
ಬೆಂಗಳೂರು (ಮೇ 07): ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೂಲಕ ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ಜನ ಸಾಮಾನ್ಯರಿಗೆ ವಂಚಿಸುತ್ತಿದ್ದ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯ (ED) ಸಮರ ಸಾರಿದೆ. ಜನಪ್ರಿಯ ಆನ್‌ಲೈನ್ ಗೇಮಿಂಗ್ ಆ್ಯಪ್ ಆದ 'ರಮ್ಮಿ ಕಲ್ಚರ್' (Rummy Culture) ಮೂಲಕ ನಡೆದಿದೆ ಎನ್ನಲಾದ ಬೃಹತ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ದೆಹಲಿಯ ಹಲವು ಕಡೆಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಸೋಮವಾರ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿರುವ ಇಡಿ ಅಧಿಕಾರಿಗಳು, ಬೆಂಗಳೂರಿನ 12 ಕಡೆ ಹಾಗೂ ದೆಹಲಿಯ 4 ಕಡೆ ಸೇರಿದಂತೆ ಒಟ್ಟು 16 ಸ್ಥಳಗಳಲ್ಲಿ ಜಾಲಿಯಾಡುತ್ತಿದ್ದಾರೆ. ರಮ್ಮಿ ಕಲ್ಚರ್ ಆ್ಯಪ್‌ನ ವ್ಯವಹಾರಗಳಿಗೆ ಸಂಬಂಧಿಸಿದ ಕಚೇರಿಗಳು ಹಾಗೂ ಈ ಆ್ಯಪ್‌ನ ಪ್ರಮುಖ ನಿರ್ವಾಹಕರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ರಮ್ಮಿ ಕಲ್ಚರ್ ಆ್ಯಪ್ ಮೂಲಕ ಹಣ ಕಳೆದುಕೊಂಡ ಸಂತ್ರಸ್ತರು ದೆಹಲಿಯಲ್ಲಿ ನೀಡಿದ ದೂರುಗಳ ಅನ್ವಯ ಅಲ್ಲಿನ ಪೊಲೀಸರು ನಾಲ್ಕು ಪ್ರತ್ಯೇಕ ಎಫ್‌ಐಆರ್ (FIR) ದಾಖಲಿಸಿದ್ದರು. ಈ ಎಫ್‌ಐಆರ್‌ಗಳಲ್ಲಿನ ಗಂಭೀರ ಆರೋಪಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಪ್ರಕರಣ ದಾಖಲಿಸಿಕೊಂಡು ಈ ಬೃಹತ್ ಕಾರ್ಯಾಚರಣೆ ಕೈಗೊಂಡಿದೆ.
ರಮ್ಮಿ ಕಲ್ಚರ್ ಆ್ಯಪ್ ಮೂಲಕ ಆರಂಭದಲ್ಲಿ ಬಳಕೆದಾರರಿಗೆ ಲಾಭದ ಆಸೆ ತೋರಿಸಲಾಗುತ್ತಿತ್ತು. ಒಮ್ಮೆ ಬಳಕೆದಾರರು ದೊಡ್ಡ ಮೊತ್ತದ ಹಣವನ್ನು ಆಟಕ್ಕೆ ತೊಡಗಿಸಿದ ನಂತರ, ತಾಂತ್ರಿಕ ಕೈಚಳಕದ ಮೂಲಕ ಅಥವಾ ವಂಚನೆಯ ಮಾರ್ಗಗಳನ್ನು ಬಳಸಿ ಹಣವನ್ನು ಗುಳುಂ ಮಾಡಲಾಗುತ್ತಿತ್ತು ಎಂಬ ದೂರುಗಳಿವೆ. ಈ ಹಣವನ್ನು ವಿದೇಶಗಳಿಗೆ ಅಥವಾ ಬೇರೆ ಬೇರೆ ಬೇನಾಮಿ ಖಾತೆಗಳಿಗೆ ವರ್ಗಾಯಿಸಲಾಗಿದೆಯೇ ಎಂಬ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ವಂಚನೆ ಜಾಲದ ಕಚೇರಿಗಳು ಮತ್ತು ಪ್ರಮುಖ ವ್ಯವಹಾರಗಳು ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಸಿಲಿಕಾನ್ ಸಿಟಿಯ 12ಕ್ಕೂ ಹೆಚ್ಚು ಕಡೆಗಳಲ್ಲಿ ಇಡಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಡಿಜಿಟಲ್ ಪುರಾವೆಗಳು, ಬ್ಯಾಂಕ್ ಖಾತೆಗಳ ಮಾಹಿತಿ ಹಾಗೂ ಹೂಡಿಕೆಯ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