ಎಸಿಬಿ ಕಾರ್ಯಾಚರಣೆ| ಬಿಬಿಎಂಪಿ ಸಹಾಯಕ ಇಂಜಿನಿಯರ್, ಮಧ್ಯವರ್ತಿಗಳು, ಟಿಡಿಆರ್ ಅರ್ಜಿದಾರನ ಮನೆಯಲ್ಲಿ ದಾಖಲೆ ವಶ|ಅಭಿವೃದ್ಧಿ ಹಕ್ಕು ವರ್ಗಾವಣೆ ಅವ್ಯವಹಾರ|
ಬೆಂಗಳೂರು(ಆ.26): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಅವ್ಯವಹಾರ ನಡೆದಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಯಲಿಗೆಳೆದಿದ್ದು, ಪಾಲಿಕೆ ಸಹಾಯಕ ಇಂಜಿನಿಯರ್ ಸೇರಿದಂತೆ ನಾಲ್ವರ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಕೊತ್ತನೂರು- ಆವಲಹಳ್ಳಿ ಮುಖ್ಯರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಬೇಕಾದ ನಿವೇಶನಗಳ ಮತ್ತು ಕಟ್ಟಡಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಕೃಷಿ ಭೂಮಿಯ ದರಗಳನ್ನು ನಿಗದಿ ಮಾಡಿ ಟಿಡಿಆರ್ ವಿಸ್ತೀರ್ಣವನ್ನು ಕಾನೂನು ಬಾಹಿರವಾಗಿ ವಿತರಣೆ ಮಾಡಿ ಸರ್ಕಾರಕ್ಕೆ ಮತ್ತು ಬಿಬಿಎಂಪಿಗೆ ಕೋಟ್ಯಂತರ ರುಪಾಯಿ ನಷ್ಟವನ್ನುಂಟು ಮಾಡಲಾಗಿದೆ ಎಂಬ ಆರೋಪದ ಮೇಲೆ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ಕೈಗೊಂಡರು. ಬಿಬಿಎಂಪಿ ಸಹಾಯಕ ಇಂಜಿನಿಯರ್ ಎಂ.ಎನ್.ದೇವರಾಜು ಅವರ ಎಚ್‌ಎಸ್‌ಆರ್ ಲೇಔಟ್‌ನ ವಾಸದ ಮನೆ, ಮಧ್ಯವರ್ತಿ ಕೆ.ಪಿ.ನಾಗೇಶ್ ಅವರ ಬಿದರಹಳ್ಳಿ ಹೋಬಳಿಯ ಕಣ್ಣೂರು ಗ್ರಾಮದಲ್ಲಿನ ವಾಸದ ಮನೆ, ಮಧ್ಯವರ್ತಿ ಬಿ.ನಾಗರಾಜು ಅವರ ದೊಡ್ಡಗುಬ್ಬಿಯ ಯರಪ್ಪನಹಳ್ಳಿ ಗ್ರಾಮದಲ್ಲಿನ ವಾಸದ ಮನೆ, ಟಿಡಿಆರ್ ಅರ್ಜಿದಾರ ಸುಬ್ಬರಾವ್ ಅವರ ಬಿದರಹಳ್ಳಿಯ ರಾಂಪುರದಲ್ಲಿನ ವಾಸದ ಮನೆಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.
ಟೋಟಲ್ ಸ್ಟೇಷನ್ ಭ್ರಷ್ಟಾಚಾರ: ಎಸಿಬಿಗೆ ದೂರು
ಆರ್‌ಟಿಸಿಯಲ್ಲಿ ಸುಳ್ಳು ಮಾಹಿತಿ:
ಟಿಡಿಆರ್ ಅರ್ಜಿಯನ್ನು ಪ್ರಸ್ತುತ ಸ್ವಾಧೀನಾನುಭವದಲ್ಲಿರುವ ಕಟ್ಟಡಗಳ ಮಾಲಿಕರಿಂದ ಪಡೆಯದೆ, ಆರ್‌ಟಿಸಿಯಲ್ಲಿ ಹೆಸರಿರುವ ಹಿಂದಿನ ಜಮೀನಿನ ಮಾಲಿಕರಿಂದ ಅರ್ಜಿಯನ್ನು ಪಡೆಯಲಾಗಿದೆ. ನಂತರ ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅಳತೆಗಳನ್ನು ಪಡೆದು ರೆವಿನ್ಯೂ ನಕ್ಷೆಯನ್ನು ತಯಾರಿಸಿದ್ದು, ಈ ನಕ್ಷೆಯಲ್ಲಿ ರಾಂಪುರ ಗ್ರಾಮದ ಸರ್ವೆ ನಂ.149ರಲ್ಲಿ ಒಟ್ಟು 6 ಕಟ್ಟಡಗಳು ರಸ್ತೆ ಅಗಲೀಕರಣಕ್ಕೆ ಒಳಪಡುವುದಾಗಿ ಮತ್ತು ಈ ಕಟ್ಟಡಗಳ ಮಾಲಿಕರು ಆರ್‌ಟಿಸಿಯಲ್ಲಿ ಹೆಸರಿಸುವ ಈ ಹಿಂದಿನ ಭೂಮಾಲಿಕ ಆರ್.ಕೆ.ಸುಬ್ಬರಾವ್ ಎಂದು ನಮೂದಿಸಲಾಗಿದೆ. ಆದರೆ, ಸುಮಾರು 25 ವರ್ಷಗಳಿಂದ ಇಲ್ಲಿ ಬೇರೆ ಬೇರೆ ಮಾಲಿಕರು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಖಾತಾವನ್ನು ಪಡೆದಿರುತ್ತಾರೆ ಮತ್ತು ಪ್ರತ್ಯೇಕ ವಿದ್ಯುತ್ ಸಂಪರ್ಕವನ್ನು ಹೊಂದಿರುತ್ತಾರೆ ಎಂದು ಹೇಳಿದ್ದಾರೆ.
