
ಕೃಷ್ಣ ಲಮಾಣಿ
ಹೊಸಪೇಟೆ (ಜೂ.26): ವಿಜಯನಗರ ಆಳರಸರ ಕಾಲದ ಕಾಲುವೆಗಳ ಆಧುನೀಕರಣಕ್ಕಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಬಸವಣ್ಣ ಕಾಲುವೆ ಆಧುನೀಕರಣಕ್ಕಾಗಿ ನೀಡಿದ್ದ ₹50 ಕೋಟಿ ವಾಪಸ್ ಪಡೆದಿದೆ!. ಇದರಿಂದ ಈ ಕಾಲುವೆ ಆಧುನೀಕರಣಕ್ಕೆ ಹೊಡೆತ ಬೀಳಲಿದೆ ಎಂಬುದನ್ನರಿತು ರಾಜ್ಯ ಸರ್ಕಾರ ₹64 ಕೋಟಿ ಮಂಜೂರು ಮಾಡಿದೆ.
ವಿಜಯನಗರ ಆಳರಸರ ಕಾಲದ ಕಾಲುವೆಯಾದ ಬಸವಣ್ಣ ಕಾಲುವೆ ಚರಂಡಿಯಾಗಿ ಪರಿವರ್ತನೆಯಾಗಿದೆ. ಜೊತೆಗೆ ಕಾಲುವೆ ಒತ್ತುವರಿಯಾಗಿದೆ. ಇದು ನೀರಾವರಿ ಕಾಲುವೆಯಾಗಿದ್ದು, ಇದನ್ನು ಚರಂಡಿಯಾಗಿ ಮಾರ್ಪಾಡು ಮಾಡಲಾಗಿದೆ. ಆದರೂ ಸ್ಥಳೀಯಾಡಳಿತ (ನಗರಸಭೆ) ಈ ಬಗ್ಗೆ ಮುತುರ್ಜಿ ವಹಿಸಿಲ್ಲ. ಈ ಕಾಲುವೆ ಎ ಕೆಟಗರಿಯಿಂದ ಸಿ ಕೆಟಗರಿಗೆ ಹೋಗಿದೆ. ಹಾಗಾಗಿ ಈ ಕಾಲುವೆ ಆಧುನೀಕರಣಕ್ಕೆ ಮಂಜೂರಾಗಿರುವ ₹50 ಕೋಟಿ ನೀಡುವುದಿಲ್ಲ ಎಂದು ಎಡಿಬಿ ಸ್ಪಷ್ಟವಾಗಿ ಹೇಳಿ ಹಣ ವಾಪಸ್ ಪಡೆದಿದೆ. ಹಾಗಾಗಿ ಕಾಲುವೆ ಆಧುನೀಕರಣಕ್ಕೆ ಗುತ್ತಿಗೆ ಪಡೆದಿರುವ ಆರ್‌ಎನ್‌ಎಸ್ ಸಂಸ್ಥೆ ಕೂಡ ಕಾಲುವೆ ಆಧುನೀಕರಣ ಕಾಮಗಾರಿಯಿಂದ ಹಿಂದೆ ಸರಿದಿದೆ.
ಕಾಲುವೆ ಸ್ಥಿತಿ ಶೋಚನೀಯ:
ನಗರದ ಮಧ್ಯಭಾಗದಲ್ಲೇ ಹಾಯ್ದು ಹೋಗಿರುವ ಬಸವಣ್ಣ ಕಾಲುವೆ ಸ್ಥಿತಿ ಶೋಚನೀಯವಾಗಿದೆ. ಈ ಕಾಲುವೆಯಲ್ಲಿ ಚರಂಡಿ ನೀರು, ತ್ಯಾಜ್ಯ, ಕಸ, ಕಡ್ಡಿ ಸುರಿಯಲಾಗುತ್ತಿದೆ. ಹಾಗಾಗಿ ಕಾಲುವೆ ಸಂಪೂರ್ಣವಾಗಿ ಚರಂಡಿಯಾಗಿ ಮಾರ್ಪಟ್ಟಿದೆ. ಈ ಕಾಲುವೆ ಕುರಿತು ವಸ್ತುಸ್ಥಿತಿ ವರದಿ ಪಡೆದುಕೊಂಡ ಬಳಿಕವೇ ಎಡಿಬಿಯ ತಜ್ಞರು ₹50 ಕೋಟಿ ಹಣ ವಾಪಸ್ ಪಡೆದಿದ್ದಾರೆ.
