ಕೇಂದ್ರದ ಪ್ರಕಾರ ಕರ್ನಾಟಕದಲ್ಲಿ ಮೂರೇ ಕೆಂಪು ಜಿಲ್ಲೆ!

By Kannadaprabha NewsFirst Published May 2, 2020, 7:17 AM IST
Highlights

ಕರ್ನಾಟಕದಲ್ಲಿ ಮೂರೇ ಕೆಂಪು ಜಿಲ್ಲೆ: ಕೇಂದ್ರ| - ಬೆಂಗಳೂರು, ಬೆಂ.ಗ್ರಾಮಾಂತರ, ಮೈಸೂರು ಮಾತ್ರ| 13 ಜಿಲ್ಲೆಗಳು ಕಿತ್ತಳೆ ಪಟ್ಟಿಯಲ್ಲಿ, 14 ಜಿಲ್ಲೆಗಳು ಹಸಿರು ಪಟ್ಟಿಯಲ್ಲಿ

ನವೆದಹಲಿ(ಮೇ.02): ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಅನ್ನು ಇನ್ನೂ ಎರಡು ವಾರ ವಿಸ್ತರಣೆ ಮಾಡುವ ಮುನ್ನ ಕೇಂದ್ರ ಸರ್ಕಾರ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರ ಪ್ರಕಾರ ದೇಶದಲ್ಲಿ 130 ಕೆಂಪು ವಲಯ (ಜಿಲ್ಲೆ), 284 ಕಿತ್ತಳೆ ವಲಯ ಹಾಗೂ 319 ಹಸಿರು ವಲಯಗಳಿವೆ. ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ, ದ್ವಿಗುಣಗೊಳ್ಳುವ ಪ್ರಮಾಣ, ಪರೀಕ್ಷೆ ನಡೆಯುತ್ತಿರುವ ಪ್ರಮಾಣ ಹಾಗೂ ನಿಗಾ ವರದಿಗಳ ಆಧಾರದ ಮೇಲೆ ಈ ವರ್ಗೀಕರಣ ಮಾಡಲಾಗಿದೆ.

ಕರ್ನಾಟಕದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ಜಿಲ್ಲೆಗಳು ಕೆಂಪು ಪಟ್ಟಿಯಲ್ಲಿವೆ. ಬೆಳಗಾವಿ, ವಿಜಯಪುರ, ಕಲಬುರಗಿ ಸೇರಿದಂತೆ 13 ಜಿಲ್ಲೆಗಳು ಕಿತ್ತಳೆ ವಲಯದಲ್ಲಿವೆ. ದಾವಣಗೆರೆ, ರಾಮನಗರ ಸೇರಿದಂತೆ 14 ಜಿಲ್ಲೆಗಳು ಹಸಿರು ಪಟ್ಟಿಯಲ್ಲಿವೆ.

ಮತ್ತೆ ರಾಜ್ಯದಲ್ಲಿ ಕೊರೋನಾ‘ಸ್ಫೋಟ’, ದಾವಣಗೆರೆಯಲ್ಲಿ ಮೊದಲ ಬಲಿ!

ರಾಜ್ಯಗಳು ಈ ವರ್ಗೀಕರಣದ ಆಧಾರದ ಮೇಲೆ ಆಯಾ ಜಿಲ್ಲೆಗಳಲ್ಲಿ ಕಂಟೈನ್ಮೆಂಟ್‌ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಇನ್ನುಮುಂದೆ ವಾರಕ್ಕೊಮ್ಮೆ ಈ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿದೆ.

ಪಟ್ಟಿಯ ಪ್ರಕಾರ ಮುಂಬೈ, ದೆಹಲಿ, ಬೆಂಗಳೂರು, ಕೊಲ್ಕತ್ತಾ, ಹೈದರಾಬಾದ್‌, ಪುಣೆ ಹಾಗೂ ಅಹಮದಾಬಾದ್‌ ಮೆಟ್ರೋಪಾಲಿಟನ್‌ ನಗರಗಳು ಕೆಂಪು ಪಟ್ಟಿಯಲ್ಲಿವೆ. ಏ.30ರಂದು ಕೇಂದ್ರ ಸಂಪುಟ ಕಾರ್ಯದರ್ಶಿಗಳು ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಕಾರ್ಯದರ್ಶಿಗಳ ಜೊತೆ ನಡೆಸಿದ ಸಭೆಯ ಆಧಾರದ ಮೇಲೆ ಪಟ್ಟಿಸಿದ್ಧಪಡಿಸಲಾಗಿದ್ದು, ರಾಜ್ಯಗಳು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪ್ರೀತಿ ಸೂದನ್‌ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ವರ್ಗೀಕರಣ ಮಾಡಿದ್ದು ಹೇಗೆ?

