ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ರಾಜಕೀಯದ ಹೊರತಾದ ಸಾಧನೆಗಳು, ಅಭಿರುಚಿಗಳು ಮತ್ತು ಆಸಕ್ತಿಗಳನ್ನು ಅವರ ಮೊಮ್ಮಗಳು ಐಶ್ವರ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೃಷ್ಣ ಅವರೊಂದಿಗಿನ ಫೋಟೋಗಳು ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಐಶ್ವರ್ಯಾ ಅವರ ಅನಿಸಿಕೆಗಳನ್ನು ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು (ಡಿ.12): ಎಸ್.ಎಂ. ಕೃಷ್ಣ ಅವರನ್ನು ನಾವು ನೀವೆಲ್ಲರೂ ರಾಜಕೀಯವಾಗಿ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲರು, ಮಾಜಿ ಕೇಂದ್ರ (ವಿದೇಶಾಂಗ) ಸಚಿವರು ಎಂದೆಲ್ಲಾ ನೋಡುತ್ತೇವೆ. ಆದರೆ, ಕೃಷ್ಣ ಅವರಿಗಿದ್ದ ವಿಶೇಷ ಅಭಿರುಚಿಗಳು, ಆಸಕ್ತಿಗಳು ಹಾಗೂ ಅವರ ರಾಜಕೀಯ ಹೊರತಾದ ಸಾಧನೆಗಳ ಬಗ್ಗೆ ಅವರ ಮೊಮ್ಮಗ ಅಮರ್ಥ್ಯನ ಹೆಂಡತಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರು ತಿಳಿಸಿಕೊಟ್ಟಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಐಶ್ವರ್ಯಾ ಅವರು, ತಮ್ಮೊಂದಿಗೆ ಎಸ್.ಎಂ. ಕೃಷ್ಣ ಅವರು ಇರುವ ಹಲವು ಫೋಟೋಗಳನ್ನು ಹಾಗೂ ಕೃಷ್ಣ ಅವರ ಆಸಕ್ತಿಗೆ ಅನುಗುಣವಾಗಿ ಯಾವ್ಯಾವ ರೀತಿಯಲ್ಲಿ ಇರುತ್ತಿದ್ದರು ಎಂಬ ಕುರಿತು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್‌ಗೆ ಒಂದಷ್ಟು ಮಾಹಿತಿಯನ್ನೂ ಬರೆದುಕೊಂಡಿದ್ದು, ತಾತನ ಬಗ್ಗೆ ಅವರಿಗಿದ್ದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
'ಎಸ್.ಎಂ. ಕೃಷ್ಣ ಅವರು, ಪ್ರಪಂಚದ ಮೇಲೆ ಅಳಿಸಲಾಗದ ಗುರುತು ಬಿಟ್ಟ ವ್ಯಕ್ತಿ. ಒಬ್ಬ ಮಹಾನ್ ಮಾನವ, ದೂರದೃಷ್ಟಿಯ ನಾಯಕ, ರಾಜಕಾರಣಿ ಮತ್ತು ಅತ್ಯಂತ ಶಾಂತವಾಗಿರುವ ಅಜ್ಜ. ಸರಿಸಾಟಿಯಿಲ್ಲದ ಶೈಲಿ, ಟೈಮ್ಲೆಸ್ ಕ್ಲಾಸ್ ಮತ್ತು ಪ್ರಯತ್ನವಿಲ್ಲದ ಮೋಡಿ ಹೊಂದಿರುವ ವ್ಯಕ್ತಿ ಅವರಾಗಿದ್ದರು' ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು, 'ನಿಮ್ಮ ಎಲ್ಲಾ ಕಥೆಗಳಿಗೆ ಜೀವ ತುಂಬಿದ ಸ್ವಾದಿಷ್ಟಕರ ಊಟ, ನಿಮ್ಮ ಊಟದ ಮೇಜಿನ ಸಂಭಾಷಣೆಗಳಿಂದ ಹಿಡಿದು ನಿಮ್ಮೊಂದಿಗೆ ಟೆನಿಸ್ ಮತ್ತು ಫುಟ್ಬಾಲ್ ಪಂದ್ಯಗಳನ್ನು ನೋಡುವುದು ಹಾಗೂ ಶಿಕ್ಷಣ, ರಾಜಕೀಯ ಮತ್ತು ಪ್ರಪಂಚದ ವ್ಯವಹಾರಗಳ ಬಗ್ಗೆ ಚರ್ಚಿಸುವುದು - ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವೂ ಸುಂದರವಾಗಿದೆ. ನೀವು ನಮಗೆ ಅಪ್ಪ, ಬುದ್ಧಿವಂತಿಕೆಯ ನಿಧಿ, ಹಾಸ್ಯಗಾರ ಮತ್ತು ಸ್ಫೂರ್ತಿಯ ಚಿಲುಮೆ ಆಗಿದ್ದೀರಿ' ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಎಸ್ಎಂ ಕೃಷ್ಣ ಸಾವು ನನಗೆ ದುಃಖ ತಂದಿಲ್ಲ, ಸಂತೋಷ ತಂದಿದೆ: ಸಂತಾಪ ಸಭೆಯಲ್ಲಿ ಡಿಕೆಶಿ ಭಾವುಕ ಮಾತು!
