ರನ್ಯಾ ರಾವ್‌ದು ರಾಜ್ಯದ 2ನೇ ಅತಿದೊಡ್ಡ ಚಿನ್ನ ಸ್ಮಗ್ಲಿಂಗ್‌ ಕೇಸ್‌: 15 ಬಾರಿ ಕಪಾಳಕ್ಕೆ ಬಾರಿಸಿದರು ಎಂದ ನಟಿ!

Published : Mar 16, 2025, 06:55 AM ISTUpdated : Mar 16, 2025, 07:43 AM IST
ರನ್ಯಾ ರಾವ್‌ದು ರಾಜ್ಯದ 2ನೇ ಅತಿದೊಡ್ಡ ಚಿನ್ನ ಸ್ಮಗ್ಲಿಂಗ್‌ ಕೇಸ್‌: 15 ಬಾರಿ ಕಪಾಳಕ್ಕೆ ಬಾರಿಸಿದರು ಎಂದ ನಟಿ!

ಸಾರಾಂಶ

ಮೂವತ್ತೇಳು ವರ್ಷಗಳ ಹಿಂದೆ ದುಬೈನಿಂದ ಕಳ್ಳ ಮಾರ್ಗದಲ್ಲಿ ಬರೋಬ್ಬರಿ ಮೂರು ಕ್ವಿಂಟಲ್‌ ಚಿನ್ನವನ್ನು (2740 ಬಿಸ್ಕತ್‌ಗಳು) ಹಡಗಿನಲ್ಲಿ ಸಾಗಿಸುವಾಗ ಮಂಗಳೂರು ಸಮೀಪ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ದಾಳಿ ನಡೆಸಿ ಜಪ್ತಿ ಮಾಡಿದ್ದು ರಾಜ್ಯದ ಇತಿಹಾಸದಲ್ಲೇ ‘ಅತಿ ದೊಡ್ಡ ಚಿನ್ನದ ಬೇಟೆ’ ಎಂದು ದಾಖಲಾಗಿದೆ. 

ಬೆಂಗಳೂರು (ಮಾ.16): ಮೂವತ್ತೇಳು ವರ್ಷಗಳ ಹಿಂದೆ ದುಬೈನಿಂದ ಕಳ್ಳ ಮಾರ್ಗದಲ್ಲಿ ಬರೋಬ್ಬರಿ ಮೂರು ಕ್ವಿಂಟಲ್‌ ಚಿನ್ನವನ್ನು (2740 ಬಿಸ್ಕತ್‌ಗಳು) ಹಡಗಿನಲ್ಲಿ ಸಾಗಿಸುವಾಗ ಮಂಗಳೂರು ಸಮೀಪ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ದಾಳಿ ನಡೆಸಿ ಜಪ್ತಿ ಮಾಡಿದ್ದು ರಾಜ್ಯದ ಇತಿಹಾಸದಲ್ಲೇ ‘ಅತಿ ದೊಡ್ಡ ಚಿನ್ನದ ಬೇಟೆ’ ಎಂದು ದಾಖಲಾಗಿದೆ. ಈಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುವಾಗ ಡಿಜಿಪಿ ರಾಮಚಂದ್ರರಾವ್‌ ಅವರ ಮಲಮಗಳು ಹಾಗೂ ನಟಿ ರನ್ಯಾ ರಾವ್‌ ಅವರಿಂದ ಜಪ್ತಿಯಾದ 14.02 ಕೆ.ಜಿ. ಚಿನ್ನ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಡಿಆರ್‌ಐನ 2ನೇ ದೊಡ್ಡ ಕಾರ್ಯಾಚರಣೆಯಾಗಿ ಚರಿತ್ರೆ ಬರೆದಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