ಈ ಕಾಲುವೆಯಲ್ಲಿ ಕಸ, ತ್ಯಾಜ್ಯ ಸೇರಿ ನಗರದ ಮೂರಂಗಡಿ ವೃತ್ತದ ಬಳಿ ಮಲಿನ ನೀರು ಆಗಾಗ ಹರಿಯುತ್ತಲೇ ಇರುತ್ತದೆ. ನೀರಾವರಿ ಇಲಾಖೆ ಹಾಗೂ ನಗರಸಭೆಯಿಂದ ಕಾಲುವೆ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಲೇ ಬರಲಾಗುತ್ತಿದೆ. ಜೂನ್ 14ರಂದು ಕೂಡ ಈ ಕಾಲುವೆ ನೀರು ರಸ್ತೆಯಲ್ಲಿ ಹರಿದಾಡಿತ್ತು. ಈಗ ಕಾಲುವೆಗೆ ನೀರು ಬಿಡುವುದನ್ನು ನಿಲ್ಲಿಸಲಾಗಿದೆ.
ಏನೀದು ಆಧುನೀಕರಣ ಯೋಜನೆ?:
ವಿಜಯನಗರದ ಆಳರಸರ ಕಾಲದ 16 ಕಾಲುವೆಗಳನ್ನು ಆಧುನೀಕರಣಗೊಳಿಸಲು ಎಡಿಬಿ ರಾಜ್ಯ ಸರ್ಕಾರಕ್ಕೆ ಅನುದಾನ ಮಂಜೂರು ಮಾಡಿದೆ. ವಿಜಯನಗರ ಜಿಲ್ಲೆಯಲ್ಲಿ ಐದು, ಕೊಪ್ಪಳ ಜಿಲ್ಲೆಯಲ್ಲಿ ಐದು, ಬಳ್ಳಾರಿ ಜಿಲ್ಲೆಯಲ್ಲಿ ಮೂರು ಮತ್ತು ರಾಯಚೂರು ಜಿಲ್ಲೆಯಲ್ಲಿ ಎರಡು ಕಾಲುವೆಗಳಿವೆ. ಈ ಕಾಲುವೆಗಳನ್ನು ವಿಜಯನಗರದ ಆಳರಸರ ಕಾಲದಲ್ಲೇ ನಿರ್ಮಿಸಲಾಗಿದೆ. ಈ ಕಾಲುವೆಗಳ ಆಧುನೀಕರಣಕ್ಕಾಗಿ ₹432 ಕೋಟಿಯನ್ನು ಎಡಿಬಿ ಮಂಜೂರು ಮಾಡಿತ್ತು. ಆದರೆ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಹೃದಯ ಭಾಗದಲ್ಲಿರುವ ಬಸವಣ್ಣ ಕಾಲುವೆಗೆ ಮಂಜೂರು ಮಾಡಿದ್ದ ಅನುದಾನವನ್ನು ವಾಪಸ್ ಪಡೆದಿದೆ. ಹಾಗಾಗಿ ಈ ಕಾಲುವೆ ಆಧುನೀಕರಣ ಕಾರ್ಯ ಕೈಗೊಳ್ಳಲಾಗಿಲ್ಲ. ಈ ಕಾಲುವೆಯ ಮೂಲಕ ಹೊಸಪೇಟೆ ತಾಲೂಕಿನ ರೈತರ ಹೊಲಗಳಿಗೆ ನೀರು ಹೋಗಲಿದೆ.
ಈ ಕಾಲುವೆ ಸ್ಥಿತಿ ಮುಂದೇನು?:
ಈಗ ಎಡಿಬಿ ಹಣ ವಾಪಸ್ ಹೋಗಿರುವ ಹಿನ್ನೆಲೆ ನೀರಾವರಿ ಇಲಾಖೆಯೇ ₹64 ಕೋಟಿ ಮಂಜೂರು ಮಾಡಿದೆ ಎಂದು ನೀರಾವರಿ ಇಲಾಖೆಯ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ. ಸದ್ಯದಲ್ಲೇ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲು ಇಲಾಖೆ ಮುಂದಾಗಿದೆ. ಈ ಕಾಲುವೆಗೆ ನಗರದಲ್ಲಿ ಜಾಲರಿ ಹಾಕಬೇಕೆಂಬ ಕೂಗಿದೆ. ಈ ಕಾರ್ಯ ಮಾಡಿದರೆ ಕಾಲುವೆ ಉಳಿಯಲಿದೆ. ಜೊತೆಗೆ ತ್ಯಾಜ್ಯ ಕೂಡ ಸೇರುವುದಿಲ್ಲ ಎಂಬ ಚರ್ಚೆಯೂ ನಡೆದಿದೆ. ಈ ಕಾರ್ಯ ಕೈಗೂಡಿದರೆ, ಈ ಕಾಲುವೆ ಚರಂಡಿ ಹಣೆಪಟ್ಟಿಯಿಂದ ಮುಕ್ತಿ ಹೊಂದಲಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