ಕೊರೋನಾ ಟೆಸ್ಟ್‌ ರಿಪೋರ್ಟ್‌ ಇದ್ದರಷ್ಟೇ ಎಪಿಎಂಸಿಗೆ ಪ್ರವೇಶ

By Kannadaprabha NewsFirst Published Aug 13, 2020, 9:06 AM IST
Highlights

ಮಾರುಟ್ಟೆಯಲ್ಲಿ ಸೇವೆ ಸಲ್ಲಿಸುವ ಎಲ್ಲ ವ್ಯಾಪಾರಿಗಳು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು| ನೆಗೆಟಿವ್‌ ಫಲಿತಾಂಶ ಬಂದವರಿಗೆ ಮಾತ್ರ ಪ್ರವೇಶ| ಪಾಸಿಟಿವ್‌ ಬಂದಿರುವವರು ಕ್ವಾರಂಟೈನ್‌ ಆಗಬೇಕು|ವರದಿ ಇಲ್ಲದವರನ್ನು ವ್ಯಾಪಾರ ನಡೆಸಲು ಅವಕಾಶವಿಲ್ಲ| 

ಬೆಂಗಳೂರು(ಆ.13):  ಕೊರೋನಾ ಪರೀಕ್ಷೆ ವರದಿಯ ಪ್ರತಿ ಇಲ್ಲದ ವರ್ತಕರನ್ನು ಆ.13ರ ಬಳಿಕ ಎಪಿಎಂಸಿ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ನೀಡದಿರಲು ಕೃಷಿ ಮಾರುಕಟ್ಟೆ ಸಮಿತಿ ನಿರ್ಧರಿಸಿದೆ.

ಮಾರುಟ್ಟೆಯಲ್ಲಿ ಸೇವೆ ಸಲ್ಲಿಸುವ ಎಲ್ಲ ವ್ಯಾಪಾರಿಗಳು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೆಗೆಟಿವ್‌ ಫಲಿತಾಂಶ ಬಂದವರಿಗೆ ಮಾತ್ರ ಪ್ರವೇಶವಿರುತ್ತದೆ, ಪಾಸಿಟಿವ್‌ ಬಂದಿರುವವರು ಕ್ವಾರಂಟೈನ್‌ ಆಗಬೇಕು ತಿಳಿಸಲಾಗಿದೆ.
ಮಾರುಕಟ್ಟೆಯ ಎಲ್ಲ ಪೇಟೆ ಕಾರ್ಯಕರ್ತರು, ಮಾಲೀಕರು, ಹಮಾಲಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಂಡು ವರದಿ ಹೊಂದಿರಬೇಕು. ಇದಕ್ಕಾಗಿ ಮಾರುಕಟ್ಟೆಯ ಎಲ್ಲ ವ್ಯಾಪಾರಿಗಳಿಗೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯಿಂದ ಉಚಿತ ಕೊರೋನಾ ಸೋಂಕು ಪರೀಕ್ಷೆ ಮಾಡಿಸಲಾಗುವುದು ಎಂದು ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ ಕಡ್ಡಾಯಗೊಳಿಸಿರುವ ಕ್ರಮಕ್ಕೆ ವರ್ತಕರು ವಿರೋಧ ವ್ಯಕ್ತಪಡಿಸಿದ್ದು, ವರದಿ ಇಲ್ಲದವರನ್ನು ವ್ಯಾಪಾರ ನಡೆಸಲು ಬಿಡುವುದಿಲ್ಲ ಎನ್ನುವುದು ಸರಿಯಲ್ಲ ಎಂದಿದ್ದಾರೆ.

ಹುಬ್ಬಳ್ಳಿ: ಏಷ್ಯಾದ ಅತಿ ದೊಡ್ಡ ಎಪಿಎಂಸಿಗೆ ಆರ್ಥಿಕ ಸಂಕಷ್ಟದ ಭೀತಿ

ಮನೆಗಳಲ್ಲಿ ತಪಾಸಣೆ ಮಾಡಲಿ

ಮಾರುಕಟ್ಟೆಯಲ್ಲಿ ಕೊರೋನಾ ಪರೀಕ್ಷೆ ಮಾಡಿಸುವುದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿರುವ ವರ್ತಕರು, ಎಪಿಎಂಸಿಯಲ್ಲಿ ಕೊರೋನಾ ಪರೀಕ್ಷೆ ಮಾಡಿಸುವುದಕ್ಕೆ ನಮ್ಮ ವಿರೋಧವಿಲ್ಲ. ನಮಗೆ ಇಲ್ಲಿ ಪರೀಕ್ಷೆ ಮಾಡಿಸಿದರೂ ಮನೆಯಲ್ಲಿರುವವರಿಗೆ ಯಾವುದೋ ಮೂಲದಿಂದ ಕೋವಿಡ್‌ ಬಂದಿದ್ದರೆ ನಮಗೂ ಬರದೆ ಇರದು. ಆದ್ದರಿಂದ ವರದಿ ತಂದರೆ ಯಾವುದೇ ಪ್ರಯೋಜನ ಇರುವುದಿಲ್ಲ.ಎಪಿಎಂಸಿ ಸಿಬ್ಬಂದಿಯ ಹಿತ ಕಾಯುವುದೇ ಆದರೆ ಮನೆ ಮನೆಗಳಲ್ಲಿ ತಪಾಸಣೆ ನಡೆಸಲಿ ಎಂದು ಅವರು ಮನವಿ ಮಾಡಿದ್ದಾರೆ.

ಇಲ್ಲಿ ಕೆಲಸ ಮಾಡುವ ಯಾವುದೇ ಸಿಬ್ಬಂದಿಗೆ ಅಂತಹ ಲಕ್ಷಣಗಳು ಕಂಡು ಬಂದರೆ ಅವರಿಗೆ ರಜೆ ಕೊಟ್ಟು ಕಳುಹಿಸುತ್ತಿದ್ದೇವೆ. ಇದೀಗ ವರದಿ ಇಲ್ಲದವರನ್ನು ವ್ಯಾಪಾರ ನಡೆಸಲು ಬಿಡುವುದಿಲ್ಲ ಎನ್ನುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

click me!