ವೃದ್ಧಾಪ್ಯ, ವಿಧವಾ ವೇತನ, ಭೂ ಪರಿಹಾರ ಹಾಗೂ ಪಿಂಚಣಿ ಹೀಗೆ ಸರ್ಕಾರದ ಯೋಜನೆಗಳ ಹಣ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸುವ ನೊಂದವರ ಒಡಲಾಳದ ದನಿಗೆ ಸ್ಪಂದಿಸಿರುವ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ), ಈಗ ಸಕಾರಣವಿಲ್ಲದೆ ಜನರಿಗೆ ತೊಂದರೆ ಕೊಡುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಸರ್ಕಾರಿ ಕಚೇರಿಗಳಿಗೆ ‘ಅನಿರೀಕ್ಷಿತ ಭೇಟಿ’ ಎಂಬ ವಿನೂತನ ಕಾರ್ಯಾಚರಣೆ ಆರಂಭಿಸಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಜೂ.24): ವೃದ್ಧಾಪ್ಯ, ವಿಧವಾ ವೇತನ, ಭೂ ಪರಿಹಾರ ಹಾಗೂ ಪಿಂಚಣಿ ಹೀಗೆ ಸರ್ಕಾರದ ಯೋಜನೆಗಳ ಹಣ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸುವ ನೊಂದವರ ಒಡಲಾಳದ ದನಿಗೆ ಸ್ಪಂದಿಸಿರುವ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ), ಈಗ ಸಕಾರಣವಿಲ್ಲದೆ ಜನರಿಗೆ ತೊಂದರೆ ಕೊಡುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಸರ್ಕಾರಿ ಕಚೇರಿಗಳಿಗೆ ‘ಅನಿರೀಕ್ಷಿತ ಭೇಟಿ’ ಎಂಬ ವಿನೂತನ ಕಾರ್ಯಾಚರಣೆ ಆರಂಭಿಸಿದೆ.
ಈ ಭೇಟಿ ವೇಳೆ ಸ್ಥಳದಲ್ಲೇ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಲಿರುವ ಎಸಿಬಿ, ಜನರಿಂದ ‘ಕಾಣಿಕೆ’ ಬಯಸಿ ಹಣ ಮಂಜೂರಾತಿಗೆ ವಿಳಂಬ ಮಾಡುವ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಸಹ ಮಾಡಲಿದೆ. ಇದುವರೆಗೆ ಅಕ್ರಮ ಆಸ್ತಿ ಸಂಪಾದನೆ ಹಾಗೂ ಲಂಚ ಬೇಡಿಕೆ ವಿಚಾರವಾಗಿ ಭ್ರಷ್ಟಅಧಿಕಾರಿಗಳ ವಿರುದ್ಧ ದಾಳಿ ನಡೆಸುತ್ತಿದ್ದ ಎಸಿಬಿ, ಈಗ ದಿಢೀರ್ ಭೇಟಿ ಮೂಲಕ ಸರ್ಕಾರಿ ಬಾಬುಗಳ ಎದೆಯಲ್ಲಿ ನಡುಕು ಹುಟ್ಟಿಸಿದೆ.
60ನೇ ಜನ್ಮದಿನಕ್ಕೆ ಒಂದು ದಿನ ಮುನ್ನ ಅದಾನಿಯಿಂದ 60 ಸಾವಿರ ಕೋಟಿ ದಾನ!
ಈಗಾಗಲೇ ಈ ಅಭಿಯಾನಕ್ಕೆ ವಿಜಯಪುರ ಜಿಲ್ಲೆ ಅಲಮಟ್ಟಿ ಸಂತ್ರಸ್ತರಿಗೆ ಪರಿಹಾರ ವಿತರಣೆ, ಕೊಪ್ಪಳ ಹಾಗೂ ಹಾವೇರಿ ಸೇರಿದಂತೆ ಕೆಲವೆಡೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಅನಿರೀಕ್ಷಿತ ಭೇಟಿ ಕಾರ್ಯಕ್ರಮವನ್ನು ಮತ್ತಷ್ಟುಪರಿಣಾಮಕಾರಿ ಜಾರಿಗೆ ಎಸಿಬಿ ಮುಖ್ಯಸ್ಥ ಸೀಮಂತ್ ಕುಮಾರ್ ಸಿಂಗ್ ನಿರ್ಧರಿಸಿದ್ದಾರೆ.
ಎಸಿಬಿ ಅನಿರೀಕ್ಷಿತ ಭೇಟಿ ಯಾಕೆ?: ಕೆಲ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರನ್ನು ಅನಗತ್ಯವಾಗಿ ಅಲೆದಾಡಿಸುವ ಬಗ್ಗೆ ದೂರುಗಳು ಬಂದಿವೆ. ವೃಧ್ಯಾಪ್ಯ, ವಿಧವಾ ಹಾಗೂ ಅಂಗವಿಕಲರಿಗೆ ನೀಡುವ ಮಾಸಿಕ ಪಿಂಚಣಿ ಮಂಜೂರಾಗಿದ್ದರೂ ಫಲಾನುಭವಿಗೆ ಚೆಕ್ ವಿತರಿಸಲು ಕೆಲವರು ಸಕಾರಣವಿಲ್ಲದೆ ವಿಳಂಬ ಮಾಡುತ್ತಾರೆ. ಇವುಗಳು ಕೆಲವವನ್ನು ಮಾತ್ರ ಸಾಂಕೇತಿಕವಾಗಿ ಹೇಳಬಹುದು. ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗೆ ತಲುಪಬೇಕು. ಆದರೆ ಕೆಲ ಅಧಿಕಾರಿಗಳ ಉದಾಸೀನತೆ ಪರಿಣಾಮ ಅವುಗಳು ತಲುಪಿದಿರುವ ಬಗ್ಗೆ ಆಕ್ಷೇಪಣೆಗಳಿವೆ ಎಂದು ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದರು.
ಪಿಂಚಣಿ ರೀತಿಯ ಕಾರ್ಯಕ್ರಮಗಳ ಫಲಾನುಭವಿಗಳಿಗೆ ವಿತರಣೆ ಮಾಡಬೇಕಾದ ಹಣವು ದೊಡ್ಡ ಮೊತ್ತವು ಅಲ್ಲ. ಕಡಿಮೆ ಮೊತ್ತದ ಚೆಕ್‌ಗಳು. ಹಣ ಮಂಜೂರಾಗಿ ಚೆಕ್ ಸಿದ್ದವಾಗಿದ್ದರೂ ಸಹ ಫಲಾನುಭವಿಗೆ ಕೈ ಸೇರುವುದಿಲ್ಲ. ಆದರೆ ಅವು ದ್ವಿತೀಯ ದರ್ಜೆ ಸಹಾಯಕ ಅಥವಾ ಪ್ರಥಮ ದರ್ಜೆ ಸಹಾಯಕ ಹೀಗೆ ಸಂಬಂಧಪಟ್ಟ ನೌಕರನ ಕಪಾಟಿನಲ್ಲೇ ಇರುತ್ತದೆ. ಚೆಕ್ ಸಿದ್ದವಾಗಿದ್ದರೂ ಫಲಾನುಭವಿಗೆ ವಿತರಿಸಲು ತಡ ಮಾಡುವುದೇಕೆ? ಎಂಬುದು ತಿಳಿಯುವುದಿಲ್ಲ. ಇದರಲ್ಲಿ ಬೇರೆ ಹಿತಾಸಕ್ತಿ ಇರಬಹುದು ಎನ್ನುತ್ತಾರೆ ಎಡಿಜಿಪಿ.
ಈ ಸಮಸ್ಯೆಗಳ ಬಗ್ಗೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸಿಬಿ ತಂಡ ಭೇಟಿ ನೀಡಿದ ವೇಳೆ ಕಚೇರಿಯಲ್ಲಿ ಸಾರ್ವಜನಿಕರು ಸಮಸ್ಯೆ ಹೊತ್ತು ಬಂದಿದ್ದರೆ ಅವರ ಆಹವಾಲು ಆಲಿಸಿ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಮಸ್ಯೆ ಪರಿಹರಿಸುತ್ತೇವೆ. ಉದಾಹರಣೆಗೆ ವಿಜಯಪುರ ಜಿಲ್ಲೆಯಲ್ಲಿ ಕೆಲವರಿಗೆ ಭೂ ಸ್ವಾಧೀನದ 50 ಸಾವಿರ ರು, 1 ಲಕ್ಷ ರು ಚೆಕ್ ವಿತರಿಸಲು ಅಧಿಕಾರಿಗಳು ತಡ ಮಾಡುತ್ತಿರುವ ಸಂಗತಿ ಎಸಿಬಿ ಅಧಿಕಾರಿಗಳು ಅನಿರೀಕ್ಷಿತ ಭೇಟಿ ವೇಳೆ ಗೊತ್ತಾಯಿತು. ತಕ್ಷಣವೇ ಹಿರಿಯ ಅಧಿಕಾರಿ ಸಸಮ್ಮುಖದಲ್ಲಿ ಸಂತ್ರಸ್ತರಿಗೆ ಭೂ ಪರಿಹಾರ ವಿತರಿಸಲಾಯಿತು ಎಂದು ಎಡಿಜಿಪಿ ತಿಳಿಸಿದರು.
ಇಬ್ಬರು ವಯಸ್ಕರು ಮದುವೆಯಾಗಲು ಕುಟುಂಬ, ಸಮುದಾಯದ ಒಪ್ಪಿಗೆಯ ಅಗತ್ಯವಿಲ್ಲ: ಹೈಕೋರ್ಟ್
ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ಕಾರ್ಯಕ್ರಮ ಮೂಲಕ ಸರ್ಕಾರದ ಯೋಜನೆಗಳು ಸಕಾಲಕ್ಕೆ ಫಲಾನುಭವಿಗಳಿಗೆ ತಲುಪಿಸುವಂತೆ ಮಾಡುವುದಾಗಿದೆ. ಆದರೆ ಅಕ್ರಮ ಆಸ್ತಿ ಸಂಪಾದನೆ ಹಾಗೂ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಧಿಕಾರಿಗಳ ಮೇಲಿನ ದಿಢೀರ್ ದಾಳಿಗಳು ಮುಂದುವರೆಯಲಿವೆ.
-ಸೀಮಂತ್ ಕುಮಾರ್ ಸಿಂಗ್, ಎಸಿಬಿ ಮುಖ್ಯಸ್ಥ