ಬೆಂಗ್ಳೂರು ಆಯ್ತು, ಇದೀಗ ಜಿಲ್ಲೆಗಳಲ್ಲಿ ಬೆಡ್‌ಗೆ ಹಾಹಾಕಾರ!

By Kannadaprabha NewsFirst Published May 6, 2021, 7:48 AM IST
Highlights

ಬೆಂಗ್ಳೂರು ಆಯ್ತು, ಇದೀಗ ಜಿಲ್ಲೆಗಳಲ್ಲಿ ಬೆಡ್‌ಗೆ ಹಾಹಾಕಾರ| ರಾಜ್ಯದಲ್ಲಿ ಕೊರೋನಾ ಸೋಂಕಿತರ ಸ್ಥಿತಿ ಚಿಂತಾಜನಕ| ಹೆಚ್ಚಿನ ಆಸ್ಪತ್ರೆ ಭರ್ತಿ| ಆ್ಯಂಬುಲೆನ್ಸ್‌, ಆಸ್ಪತ್ರೆ ಹೊರಗೆ ಚಿಕಿತ್ಸೆ

 ಬೆಂಗಳೂರು(ಮೇ.06): ಕೊರೋನಾ 2ನೇ ಅಲೆ ಆರ್ಭಟ ಹೆಚ್ಚುತ್ತಿರುವ ನಡುವೆಯೇ ಬೆಂಗಳೂರು ರೀತಿಯಲ್ಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್‌ ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ ಬುಧವಾರವೂ ಹಾಹಾಕಾರ ಮುಂದುವರಿದಿದೆ. ದಕ್ಷಿಣ ಕನ್ನಡ ಸೇರಿ ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಕೋವಿಡ್‌ ಆಸ್ಪತ್ರೆಗಳಲ್ಲಿ ಕೋವಿಡ್‌ ಆಸ್ಪತ್ರೆಗಳು ಭರ್ತಿಯಾಗಿದ್ದು, ಸಕಾಲದಲ್ಲಿ ಆಕ್ಸಿಜನ್‌ ಸಹಿತ ಬೆಡ್‌ ಸಿಗದೆ ಇಬ್ಬರು ಸಾವಿಗೀಡಾಗಿದ್ದರೆ. ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ಬೆಡ್‌ನಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡುವಂಥ ಸ್ಥಿತಿ ಸೃಷ್ಟಿಯಾಗಿದ್ದು, ಮೈಸೂರಲ್ಲಿ ಆಂಬುಲೆನ್ಸ್‌ನಲ್ಲೇ ಚಿಕಿತ್ಸೆ ನೀಡಲಾಗಿದೆ.

ಬಹುತೇಕ ಸೋಂಕಿತರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲೂ ಸಾಮಾನ್ಯ ಬೆಡ್‌ಗಳಿಗಿಂತ ಆಕ್ಸಿಜನ್‌ ಸೌಲಭ್ಯವಿರುವ ಬೆಡ್‌ಗಳಿಗೇ ಹೆಚ್ಚಿನ ಬೇಡಿಕೆ ಇದೆ. ದಿನಕ್ಕೆ 40, 50 ಸೋಂಕಿತರು ಬರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಅವರನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳುವುದು ಹೇಗೆನ್ನುವ ಪ್ರಶ್ನೆ ವೈದ್ಯರನ್ನು ಕಾಡುತ್ತಿದೆ.

ಬಳ್ಳಾರಿಯಲ್ಲಿ ಪ್ರತಿದಿನ 150ರಿಂದ 200 ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ವಿಮ್ಸ್‌ ಆಸ್ಪತ್ರೆಯಲ್ಲಿ ಬೆಡ್‌ ಸಮಸ್ಯೆ ತಲೆದೋರಿದೆ. ನೆಲದ ಮೇಲೆಯೇ ಬೆಡ್‌ಗಳನ್ನು ಹಾಕಿ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಬೆಡ್‌ ಮೇಲೆ ಇಬ್ಬರಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳೂ ಇಲ್ಲಿ ಕಣ್ಣಿಗೆ ಬೀಳುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿಮ್ಸ್‌ನ ಐಸಿಯು ಬೆಡ್‌ಗಳ ಸಂಖ್ಯೆಯನ್ನು ಮೂರುಪಟ್ಟು ಹೆಚ್ಚಳ ಮಾಡಲಾಗಿದೆ. ಆದರೂ ಇದು ಏನಕ್ಕೂ ಸಾಲದು ಎನ್ನುವಂಥ ಪರಿಸ್ಥಿತಿ ಇದೆ.