1988ರ ಏಪ್ರಿಲ್‌ನಲ್ಲಿ ಮಂಗಳೂರು ಬಳಿಯ ಗಂಗೊಳ್ಳಿ ಸಮೀಪದ ಬಂದರಿನಲ್ಲಿ ನಡೆದಿದ್ದ ಡಿಆರ್‌ಐ ಕಾರ್ಯಾಚರಣೆ ಆಗಿನ ಕಾಲಕ್ಕೆ ದೇಶ ವ್ಯಾಪಿ ಗಮನಸೆಳೆದಿತ್ತು. ಈಗಲೂ ಡಿಆರ್‌ಐ ಇತಿಹಾಸದಲ್ಲಿ ಅದು ‘ಗಂಗೊಳ್ಳಿ ಪ್ರಕರಣ’ ಎಂದೇ ಪ್ರಸಿದ್ಧವಾಗಿದೆ. ಆ ಚಿನ್ನ ಕಳ್ಳ ಸಾಗಣೆ ಜಾಲದಲ್ಲಿ ಭೂಗತ ಜಗತ್ತಿನ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂನ ‘ಡಿ ಗ್ಯಾಂಗ್‌’ ಸಕ್ರಿಯವಾಗಿತ್ತು. ವಿಶೇಷವೆಂದರೆ ಅಂದು ಈ ಬೃಹತ್ ಕಳ್ಳ ಸಾಗಣೆ ಜಾಲವನ್ನು ಗಾಂಧಿವಾದಿ ಹಾಗೂ ನಿವೃತ್ತ ನ್ಯಾಯಾಧೀಶ ದಿ.ನಿಟ್ಟೂರು ಶ್ರೀನಿವಾಸ್ ರಾವ್‌ ಅವರ ಅಳಿಯ ಹಾಗೂ ಕನ್ನಡಿಗ ಐಆರ್‌ಎಸ್ ಅಧಿಕಾರಿ ಮನೋಹರ್‌ ಭೇದಿಸಿದ್ದರು ಎಂದು ನಿವೃತ್ತ ಹಿರಿಯ ಡಿಆರ್‌ಐ ಅಧಿಕಾರಿ ನಂಜುಂಡಸ್ವಾಮಿ ನೆನಪಿಸಿಕೊಳ್ಳುತ್ತಾರೆ.

ಗೋಲ್ಡ್ ಸ್ಮಗ್ಲರ್‌ ರನ್ಯಾ ರಾವ್‌ಗೆ ಇ.ಡಿ, ಸಿಬಿಐನಿಂದ ಬಂಧನ ಭೀತಿ

ಗಂಗೊಳ್ಳಿ ಕಾರ್ಯಾಚರಣೆ ಹೇಗಿತ್ತು?: ಹಿಂದಿನಿಂದಲೂ ವಿದೇಶದಿಂದ ಕಳ್ಳ ಮಾರ್ಗದಲ್ಲಿ ದೇಶಕ್ಕೆ ಭಾರೀ ಪ್ರಮಾಣದಲ್ಲಿ ಚಿನ್ನ ತರಲಾಗುತ್ತಿದೆ. ಈ ಕಳ್ಳ ಸಾಗಣೆ ಜಾಲದ ಮೇಲೆ ಡಿಆರ್‌ಐ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಕಣ್ಗಾವಲಿಟ್ಟು ಆಗಾಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಜ್ಯದ ಮಟ್ಟಿಗೆ 1988ರ ಗಂಗೊಳ್ಳಿ ಹಾಗೂ ಈಗಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಟಿ ರನ್ಯಾರಾವ್ ಬಂಧನ ಪ್ರಕರಣಗಳು ಡಿಆರ್‌ಐ ಇತಿಹಾಸದಲ್ಲೇ ಬೃಹತ್‌ ಕಾರ್ಯಾಚರಣೆಗಳಾಗಿವೆ ಎಂದು ನಂಜುಂಡಸ್ವಾಮಿ ಹೇಳಿದ್ದಾರೆ. 1988ರ ಏಪ್ರಿಲ್‌ ತಿಂಗಳಲ್ಲಿ ಮಂಗಳೂರಿನ ಕರಾವಳಿ ಡಿಆರ್‌ಐ ಪಡೆಯ ಕನ್ನಡಿಗ ಐಆರ್‌ಎಸ್ ಅಧಿಕಾರಿ ಮನೋಹರ್‌ ಅವರಿಗೆ ದುಬೈ ಮೂಲಕ ಕೋಟ್ಯಂತರ ರುಪಾಯಿ ಮೌಲ್ಯದ ಕ್ವಿಂಟಲ್‌ಗಟ್ಟಲೇ ಚಿನ್ನ ಕಳ್ಳ ಸಾಗಣೆ ಆಗುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. 

