ಅನ್ನಭಾಗ್ಯ ಯೋಜನೆಯಡಿ ಮಾರ್ಚ್ ತಿಂಗಳಲ್ಲಿ ಫಲಾನುಭವಿಗಳಿಗೆ ಯುಗಾದಿ ಬಂಪರ್ ಕೊಡುಗೆ ಸಿಗಲಿದೆ. ಬಾಕಿ ಸೇರಿ 15 ಕೆ.ಜಿ. ಅಕ್ಕಿ ಪ್ರತಿ ಫಲಾನುಭವಿಗಳಿಗೆ ಲಭ್ಯವಾಗಲಿದೆ.
ಸಂಪತ್ ತರೀಕೆರೆ
ಬೆಂಗಳೂರು (ಮಾ.16): ಅನ್ನಭಾಗ್ಯ ಯೋಜನೆಯಡಿ ಮಾರ್ಚ್ ತಿಂಗಳಲ್ಲಿ ಫಲಾನುಭವಿಗಳಿಗೆ ಯುಗಾದಿ ಬಂಪರ್ ಕೊಡುಗೆ ಸಿಗಲಿದೆ. ಬಾಕಿ ಸೇರಿ 15 ಕೆ.ಜಿ. ಅಕ್ಕಿ ಪ್ರತಿ ಫಲಾನುಭವಿಗಳಿಗೆ ಲಭ್ಯವಾಗಲಿದೆ. ಫೆಬ್ರವರಿ ತಿಂಗಳಲ್ಲಿ ಬಾಕಿಯಿದ್ದ ಹೆಚ್ಚುವರಿ 5 ಕೆ.ಜಿ.ಯನ್ನು ಸೇರಿಸಿ ಈ ತಿಂಗಳು ಒಟ್ಟು 15 ಕೆ.ಜಿ. ಅಕ್ಕಿ ವಿತರಣೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೀರ್ಮಾನಿಸಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಹೆಚ್ಚುವರಿ 5 ಕೆ.ಜಿ.ಅಕ್ಕಿಗೆ ಪರ್ಯಾಯವಾಗಿ ನೀಡಲಾಗುತ್ತಿದ್ದ ಹಣದ ಬದಲು ಫೆಬ್ರವರಿ ತಿಂಗಳಿನಿಂದಲೇ ಅನ್ವಯವಾಗುವಂತೆ ಅಕ್ಕಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು.
ಆದರೆ, ಸರ್ಕಾರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದು ತಡವಾದ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ಹಂಚಿಕೆಯಾಗಿರಲಿಲ್ಲ. ಹಾಗೆಯೇ ಡಿಬಿಟಿ ಮೂಲಕ ಹಣವೂ ಸಂದಾಯವಾಗಿರಲಿಲ್ಲ. ಹೀಗಾಗಿ ಫೆಬ್ರವರಿ ತಿಂಗಳಲ್ಲಿ ಹಂಚಿಕೆಗೆ ಬಾಕಿಯಿದ್ದ ಹೆಚ್ಚುವರಿ 5 ಕೆ.ಜಿ. ಅಕ್ಕಿ ಮತ್ತು ಮಾರ್ಚ್ ತಿಂಗಳ 10 ಕೆ.ಜಿ. ಅಕ್ಕಿ ಸೇರಿಸಿ ಒಟ್ಟು 15 ಕೆ.ಜಿ. ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳು ಹಂಚಿಕೆ ಮಾಡಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದ್ದಾರೆ. ರಾಜ್ಯದ ಪ್ರತಿ ನ್ಯಾಯಬೆಲೆ ಅಂಗಡಿಗಳು ಈ ತಿಂಗಳ 10 ಕೆ.ಜಿ. ಅಕ್ಕಿಯೊಂದಿಗೆ ಬಾಕಿಯಿರುವ 5 ಕೆ.ಜಿ. ಹೆಚ್ಚುವರಿ ಅಕ್ಕಿ ವಿತರಿಸಲಿವೆ ಎಂದು ‘ಕನ್ನಡಪ್ರಭ’ಕ್ಕೆ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು.
