
ಮಲ್ಕುಂಡಿ/ಹೊನ್ನಾಳಿ(ಜ.28): ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೆ ಮೂವರು ಬಲಿಯಾಗಿದ್ದಾರೆ. ಸಾಲಕ್ಕೆ ಹೆದರಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಜಯಶೀಲ (53) ಹಾಗೂ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ (32) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ, ರಾಣೆಬೆನ್ನೂರು ತಾಲೂಕು ತುಮ್ಮಿನಕಟ್ಟೆಯ ಸರ್ಕಾರಿ ಶಾಲಾ ಶಿಕ್ಷಕಿ ಪುಷ್ಪಲತಾ (46) ಎಂಬುವರು ಹೊನ್ನಾಳಿ ಸಮೀಪ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಯಶೀಲ ಅವರು ಐಐಎಫ್‌ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್‌ಗಳಲ್ಲಿ ಮನೆ ಕಟ್ಟಲು, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ 5 ಲಕ್ಷ ರು. ಸಾಲ ಪಡೆದಿದ್ದರು. ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು ಇಎಂಐ ಕಟ್ಟಬೇಕಾಗಿತ್ತು. ಸಾಲ ಮಾಡಿ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದರು.
ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಹಾಕಿ ಮನೆ ಸೀಜ್ ಮಾಡಿದ ಮೈಕ್ರೊಫೈನಾನ್ಸ್ ಕಂಪನಿ
ಭಾನುವಾರ ಸಮೀಪದ ಹುಲ್ಲಹಳ್ಳಿಗೆ ತೆರಳಿ ತಮ್ಮ ಜಮೀನಿನಲ್ಲಿ ವಿಷದ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಮಲ್ಕುಂಡಿಯ ಕೃಷ್ಣ ಮೂರ್ತಿ 4 ಖಾಸಗಿ ಫೈನಾನ್ಸ್ ಗಳಲ್ಲಿ 4 ಲಕ್ಷ ರು.ಸಾಲ ಮಾಡಿದ್ದು, ವಾರಕ್ಕೊಮ್ಮೆ ಹಣ ಕಟ್ಟುತ್ತಿದ್ದರು. ಸೋಮವಾರ ಬೆಳಗ್ಗೆ ಕಂತು ಕಟ್ಟಬೇಕಾಗಿತ್ತು. ಹಣವಿಲ್ಲದೆ ಮನನೊಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಸಕ ದರ್ಶನ್ ಧ್ರುವನಾರಾಯಣ್ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು.ಗಳ ಪರಿಹಾರ ಘೋಷಿಸಿದ್ದಾರೆ.
ಪುಷ್ಪಲತಾ ಶಿವಮೊಗ್ಗ ಮೂಲದ ಖಾಸಗಿ ಫೈನಾನ್ಸ್ ಸೇರಿದಂತೆ ಹಲವಾರು ಕಡೆ ಲಕ್ಷಾಂತರ ರು. ಸಾಲ ಪಡೆದಿದ್ದರು. ಸಾಲ ಪಾವತಿ ಸಲಾರದೆ ಮನನೊಂದು ಭಾನು ವಾರ ಮಧ್ಯಾಹ್ನ ಹೊನ್ನಾಳಿ ಸಮೀ ಪದ ತುಂಗ ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತಿ ಹಾಲೇಶ್ ಶಿಕ್ಷಕರಾಗಿದ್ದು, ರಟ್ಟೆಹಳ್ಳಿ ತಾಲೂಕು ಕಿರಿಗೆರೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದಂಪತಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