ಜೊತೆಗೆ, 'ನೀವು ಕೇವಲ ಕನಸುಗಾರರಲ್ಲ ಆದರೆ, ಕನಸನ್ನು ನನಸು ಮಾಡುವವರು, ಆಕಾಂಕ್ಷೆಗಳನ್ನು ವಾಸ್ತವಕ್ಕೆ ತಿರುಗಿಸಿದ ಮತ್ತು ದಾರಿಯುದ್ದಕ್ಕೂ ಅಸಂಖ್ಯಾತ ಜನರ ಜೀವನವನ್ನು ಬದಲಾಯಿಸಿದ ವ್ಯಕ್ತಿ. ನಿಮ್ಮ ದೂರ ದೃಷ್ಟಿ ಉತ್ತಮ ಭವಿಷ್ಯವನ್ನು ರೂಪಿಸಿದೆ. ನಿಮ್ಮ ದಯೆಯು ನಿಮ್ಮ ಸುತ್ತಲಿನ ಪ್ರತಿ ಹೃದಯವನ್ನು ಮುಟ್ಟಿದೆ. ಚಿಂತನಶೀಲ ನಾಯಕತ್ವದ ಕಲೆ, ಅರ್ಥಪೂರ್ಣ ಸಂಭಾಷಣೆಯ ಪ್ರಾಮುಖ್ಯತೆ ಮತ್ತು ಕನಸುಗಳನ್ನು ಉದ್ದೇಶಪೂರ್ವಕವಾಗಿ ಬೆನ್ನಟ್ಟುವ ಶಕ್ತಿಯನ್ನು ನಮಗೆ ಕಲಿಸಿದ್ದಕ್ಕಾಗಿ ಧನ್ಯವಾದಗಳು. 'ಪ್ರೀತಿ, ಮೆಚ್ಚುಗೆ ಮತ್ತು ಶಾಶ್ವತ ಕೃತಜ್ಞತೆಯೊಂದಿಗೆ, ಮಿಸ್ ಯು ಡ್ಯಾಡಿ' ಐಶ್ವರ್ಯ ಎಂದು ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ಕೃಷ್ಣ ಅವರ ಕುರಿತು ಪೋಸ್ಟ್ ಹಂಚಿಕೊಂಡಿದ್ದು ಕೇವಲ 1 ಗಂಟೆಯಲ್ಲಿ 18 ಸಾವಿರದಷ್ಟು ಲೈಕ್ಸ್ ಪಡೆದಿದ್ದಾರೆ. ಎಸ್.ಎಂ. ಕೃಷ್ಣ ಅವರದ್ದು ತುಂಬಾ ಸೊಗಸಾದ ವ್ಯಕ್ತಿತ್ವ. ಕೇವಲ ಬೆಂಗಳೂರು ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅಭಿವೃದ್ಧಿಗೆ ಒಂದು ಅಡಿಪಾಯ ಹಾಕಿಕೊಟ್ಟ ವ್ಯಕ್ತಿ ಅವರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅವರು ಟೆನ್ನಿಸ್ ಆಡುತ್ತಿದ್ದಂತಹ ರೀತಿಯೇ ಅದ್ಭುತವಾಗಿತ್ತು. ಅವರು ಯಾವಾಗಲೂ ಯುವಜನರ ಬಳಿಯೇ ಹೆಚ್ಚಾಗಿರುತ್ತಿದ್ದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಎಸ್‌ಎಂ ಕೃಷ್ಣರ ಪ್ರತಿ ಮಾತಿನಲ್ಲಿತ್ತು ಘನತೆ; ಅದೇ ಬೆಳಗುತ್ತಿದೆ ಹಣತೆ!