ಮುಂದಿನ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ: ಮಾಜಿ ಸಚಿವ ಬಿ.ಸಿ.ಪಾಟೀಲ್
ಇ-ಕೆವೈಸಿ ಉಚಿತ: ಮಾ.1ರಿಂದ ಮಾ.31ರ ವರಗೆ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರು ಇ-ಕೆವೈಸಿ ಮಾಡುವ ಹಾಗೂ ಪಡಿತರ ವಿತರಣೆ ಕಾರ್ಯ ಜರುಗಲಿದೆ. ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣ ಪಡಿತರ ಪಡೆಯಬಹುದು. ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಯಾವುದೇ ಶುಲ್ಕ ಕೊಡಬೇಕಿಲ್ಲ ಎಂದು ಆಹಾರ ಇಲಾಖೆ ಸೂಚಿಸಿದೆ.
ಹೆಚ್ಚುವರಿ 5 ಕೆ.ಜಿ. ಅಕ್ಕಿ ಲಭ್ಯ: ಫೆಬ್ರವರಿ ತಿಂಗಳ ಹೆಚ್ಚುವರಿ 5 ಕೆ.ಜಿ. ಅಕ್ಕಿಯನ್ನು ಈ ತಿಂಗಳ ಪಡಿತರದಲ್ಲಿ ಕೊಡಲಿರುವ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳಿಗೆ 1ರಿಂದ 3 ಸದಸ್ಯರಿದ್ದರೆ ಪ್ರತಿ ಕಾರ್ಡ್‌ಗೆ 35 ಕೆ.ಜಿ. ಅಕ್ಕಿ ಸಿಗಲಿದೆ. 4 ಮಂದಿ ಸದಸ್ಯರಿರುವ ಕಾರ್ಡ್‌ಗೆ 45 ಕೆ.ಜಿ., 5 ಮಂದಿ ಸದಸ್ಯರಿರುವ ಕಾರ್ಡ್‌ಗೆ 65 ಕೆ.ಜಿ, 10 ಸದಸ್ಯರಿದ್ದರೆ 165 ಕೆ.ಜಿ ಅಕ್ಕಿ ಹಂಚಿಕೆಯಾಗಲಿದೆ. ಏಪ್ರಿಲ್ ತಿಂಗಳಿನಿಂದ ನಾಲ್ಕು ಸದಸ್ಯರಿರುವ ಪ್ರತಿ ಕಾರ್ಡ್‌ಗೆ 40 ಕೆ.ಜಿ ಅಕ್ಕಿ, 5 ಸದಸ್ಯರಿರುವ ಕಾರ್ಡ್‌ಗೆ 60 ಕೆ.ಜಿಯಂತೆ ಅಕ್ಕಿ ಲಭ್ಯವಾಗಲಿದೆ. ಬಿಪಿಎಲ್ ಪಡಿತರ ಚೀಟಿಯ ಪ್ರತಿ ಫಲಾನುಭವಿಗಳಿಗೆ ಈ ತಿಂಗಳು 15 ಕೆ.ಜಿ ಅಕ್ಕಿ ಸಿಕ್ಕಿದರೆ, ಏಪ್ರಿಲ್‌ನಿಂದ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ.ಯಂತೆ ಅಕ್ಕಿ ಹಂಚಿಕೆಯಾಗಲಿದೆ. ರಾಜ್ಯದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳ ಸಂಖ್ಯೆ 1.28 ಕೋಟಿ ಇದ್ದು, 4.21 ಕೋಟಿ ಜನ ಅನ್ನಭಾಗ್ಯ ಯೋಜನೆ ಫಲಾನುಭವಿಗಳಾಗಿದ್ದಾರೆ.
ನಿಮ್ಮದು ನಾಲಿಗೆನೋ ಎಕ್ಕಡನೋ: ಶಾಸಕ ಯತ್ನಾಳ್‌ಗೆ ರೇಣುಕಾಚಾರ್ಯ ಪ್ರಶ್ನೆ
ಜನರು ಅಕ್ಕಿ ಬಿಕರಿ ಮಾಡಿದರೆ ಪಡಿತರ ಚೀಟಿಯೇ ರದ್ದು!: ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂಥವರ ಪಡಿತರ ಚೀಟಿ ರದ್ದುಪಡಿಸಿ ಕ್ರಮಕೈಗೊಳ್ಳಲಾಗುವುದು. ಅನಧಿಕೃತವಾಗಿ ಕಾಳಸಂತೆಯಲ್ಲಿ ಆಹಾರಧಾನ್ಯ ದಾಸ್ತಾನು, ಸಾಗಣೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಪಡಿತರ ವಿತರಣೆ ಕುರಿತು ಯಾವುದೇ ದೂರುಗಳಿದ್ದಲ್ಲಿ ಸಹಾಯವಾಣಿ: 1967ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದೆ.