50000 ಕೇಸ್, 346 ಬಲಿ| ರಾಜ್ಯದಲ್ಲಿ ಕೊರೋನಾ ತಾಂಡವ| ಸೋಂಕು, ಸಾವು ಹೊಸ ದಾಖಲೆ| ದಾಖಲೆಯ 26841 ಮಂದಿ ಗುಣಮುಖ| 10 ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಹೆಚ್ಚು ಕೇಸ್| ಶೇ.32 ಪಾಸಿಟಿವಿಟಿ ದರ: ಇದೂ ಹೊಸ ದಾಖಲೆ
ಬೆಂಗಳೂರು(ಮೇ.06): ರಾಜ್ಯದಲ್ಲಿ ಕೊರೋನಾದ ಮಹಾಸ್ಫೋಟವಾಗಿದ್ದು, ಬರೋಬ್ಬರಿ 50,112 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದೆ. ದಾಖಲೆಯ 346 ಮಂದಿ ಮೃತರಾಗಿದ್ದಾರೆ. ಇದೇವೇಳೆ 26,841 ಮಂದಿ ಗುಣಮುಖರಾಗಿದ್ದಾರೆ. ಬುಧವಾರ ರಾಜ್ಯದ ಕೋವಿಡ್ ಸೋಂಕಿನ ಪ್ರಕರಣ, ಸಾವು, ಗುಣಮುಖರ ಸಂಖ್ಯೆ, ಪಾಸಿಟಿವಿಟಿ ದರ ಎಲ್ಲದರಲ್ಲೂ ದಾಖಲೆ ನಿರ್ಮಾಣವಾಗಿದೆ.
ಒಟ್ಟು 1.55 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು ಹೆಚ್ಚು ಕಡಿಮೆ ಪ್ರತಿ ಮೂರು ಪರೀಕ್ಷೆಗೆ ಒಂದು ಪಾಸಿಟಿವ್ ಬಂದಿದೆ. ಪ್ರತಿ ನಿಮಿಷಕ್ಕೆ 34.8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದ ಸದ್ಯದ ಪಾಸಿಟಿವಿಟಿ ದರ ದಾಖಲೆಯ ಶೇ. 32.28ರಷ್ಟಿದೆ.
undefined
ಏಪ್ರಿಲ್ 30 ರಂದು 48,296 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಈವರೆಗಿನ ದಾಖಲೆಯಾಗಿತ್ತು. ಅದೇ ರೀತಿ ಮೇ. 3 ರಂದು 29.80 ಪಾಸಿಟಿವಿಟಿ ದಾಖಲಾದ ಬಳಿಕದ ಗರಿಷ್ಠ ಪಾಸಿಟಿವಿಟಿ ಬುಧವಾರ ವರದಿಯಾಗಿದೆ. ಆದರೆ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರದ ಪಾಲು ಶೇ.46ಕ್ಕೆ ಇಳಿದಿದ್ದು, ಉಳಿದ ಶೇ.54 ಭಾಗ ರಾಜ್ಯದ ಅನ್ಯ ಭಾಗಗಳಿಂದ ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4.87 ಲಕ್ಷಕ್ಕೆ ಏರಿದ್ದು ಗುರುವಾರ 5 ಲಕ್ಷ ಗಡಿ ದಾಟುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲಿ 3.13 ಲಕ್ಷ ಸಕ್ರಿಯ ಪ್ರಕರಣಗಳಿವೆ.
ದಾಖಲೆಯ ಸಾವು:
ರಾಜ್ಯದಲ್ಲಿ ಮೊದಲ ಬಾರಿಗೆ ಸಾವಿನ ಸಂಖ್ಯೆ 300ರ ಗಡಿ ದಾಟಿದೆ. ಮೇ 1 ರಂದು 271 ಮಂದಿ ಮರಣವನ್ನಪ್ಪಿದ್ದರು. ಬುಧವಾರ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ಮೃತರಾಗಿದ್ದಾರೆ. ಬೆಂಗಳೂರಿನಲ್ಲಿ 161 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 5 ದಿನದಲ್ಲಿ 1,365 ಮಂದಿ ಕೋವಿಡ್‌ನಿಂದ ಜೀವ ಕಳೆದುಕೊಂಡಿದ್ದಾರೆ.
ಈ ಮಧ್ಯ ರಾಜ್ಯದ ಕೋವಿಡ್ ಪರೀಕ್ಷೆಯ ಪ್ರಮಾಣ ಕುಸಿದಿರುವುದು ಆತಂಕಕಾರಿಯಾಗಿದೆ. ರಾಜ್ಯದಲ್ಲಿ ಬುಧವಾರ 1.55 ಲಕ್ಷ ಕೋವಿಡ್ ಪರೀಕ್ಷೆ ನಡೆದಿದೆ. ಏಪ್ರಿಲ್ 23 ರಿಂದ ಮೇ 1 ರವರೆಗೆ ನಿರಂತರವಾಗಿ 1.65 ಲಕ್ಷಕ್ಕಿಂತ ಹೆಚ್ಚು ಪರೀಕ್ಷೆ ಪ್ರತಿ ದಿನ ನಡೆದಿದೆ. ಆದರೆ ಮೇ.2ರಿಂದ ಈವರೆಗೆ 1.50 ಲಕ್ಷದ ಅಸುಪಾಸಿನಷ್ಟುಮಾತ್ರ ಪರೀಕ್ಷೆ ನಡೆಯುತ್ತಿದೆ.
ರಾಜ್ಯದಲ್ಲಿ ಈವರೆಗೆ 17.4 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಈ ಪೈಕಿ 12.36 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 16,884 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 2.63 ಕೋಟಿ ಕೋವಿಡ್ ಪರೀಕ್ಷೆ ನಡೆದಿದೆ.
ಜಿಲ್ಲಾವಾರು ಸಾವಿನ ವಿವರ:
ಬೆಂಗಳೂರಲ್ಲಿ 23106, ಬಳ್ಳಾರಿ ಮತ್ತು ಮಂಡ್ಯ ತಲಾ 19, ಶಿವಮೊಗ್ಗ, ಕಲಬುರಗಿ ಮತ್ತು ಉತ್ತರ ಕನ್ನಡ ತಲಾ 15, ತುಮಕೂರು 12, ಹಾಸನ 11, ಧಾರವಾಡ 8, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ ತಲಾ 5, ದಕ್ಷಿಣ ಕನ್ನಡ, ವಿಜಯಪುರ, ಹಾವೇರಿ ತಲಾ 4, ಬಾಗಲಕೋಟೆ, ಗದಗ, ರಾಯಚೂರು ಮತ್ತು ಉಡುಪಿ ತಲಾ 3, ರಾಮನಗರ, ದಾವಣಗೆರೆ, ಚಿಕ್ಕಮಗಳೂರು, ಬೆಳಗಾವಿ ತಲಾ 2 ಮತ್ತು ಚಿತ್ರದುರ್ಗದಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತರಾಗಿದ್ದಾರೆ.
ಇದೇ ವೇಳೆ 10 ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಹೆಚ್ಚು ಸೋಂಕು ವರದಿಯಾಗಿದೆ. ಮೈಸೂರು 2,790, ತುಮಕೂರು 2,355, ಉಡುಪಿ 1,655, ಮಂಡ್ಯ 1,621, ಹಾಸನ 1,604, ಕಲಬುರಗಿ 1,097, ಬೆಂಗಳೂರು ಗ್ರಾಮಾಂತರ 1,0333, ಧಾರವಾಡ 1,030, ಚಿಕ್ಕಮಗಳೂರು 1,009 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona