ನಕಲಿ ದಾಖಲೆ ಸೃಷ್ಟಿಸಿದ ಸರ್ಕಾರಿ ಸಿಬ್ಬಂದಿ ಮನೆ ಮೇಲೆ ಎಸಿಬಿ ದಾಳಿ

By Kannadaprabha NewsFirst Published Sep 23, 2020, 8:50 AM IST
Highlights

ಸರ್ಕಾರಿ ಜಾಗ ಬೇರೆಯವರಿಗೆ ವರ್ಗ ಆರೋಪ, ದಾಖಲೆ ವಶ| ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟ| ಭೂ ಮಾಪನ ಇಲಾಖೆಯ ಸಿಬ್ಬಂದಿ ಸೇರಿದಂತೆ ಇಬ್ಬರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಎಸಿಬಿ ದಾಳಿ|  

ಬೆಂಗಳೂರು(ಸೆ.23): ಅಕ್ರಮ ದಾಖಲೆಗಳನ್ನು ಸರ್ಕಾರಿ ಜಾಗ ಸೃಷ್ಟಿಸಿ ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟ ಮಾಡಿದ ಆರೋಪದ ಮೇಲೆ ಭೂ ಮಾಪನ ಇಲಾಖೆಯ ಸಿಬ್ಬಂದಿ ಸೇರಿದಂತೆ ಇಬ್ಬರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕು ಭೂಮಾಪಕರಾಗಿರುವ ಉಮೇಶ್‌ ಅವರ ನಾಗರಭಾವಿ 2ನೇ ಹಂತದಲ್ಲಿನ ವಾಸದ ಮನೆ ಮತ್ತು ಆತ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್‌.ಪುರಂನ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿ ಹಾಗೂ ಬಿಲ್ಡರ್‌ ಕಿಶೋರ್‌ ಕುಮಾರ್‌ ಅವರ ನಗರ್ತರ ಪೇಟೆಯಲ್ಲಿನ ನಿವಾಸ ಮತ್ತು ಅವರಿಗೆ ಸೇರಿದ ಜೆ.ಪಿ.ನಗರದಲ್ಲಿನ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ.

ಘನ ತ್ಯಾಜ್ಯದಿಂದ ಇಂಧನ ಅವ್ಯವಹಾರ: ಎಸಿಬಿ ದಾಳಿ

ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್‌ ಗ್ರಾಮದ ಸರ್ವೇ ನಂ.3 ಸರ್ಕಾರಿ ಜಮೀನು ಆಗಿದೆ. ಈ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಅಕ್ರಮ ದಾಖಲೆಗಳನ್ನು ಸೃಷ್ಟಿ, ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ಜಮೀನನ್ನು ಪೋಡಿ ದುರಸ್ತಿ ಮಾಡಿಕೊಡಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವ ಭೂ ಮಾಪನ ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು ಸುಮಾರು 18 ಎಕರೆ ಸರ್ಕಾರಿ ಜಮೀನನ್ನು ಖಾಸಗಿಯವರ ಹೆಸರಿಗೆ ಪ್ರತ್ಯೇಕ ಪಹಣಿಯನ್ನು ಸೃಷ್ಟಿಸಿ ಮಾರಾಟ ಮಾಡಲು ನೇರವಾಗಿ ಸಹಕರಿಸಿದ್ದಾರೆ. ಈ ಬಗ್ಗೆ ಭೂ ದಾಖಲೆಗಳ ಜಂಟಿ ನಿರ್ದೇಶಕರು ನೀಡಿದ ದೂರಿನ ಮೇರೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
 

click me!