ಈ ಸುಳಿವು ತಿಳಿದ ಕೂಡಲೇ ಜಾಗೃತರಾದ ಅವರು, ತಕ್ಷಣ ಕಡಲಿನಲ್ಲಿ ಪಹರೆ ಹೆಚ್ಚಿಸಿ ಸ್ಮಗ್ಲರ್ಸ್‌ಗಳ ಮೇಲೆ ಕಣ್ಗಾವಲಿಟ್ಟಿದ್ದರು. ಆಗ ಮಂಗಳೂರು ಬಂದರು ಸಮೀಪದ ಗಂಗೊಳ್ಳಿ ಬಳಿಯ ಕಡಲತೀರದಲ್ಲಿ ಗುಡಿಸಲು ಹಾಕಿಕೊಂಡು ಸ್ಮಗ್ಲರ್ಸ್‌ಗಳು ಚಿನ್ನ ಸ್ವೀಕರಿಸಲು ಸಿದ್ದರಾಗಿದ್ದರು. ಮಂಗಳೂರು ಬಂದರಿಗೆ ಹೋಗುವಾಗ ಗಂಗೊಳ್ಳಿ ಬಳಿ ಹಡಗು ಲಂಗರು ಹಾಕಿದ ತಕ್ಷಣವೇ ಲ್ಯಾಂಟರ್ನ್‌ ತೋರಿಸಿ ಸಿಗ್ನಲ್ ಕೊಡುತ್ತಿದ್ದರು. ಈ ಸೂಚನೆ ಪಡೆದು ಹಡಗಿನಿಂದ ಚಿನ್ನ ಇಳಿಸಲಾಗುತ್ತಿತ್ತು. ಆಗ ಗಂಗೊಳ್ಳಿ ಬಳಿ ಮನೋಹರ್‌ ತಂಡ ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ದೆಹಲಿ ಮೂಲದ ಶ್ಯಾಮ್ ಖನ್ನಾ ಹಾಗೂ ಆತನ ಏಳು ಮಂದಿ ಸಹಚರರನ್ನು ಬಂಧಿಸಿತ್ತು. ಈ ವೇಳೆ ಸುಮಾರು 3 ಕ್ವಿಂಟಲ್ ತೂಕದ 2,740 ಚಿನ್ನದ ಬಿಸ್ಕತ್ತುಗಳು ಜಪ್ತಿಯಾದವು.

