ನರೇಂದ್ರ ಮೋದಿಯವರ ಸರ್ಕಾರದಿಂದ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಜಿಲ್ಲೆಯಲ್ಲಿ ಅತೀ ಶೀಘ್ರದಲ್ಲಿ ಆಕಾಶವಾಣಿ ಎಫ್‌ಎಂ ಕೇಂದ್ರ ಪ್ರಾರಂಭವಾಗಲಿದೆ ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಬೀದರ್ (ಜ.15): ನರೇಂದ್ರ ಮೋದಿಯವರ ಸರ್ಕಾರದಿಂದ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಜಿಲ್ಲೆಯಲ್ಲಿ ಅತೀ ಶೀಘ್ರದಲ್ಲಿ ಆಕಾಶವಾಣಿ ಎಫ್‌ಎಂ ಕೇಂದ್ರ ಪ್ರಾರಂಭವಾಗಲಿದೆ ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಬೀದರ್‌ನಲ್ಲಿರುವ ದೂರದರ್ಶನ ಕೇಂದ್ರದಲ್ಲಿ 100 ವ್ಯಾಟ್ ಸಾಮರ್ಥ್ಯವುಳ್ಳ ಎಫ್‌ಎಂ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ಈ ಎಫ್ಎಂ ಕೇಂದ್ರವು ಸದ್ಯ ಮರುಪ್ರಸಾರಣ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಬರುವ ಒಂದೆರಡು ವಾರದೊಳಗೆ ಲೋಕಾರ್ಪಣೆಗೊಳ್ಳಲಿದೆ. ಜನತೆಯ ಆಸೆ ಈಡೇರಲಿದೆ ಎಂದು ಸಚಿವರು ತಿಳಿಸಿದ್ದಾರೆ. ಸಧ್ಯ ಬೆಂಗಳೂರಿನಿಂದ ಬರುವ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳು ಬೀದರ್‌ನಿಂದ ಮರುಪ್ರಸಾರಗೊಳ್ಳುತ್ತವೆ. ನಂತರ ಮುಂದಿನ ಕೆಲವೇ ದಿನಗಳಲ್ಲಿ ಬೀದರ್ ಕೇಂದ್ರದಿಂದ ಖಾಸಗಿ ಎಫ್‌ಎಂ ಕೇಂದ್ರಗಳು ಇಲ್ಲಿಂದಲೇ ಕಾರ್ಯಾರಂಭ ಮಾಡಲಿವೆ. ಅದಕ್ಕೆ ಬೇಕಾದ ಸಿದ್ದತೆ ಈಗಾಗಲೆ ನಮ್ಮಲ್ಲಿಯೇ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
undefined
ಖಾಸಗಿ ಎಫ್‌ಎಂ ಚಾನೆಲ್‌ಗಳನ್ನು ಪ್ರಾರಂಭ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ, ರಿಲಯನ್ಸ್ ಎಫ್‌ಎಂ ಹಾಗೂ ಇನ್ನೊಂದು ಚಾನೆಲ್ ಬೀದರ್‌ನಿಂದ ಎಫ್‌ಎಂ ಚಾನೆಲ್ ಪ್ರಾರಂಭಿಸಲು ಆಸಕ್ತಿ ತೋರಿವೆ. ಆದರೆ ಮೊದಲು ಸರ್ಕಾರದ ಎಫ್‌ಎಂ ಕೇಂದ್ರ ಪ್ರಾರಂಭವಾದ ಮೇಲೆ ಇವುಗಳ ಕಾರ್ಯಾರಂಭಕ್ಕೆ ಅವಕಾಶವಿರುತ್ತದೆ. ಆದ್ದರಿಂದ ಶಿಘ್ರದಲ್ಲಿ ಎಫ್‌ಎಂ ಕೇಂದ್ರ ಪ್ರಾರಂಭವಾದ ಮೇಲೆ ಖಾಸಗಿ ಚಾನಲ್ ಪ್ರಾರಂಭವಾಗುತ್ತವೆ ಎಂದಿದ್ದಾರೆ.
ಅಯೋಧ್ಯೆ ರಾಮಮಂದಿರಕ್ಕೆ ತೆರಳಲು ಯಾರ ಅನುಮತಿಯೂ ಬೇಕಾಗಿಲ್ಲ: ದಿನೇಶ್ ಗುಂಡೂರಾವ್
ಈ ಎಫ್‌ಎಂ ಮರು ಪ್ರಸಾರಣ ಕೇಂದ್ರದಿಂದ ಸ್ಥಳೀಯ ಕಲಾವಿದರಿಗೆ, ಸ್ಥಳೀಯ ಉದ್ಯಮಗಳ ಪ್ರಚಾರಕ್ಕೆ, ಪ್ರಸರಣಕ್ಕೆ, ವೇಗದ ಮಾಹಿತಿ ಪ್ರಸರಣಕ್ಕೆ ತುಂಬಾ ಅನುಕೂಲವಾಗಲಿದೆ. ಉದ್ಯಮದ ಜೊತೆಗೆ ನಮ್ಮ ಭಾಗದ ಕಲೆ, ಸಂಸ್ಕೃತಿ ಹಾಗೂ ಭಾಷೆಗೆ ಪ್ರಾಶಸ್ತ್ಯ ಸಿಗಲಿದೆ ಎಂದು ಸಚಿವ ಖೂಬಾ ತಿಳಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ನಾನು ಸಂಸದನಾದ ಮೇಲೆ, ಹತ್ತಾರು ಹೊಸ ಯೋಜನೆಗಳು ಬೀದರ್ ಲೋಕಸಭಾ ಕ್ಷೇತ್ರಕ್ಕೆ ತಂದಿರುವೆ. ಅದರಲ್ಲಿ ಈ ಎಫ್ಎಂ ಕೇಂದ್ರವು ಒಂದಾಗಿದೆ. ಈ 10 ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ದಿ ಗಟ್ಟಿಯಾಗಿ ತಳಪಾಯ ಹಾಕಿರುವೆ. ಮುಂದಿನ ದಿನಗಳಲ್ಲಿ ಮತ್ತೊಂದು ಹಂತಕ್ಕೆ ಬೀದರ್ ಜಿಲ್ಲೆಯ ಅಭಿವೃದ್ಧಿಯನ್ನು ಕೊಂಡೊಯ್ಯಲಿದ್ದೇನೆ ಎಂದು ಸಚಿವ ಭಗವಂತ ಖೂಬಾ ವಿಶ್ವಾಸ ನೀಡಿದ್ದಾರೆ.