ಆ್ಯಂಬುಲೆನ್ಸ್‌ನಲ್ಲೇ ಚಿಕಿತ್ಸೆ: ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಬೆಡ್‌ ಕೊರತೆ ಉಂಟಾಗಿ, ಆ್ಯಂಬುಲೆನ್ಸ್‌ನಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಗೆ ಬೆಡ್‌ ಸಿಕ್ಕಿಲ್ಲ ಎನ್ನುವ ಮಾಹಿತಿ ಸಿಗುತ್ತಿದ್ದಂತೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ತಾತ್ಕಾಲಿಕವಾಗಿ ಆ್ಯಂಬುಲೆನ್ಸ್‌ನಲ್ಲೇ ರೋಗಿಗೆ ಚಿಕಿತ್ಸೆ ನೀಡಿದ್ದಾರೆ. ಈಗಾಗಲೇ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಬೆಡ್‌ ಮತ್ತು ಐಸಿಯು ಕೊರತೆ ಇರುವುದರಿಂದ ಬೇರೆ ಬೇರೆ ಆಸ್ಪತ್ರೆಗೆ ರೋಗಿಗಳನ್ನು ಸಾಗಿಸಲಾಗುತ್ತಿದೆ. ಆದರೆ ತುರ್ತು ಹಿನ್ನೆಲೆಯಲ್ಲಿ ರೋಗಿಗಳ ಜೀವ ರಕ್ಷಣೆಗಾಗಿ ಆ್ಯಂಬುಲೆನ್ಸ್‌ನಲ್ಲೇ ಚಿಕಿತ್ಸೆ ನೀಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

"

ಬೆಡ್‌ ಸಿಗದೆ ಸಾವು: ಚಾಮರಾಜನಗರದ ಜಿಲ್ಲಾಸ್ಪತ್ರೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಆಕ್ಸಿಜನ್‌ ಸಹಿತ ಬೆಡ್‌ ಸಿಗದೆ ಇಬ್ಬರು ಬಲಿಯಾಗಿದ್ದಾರೆ. ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಚಾಮರಾಜನಗರದ ಕೆಸ್ತೂರು ಗ್ರಾಮದ ಸತ್ಯನಾರಾಯಣಶೆಟ್ಟಿಅವರನ್ನು ಮಂಗಳವಾರ ರಾತ್ರಿಯೇ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ, ಬೆಡ್‌ ಖಾಲಿ ಸಿಗದೆ ಬೆಳಗ್ಗೆವರೆಗೆ ಜಿಲ್ಲಾಸ್ಪತ್ರೆ ಆವರಣದಲ್ಲೇ ಕಾದು ಕುಳಿತಿದ್ದಾರೆ. ಬೆಳಗ್ಗೆ ಅರ್ಧ ಗಂಟೆ ಆಕ್ಸಿಜನ್‌ ಹಾಕಿದ್ದಾರೆ. ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮೈಲನಹಳ್ಳಿಯಲ್ಲಿ ನಿರ್ಮಲ(58) ಎಂಬ ಮಹಿಳೆ ಮೂರು ದಿನಗಳಿಂದ ಐಸಿಯು ಬೆಡ್‌ ಸಿಗದೆ ಮೃತಪಟ್ಟಿದ್ದಾರೆ,

ಅಮ್ಮನಿಗಾಗಿ ಗಡಿಯಿಂದಲೇ ವಿಡಿಯೋ ಮಾಡಿ ಕಣ್ಣೀರಿಟ್ಟ ಯೋಧ!

ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧನೊಬ್ಬ ಕೊರೋನಾನಿಂದಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ತನ್ನ ಹೆತ್ತಮ್ಮನನ್ನು ಉಳಿಸಿಕೊಡುವಂತೆ ಗಡಿಯಿಂದಲೇ ವಿಡಿಯೋ ಮಾಡಿ ಕಣ್ಣೀರಿಟ್ಟಿರುವ ಪ್ರಸಂಗವೂ ನಡೆದಿದೆ. ಕಲಬುರಗಿ ತಾಲೂಕಿನ ಪಾಣೆಗಾಂವ್‌ ಗ್ರಾಮದ ಯೋಧ ಸಂಜೀವ್‌ ರಾಠೋಡ್‌ ಅವರ ತಾಯಿ ನಾಲ್ಕು ದಿನದ ಹಿಂದೆ ಕೋವಿಡ್‌ಗೆ ತುತ್ತಾಗಿದ್ದಾರೆ. ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದ ಅವರಿಗೆ, ಉಸಿರಾಟÜ ಸಮಸ್ಯೆ ತೀವ್ರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್‌ ಸಹಿತ ಬೆಡ್‌ ಸಿಗದೆ ಪರದಾಡುತ್ತಿದ್ದಾರೆ. ಕಲಬುರಗಿಯಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಬೆಡ್‌, ಆಕ್ಸಿಜನ್‌ ಇಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿಯಿಂದಲೇ ವಿಡಿಯೋ ಮಾಡಿ ತನ್ನ ತಾಯಿ ಉಳಿಸಿಕೊಡುವಂತೆ ಕಣ್ಣೀರಿಟ್ಟಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!