ವಾರದಲ್ಲೇ 400 ಕೆ.ಜಿ. ಚಿನ್ನ ಪತ್ತೆ: ಗಂಗೊಳ್ಳಿ ಬಳಿಕ ಪಾತಕಿ ದಾವೂದ್ ಸಹಚರರು ಕಾರಿನಲ್ಲಿ ಚಿನ್ನ ಸಾಗಿಸುವಾಗ ಮಂಗಳೂರು ಬಳಿಯೂ ಸಿಕ್ಕಿಬಿದ್ದಿದ್ದರು. ಎರಡು ಕಾರುಗಳಲ್ಲಿ ತಲಾ 800 ಚಿನ್ನದ ಬಿಸ್ಕೆತ್‌ಗಳಂತೆ ಒಟ್ಟು 1,600 ಬಿಸ್ಕೆತ್‌ಗಳು ಅವರಿಂದ ಪತ್ತೆಯಾಗಿದ್ದವು. ಹೀಗೆ ಒಂದು ವಾರದ ಅಂತರದಲ್ಲಿ ಡಿಆರ್‌ಐ ಅಂದು ಸುಮಾರು 400 ಕೆ.ಜಿ.ಯ 4 ಸಾವಿರ ಚಿನ್ನದ ಬಿಸ್ಕತ್‌ಗಳನ್ನು ಚಿನ್ನ ಕಳ್ಳ ಸಾಗಣೆದಾರರಿಂದ ಜಪ್ತಿ ಮಾಡಿತ್ತು. ಗಂಗೊಳ್ಳಿ ಪ್ರಕರಣದ 8 ಮಂದಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯೂ ಆಯಿತು. ಈಗ ವಿಮಾನ ನಿಲ್ದಾಣ ಸ್ಥಾಪನೆಯಾದ ಬಳಿಕ ವಿದೇಶದಿಂದ ವಿಮಾನಗಳಲ್ಲಿ ಚಿನ್ನ ಸಾಗಣೆ ಹೆಚ್ಚಾಗಿದೆ ಎಂದು ನಂಜುಂಡಸ್ವಾಮಿ ಮಾಹಿತಿ ನೀಡಿದ್ದಾರೆ.

15 ಬಾರಿ ಕಪಾಳಕ್ಕೆ ಬಾರಿಸಿದರು: ‘ನನ್ನ ಕಪಾಳಕ್ಕೆ 10-15 ಬಾರಿ ಹೊಡೆದು ಡಿಆರ್‌ಐ ಅಧಿಕಾರಿಗಳು ದಾಖಲೆಗಳಿಗೆ ಸಹಿ ಮಾಡುವಂತೆ ಹಿಂಸಿಸಿದರು. ನಾವು ಹೇಳಿದಂತೆ ಸಹಿ ಮಾಡದೆ ಹೋದರೆ ನಿಮ್ಮ ತಂದೆ (ಡಿಜಿಪಿ ರಾಮಚಂದ್ರರಾವ್‌)ಯನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ಖಾಲಿ ಪತ್ರಗಳಿಗೂ ಸಹಿ ಪಡೆದರು’ ಎಂದು ನಟಿ ರನ್ಯಾರಾವ್ ಗಂಭೀರ ಆರೋಪ ಮಾಡಿದ್ದಾರೆ.

ದುಬೈನಿಂದ ನಾನು ಚಿನ್ನ ಕದ್ದು ತಂದಿಲ್ಲ: ಉಲ್ಟಾ ಹೊಡೆದ ನಟಿ ರನ್ಯಾ ರಾವ್‌

ಚಿನ್ನ ಸ್ಮಗ್ಲಿಂಗ್‌ನಿಂದ ಬಂದ ಹಣ ಡ್ರಗ್ಸ್ ಖರೀದಿಗೆ ಬಳಕೆಚಿನ್ನ ಕಳ್ಳ ಸಾಗಣೆಯಿಂದ ಸಂಪಾದಿಸಿದ ಹಣ ಡ್ರಗ್ಸ್ ಖರೀದಿಗೆ ಬಳಕೆಯಾಗುತ್ತದೆ. ಇದೊಂದು ದೇಶದ ಅರ್ಥ ವ್ಯವಸ್ಥೆಗೆ ಮಾರಕವಾದ ಅಪರಾಧ ಕೃತ್ಯ. ಡ್ರಗ್ಸ್-ಚಿನ್ನ ಸ್ಮಗ್ಲಿಂಗ್‌ಗಳ ನಡುವೆ ಹಣಕಾಸಿನ ನಂಟಿದೆ. 
-ನಂಜುಂಡಸ್ವಾಮಿ, ನಿವೃತ್ತ ಹಿರಿಯ ಅಧಿಕಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!
CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