗಳನ್ನೂ ಬಾಕಿ ಉಳಿಸಿಕೊಳ್ಳದಂತೆ ಕಾನೂನು ರೀತ್ಯ ಪರಿಶೀಲಿಸಿ ವಿಲೇವಾರಿ ಮಾಡಬೇಕು. ಕಂದಾಯ ಇಲಾಖೆಯಲ್ಲೇ ಹೆಚ್ಚು ಕಡತಗಳಿದ್ದು ಅವುಗಳನ್ನು ವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯಮಟ್ಟದ ಎರಡು ಜನಸ್ಪಂದನಾ ಸಭೆಯಲ್ಲಿ ಸ್ವೀಕರಿಸಲಾಗಿದ್ದ 15334 ಸ್ವೀಕೃತಿಗಳ ಪೈಕಿ 15295 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 45 ಅರ್ಜಿಗಳು ಬಾಕಿ ಇವೆ. ಅವುಗಳನ್ನು ತುರ್ತಾಗಿ ವಿಲೇವಾರಿ ಮಾಡಿ. ವಿಲೇವಾರಿ ಸಾಧ್ಯವಾಗದಿದ್ದರೆ ಹಿಂಬರಹ ನೀಡಿ ಎಂದು ಸೂಚಿಸಿದರು. ಇನ್ನು, ಸಾರ್ವಜನಿಕ ಕುಂದುಕೊರತೆಯಡಿ 3,27,052 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 3,17,576 ವಿಲೇವಾರಿ ಮಾಡಲಾಗಿದೆ. ಆದರೆ, 1828 ಅರ್ಜಿಗಳ ವಿಲೇವಾರಿ ಮಾತ್ರ ನಿಗದಿತ ಕಾಲಾವಧಿಯಲ್ಲಿ ಮುಗಿದಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದಿದ್ದರೆ ಜನರಿಗೆ ಸರ್ಕಾರದ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಇದಕ್ಕೆ ಅವಕಾಶ ಮಾಡಬಾರದು. ಇದೇ ರೀತಿ ಸಕಾಲ ಅಡಿ ಸ್ವೀಕರಿಸಲಾಗುವ ಅರ್ಜಿಗಳನ್ನು ಸಹ ಸಕಾಲದಲ್ಲಿಯೇ ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಆರ್ಥಿಕ ಇಲಾಖೆಯಿಂದ 24,300 ಹುದ್ದೆಗಳ ಭರ್ತಿಗೆ ಮಂಜೂರಾತಿ ನೀಡಲಾಗಿದೆ. ಈ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ವಹಿಸುವಂತೆ ಇದೇ ವೇಳೆ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ವೃಂದದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗದೆ ಬಾಕಿಯಿರುವ 32132 ಹುದ್ದೆಗಳಿವೆ. ಕೆಲವು ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿ ಪರಿಷ್ಕರಣೆ ಬಾಕಿಯಿದ್ದು, ಇದನ್ನು ಆದಷ್ಟು ಬೇಗನೆ ಮುಗಿಸಬೇಕು. ಗ್ರೂಪ್ ಎ, ಬಿ, ಸಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರವಾಗಿ ಆಗಬೇಕು ಎಂದು ತಿಳಿಸಿದರು.
ಇದೇ ವೇಳೆ, ಮುಖ್ಯಮಂತ್ರಿ ಅವರು\B \Bಈ ವರ್ಷ ಮಳೆ ಶೇ.5ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆಯಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ನಿರಂತರ ನಿಗಾ ವಹಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಸಭೆ ನಡೆಸಬೇಕು. ತಮ್ಮ ಉಸ್ತುವಾರಿಯಲ್ಲಿನ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವುದು ಆಯಾ ಕಾರ್ಯದರ್ಶಿಗಳ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