ಕಳೆದ 21 ದಿನಗಳಿಂದ ಒಂದೂ ಕೊರೋನಾ ಸೋಂಕು ಪತ್ತೆಯಾಗದ ಜಿಲ್ಲೆಗಳನ್ನು ಹಸಿರು ಜಿಲ್ಲೆಗಳೆಂದು ಪರಿಗಣಿಸಲಾಗಿದೆ. ಈ ಹಿಂದೆ 28 ದಿನಗಳ ಕಾಲ ಒಂದೂ ಕೊರೋನಾ ಕೇಸು ಪತ್ತೆಯಾಗದ ಕೆಂಪು ಜಿಲ್ಲೆಯನ್ನು ಹಾಗೂ 14 ದಿನಗಳಿಂದ ಒಂದೂ ಕೇಸು ಪತ್ತೆಯಾಗದ ಕಿತ್ತಳೆ ಜಿಲ್ಲೆಯನ್ನು ಹಸಿರು ಜಿಲ್ಲೆ ಎಂದು ಪರಿಗಣಿಸಲಾಗುತ್ತಿತ್ತು. ಹೊಸ ಪಟ್ಟಿಯಲ್ಲಿ ದೆಹಲಿಯ ಎಲ್ಲಾ 11 ಜಿಲ್ಲೆಗಳೂ ಕೆಂಪು ಪಟ್ಟಿಯಲ್ಲಿವೆ. ಅಸ್ಸಾಂ, ತ್ರಿಪುರ, ಹಿಮಾಚಲ ಪ್ರದೇಶ, ಲಡಾಖ್‌, ಮೇಘಾಲಯ, ಪುದುಚೇರಿಯಂತಹ ರಾಜ್ಯಗಳಲ್ಲಿ ಒಂದೂ ಕೆಂಪು ವಲಯವಿಲ್ಲ.

ಲಾಕ್‌ಡೌನ್‌: ಕ್ಯಾನ್ಸರ್‌ ಪೀಡಿತನಿಗೆ ಔಷಧಿ ತಲುಪಿಸಿ ಮಾನವೀಯತೆ ಮೆರೆದ ಸಿಬ್ಬಂದಿ

ರಾಜ್ಯಗಳಿಗೆ ಸೂಚನೆಗಳು:

- ಸ್ಥಳೀಯ ವರದಿಗಳ ಆಧಾರದ ಮೇಲೆ ರಾಜ್ಯಗಳು ಕೆಂಪು ಅಥವಾ ಕಿತ್ತಳೆ ವಲಯಕ್ಕೆ ಹೊಸ ಜಿಲ್ಲೆಗಳನ್ನು ಸೇರ್ಪಡೆ ಮಾಡಬಹುದು. ಆದರೆ, ಕೆಂಪು ಹಾಗೂ ಕಿತ್ತಳೆ ವಲಯವೆಂದು ಕೇಂದ್ರ ಸರ್ಕಾರ ಸೂಚಿಸಿದ ಜಿಲ್ಲೆಗಳನ್ನು ಹಸಿರು ಜಿಲ್ಲೆಯ ಪಟ್ಟಿಗೆ ಸೇರಿಸುವಂತಿಲ್ಲ.

- ಜಿಲ್ಲೆಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮಹಾನಗರಪಾಲಿಕೆಯಿದ್ದರೆ ಅವುಗಳನ್ನು ಪ್ರತ್ಯೇಕ ವಲಯವೆಂದು ಪರಿಗಣಿಸಿ ಕೆಂಪು ಅಥವಾ ಕಿತ್ತಳೆ ವಲಯದ ಪಟ್ಟಿಗೆ ಸೇರಿಸಬಹುದು.

- ಜಿಲ್ಲೆಗಳಲ್ಲಿ ಕಂಟೈನ್ಮೆಂಟ್‌ ವಲಯದ ಸುತ್ತ ನಿರ್ದಿಷ್ಟಪ್ರದೇಶವನ್ನು ಬಫರ್‌ ಜೋನ್‌ ಎಂದು ಗುರುತಿಸಬೇಕು. ಇಲ್ಲೂ ಜನಸಂಚಾರ, ವಾಹನ ಸಂಚಾರ, ಕೊರೋನಾ ಪರೀಕ್ಷೆ ಇತ್ಯಾದಿಗಳ ಕುರಿತು ಕಟ್ಟಿನಿಟ್ಟಿನ ನಿಗಾ ವಹಿಸಬೇಕು. ಎಲ್ಲಾ ರಾಜ್ಯಗಳೂ ಕೆಂಪು ಹಾಗೂ ಕಿತ್ತಳೆ ಜಿಲ್ಲೆಗಳಲ್ಲಿ ಕಂಟೈನ್ಮೆಂಟ್‌ ಜೋನ್‌ ಹಾಗೂ ಬಫರ್‌ ಜೋನ್‌ ಗುರುತಿಸಿ ಆದೇಶ ಹೊರಡಿಸಬೇಕು.

click me!