ರೆವಿನ್ಯೂ ನಕ್ಷೆಯಲ್ಲಿ ನಮೂದಿಸಿದ 6 ಕಟ್ಟಡಗಳ ಮೌಲ್ಯಮಾಪನವನ್ನು ತಯಾರಿಸಿ ಈ ಮೌಲ್ಯವನ್ನು ಡಿಆರ್‌ಸಿ ವಿಸ್ತೀರ್ಣಕ್ಕೆ ಪರಿವರ್ತಿಸುವಾಗ ಗ್ರಾಮ ಪಂಚಾಯಿತಿ ಖಾತಾ ಹೊಂದಿರುವ ಕಟ್ಟಡಗಳನ್ನು ಕೃಷಿ ಭೂಮಿಯಲ್ಲಿದೆ ಎಂದು ನಮೂದಿಸಲಾಗಿದೆ. ಕೃಷಿ ಭೂಮಿಯ ಮಾರ್ಗಸೂಚಿ ದರಗಳನ್ನು ಕಾನೂನು ಬಾಹಿರವಾಗಿ ಅಳವಡಿಸಿಕೊಂಡು ವಾಸ್ತವವಾಗಿ ನೀಡಬೇಕಾಗಿದ್ದ 6314.44 ಚ.ಮೀ.ಗಳಿಗೆ ಬದಲಾಗಿ ಅಕ್ರಮವಾಗಿ ಬಿಬಿಎಂಪಿ ಅಧಿಕಾರಿಗಳು 15151.19 ಚ.ಮೀ.ಗಳ ಡಿಆರ್‌ಪಿ ನೀಡಿರುವುದು ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕಟ್ಟಡ ಮೌಲ್ಯಮಾಪನ ಮಾಡುವ ಸಮಯದಲ್ಲಿ ಸುಮಾರು 15-20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಹಳೆಯ ಕಟ್ಟಡಗಳನ್ನು 6 ವರ್ಷಗಳ ಕಟ್ಟಡಗಳು ಎಂದು ನಮೂದಿಸಿಕೊಂಡು ಕಟ್ಟಡಗಳ ಮೌಲ್ಯವನ್ನು ಲೆಕ್ಕ ಮಾಡುವ ಮೂಲಕ ಹೆಚ್ಚು ಮೌಲ್ಯವನ್ನು ಅಕ್ರಮವಾಗಿ ನಿಗದಿಪಡಿಸಿರುವುದು ಗೊತ್ತಾಗಿದೆ.
ರಸ್ತೆ ಅಗಲೀಕರಣವಾಗಿಲ್ಲ
ಬಿಬಿಎಂಪಿ ಮತ್ತು ಸರ್ಕಾರ ಹೊರಡಿಸಿರುವ ಅಧಿಸೂಚನೆ, ಸುತ್ತೋಲೆ ಮತ್ತು ಕಚೇರಿ ಆದೇಶದಲ್ಲಿ ಸೂಚಿಸಿರುವಂತೆ ರಸ್ತೆ ಅಗಲೀಕರಣಕ್ಕಾಗಿ ಹಕ್ಕು ಬಿಡುಗಡೆ ಪತ್ರವನ್ನು ಬಿಬಿಂಪಿ ಹೆಸರಿಗೆ ಪಡೆದ ಬಳಿಕ ರಸ್ತೆ ಅಗಲೀಕರಣಕ್ಕೆ ಒಳಪಡುವ ಜಾಗದಲ್ಲಿ ಕಟ್ಟಡಗಳನ್ನು ಧ್ವಂಸ ಮಾಡಲಾಗಿದೆ. ಆ ಜಾಗ ಸ್ವಾಧೀನ ಪಡೆಯದೆ, ಸ್ವತ್ತಿನ ಖಾತಾವನ್ನು ಬಿಬಿಎಂಪಿ ಹೆಸರಿಗೆ ವರ್ಗಾಯಿಸಿಲ್ಲ. ಈ ವಿವರಗಳನ್ನು ಬಿಬಿಎಂಪಿಯ ಆಸ್ತಿ ರಿಜಿಸ್ಟಾರ್‌ನಲ್ಲಿ ನಮೂದಿಸಿಲ್ಲ. ಆದರೂ ಅಕ್ರಮವಾಗಿ 2013ರಲ್ಲಿ ಡಿಆರ್‌ಸಿ ವಿತರಣೆ ಮಾಡಲಾಗಿದೆ.
ಡಿಆರ್‌ಸಿ ಸಂಖ್ಯೆಯನ್ನು ಟಿಡಿಆರ್ ಅರ್ಜಿದಾರರ ಪರವಾಗಿ ಪಡೆದ ಟಿಡಿಆರ್ ಮಧ್ಯವರ್ತಿಗಳು ಕೋಟ್ಯಂತರ ರುಪಾಯಿ ಪಡೆದು ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿದ್ದಾರೆ. ಡಿಆರ್‌ಸಿ ನೀಡಿ 6 ವರ್ಷ ಕಳೆದರೂ ಟಿಡಿಆರ್ ನೀಡಿರುವ ಕಟ್ಟಡಗಳನ್ನು ಧ್ವಂಸ ಮಾಡಿ ಜಾಗದ ಭೌತಿಕ ಸ್ವಾಧೀನವನ್ನು ಪಡೆದು ರಸ್ತೆ ಅಗಲೀಕರಣ ಮಾಡಿಲ್ಲ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.