Latest Videos

ನಟ ದರ್ಶನ್ ಫೋಟೋಗೆ ಚಪ್ಪಲಿ, ಬೂಟಿನಿಂದ ಹೊಡೆದ ಕರವೇ ಕಾರ್ಯಕರ್ತರು

By Sathish Kumar KHFirst Published Jun 16, 2024, 5:38 PM IST
Highlights

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್ ಫೋಟೋಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಚಪ್ಪಲಿ ಹಾಗೂ ಬೂಟಿನಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ (ಜೂ.16): ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಈ ವೇಳೆ ದರ್ಶನ್ ಭಾವಚಿತ್ರವನ್ನು ರಸ್ತೆಯ ಮಧ್ಯದಲ್ಲಿಟ್ಟು, ಭಾವಚಿತ್ರಕ್ಕೆ ಚಪ್ಪಲಿ ಹಾಗೂ ಬೂಟಿನಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ನಟ ದರ್ಶನ್ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ಪೈಕಿ ಹಲವರು ಈತನನ್ನು ಯಾವ ಸೆಲೆಬ್ರಿಟಿ ಎಂದು ಪರಿಗಣಿಸದೇ ಭೀಕರವಾಗಿ ಕೊಲೆ ಆರೋಪದಲ್ಲಿ ಆತನನ್ನು ಗಲ್ಲಿಗೇರಿಸಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ನಿರಂತರವಾಗಿ ವಿವಿಧ ಸಂಘಟನೆಗಳಿಂದ ನಟ ದರ್ಶನ್ ವಿರುದ್ಧ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಇನ್ನು ಬೆಳಗಾವಿಯಲ್ಲಿ ಭಾನುವಾರ ಪ್ರತಿಭಟನೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದರ್ಶನ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನಟ ದರ್ಶನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದ ಕೊಲೆಯಾದ ರೇಣುಕಾಸ್ವಾಮಿ ಬೆಂಬಲಿಗರು

ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾ ಘಟಕದಿಂದ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಖಂಡಿಸಿ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಕೊಲೆ ಆರೋಪಿ ದರ್ಶನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ನಟ ದರ್ಶನ್ ಭಾವಚಿತ್ರಕ್ಕೆ ಚಪ್ಪಲಿ ಮತ್ತು ಬೂಟಿನಿಂದ ಹೊಡೆದು, ಫೋಟೋಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಕೊಲೆ, ಹಲ್ಲೆ ಹಾಗೂ ರಾಜಕೀಯ ಸಂಬಂಧಿ ಬಣ ಬಡಿದಾಟಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

Renukaswamy Murder Case ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರ ಶೋಧ, ಹಲ್ಲೆ ನಡೆಸಿದ ಚಪ್ಪಲಿ ವಶ!

ರಾಜ್ಯದಲ್ಲಿ ಸಣ್ಣಪುಟ್ಟ ವಿಷಯಕ್ಕೂ ಕೊಲೆಗಳಾಗುತ್ತಿವೆ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು.  ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು. ಪ್ರಸ್ತುತ ನಟ ದರ್ಶನ್ ಕೇಸಿನಲ್ಲಿ ಆರೋಪಿ ದರ್ಶನ್‌ಗೆ ಶಿಕ್ಷೆಯಾಗುವ ಮೂಲಕ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಸೂಕ್ತ ನ್ಯಾಯ ಸಿಗದಿದ್ದಲ್ಲಿ ಈ ಕೇಸನ್ನು ಸಿಬಿಐ ತನಿಖೆಗೆ ವಹಿಸಬೇಕು. ಕೊಲೆ ಆರೋಪಿಗಳಾದ ದರ್ಶನ ಮತ್ತು ಪವಿತ್ರಾಗೌಡಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.

click me!