ಉದ್ಯೋಗವನ್ನು ಭ್ರಷ್ಟರಿಗೆ ಮಾರುವ ಅಂಗಡಿ ಕೆಪಿಎಸ್‌ಸಿ: ಎಎಪಿ ಆರೋಪ

By Kannadaprabha NewsFirst Published May 5, 2022, 1:08 AM IST
Highlights

- ಕೆಪಿಎಸ್ಸಿ ವಿರುದ್ಧ ಆಪ್ ಭ್ರಷ್ಟಾಚಾರ ಆರೋಪ

- ಕೆಪಿಎಸ್ಸಿ ವಿರುದ್ಧ ಪ್ರತಿಭಟನಾ ಮೆರವಣಿಗೆ

* ಕಾರ‍್ಯಕರ್ತರನ್ನು ತಡೆದ ಪೊಲೀಸರು

ಬೆಂಗಳೂರು (ಮೇ. 5): ಕರ್ನಾಟಕ ಲೋಕಸೇವಾ ಆಯೋಗದಲ್ಲಿ(ಕೆಪಿಎಸ್‌ಸಿ) ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ(ಎಎಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನದಿಂದ ಕೆಪಿಎಸ್‌ಸಿ (KPSC) ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಎಎಪಿ (AAP) ಕಾರ್ಯಕರ್ತರನ್ನು ತಡೆದ ಪೊಲೀಸರು (Police) ಆರಂಭದಲ್ಲೇ ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.

Latest Videos

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ (Mohan Dasari), ಭ್ರಷ್ಟಾಚಾರದ ತಾಣ ಎಂಬ ಕುಖ್ಯಾತಿಗೆ ಒಳಗಾಗಿರುವ ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission) ಭ್ರಷ್ಟಾಚಾರದ ತಾಣವೆಂದೇ ಕುಖ್ಯಾತಿಗೆ ಒಳಗಾಗಿದೆ. ಅದನ್ನು ಸರಿದಾರಿ ತರಬೇಕಾದ ಸರ್ಕಾರಗಳು ಈವರೆಗೂ ಕಾಯಕಲ್ಪ ಮಾಡಿಲ್ಲ. ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಯುವ ಜನತೆಗೆ ವಿದ್ಯಾರ್ಹತೆಗೆ ತಕ್ಕಂತೆ ಯೋಗ್ಯವಾದ ಕೆಲಸ ಸಿಗುತ್ತಿಲ್ಲ. ಮತ್ತೊಂದೆಡೆ ಸರ್ಕಾರಿ ಉದ್ಯೋಗಗಳನ್ನು ಮಾರಿಕೊಂಡು, ಅರ್ಹರಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ನಾಡಿನ ಯುವಜನತೆಗೆ ಉದ್ಯೊಗ ಕಲ್ಪಿಸುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಕರ್ನಾಟಕ ಲೊಕಸೇವಾ ಆಯೋಗವನ್ನು ಸ್ಥಾಪಿಸಲಾಗಿದೆ. ಆದರೆ ಉದ್ಯೋಗಗಳನ್ನು ಭ್ರಷ್ಟರಾಜಕಾರಣಿಗಳಿಗೆ ಮಾರಾಟ ಮಾಡುವ ಅಂಗಡಿಯಾಗಿ ಪರಿವರ್ತನೆಗೊಂಡಿದೆ. ಅಕ್ರಮಕ್ಕೆ ಹೆಸರುವಾಸಿಯಾಗಿರುವ ಕೆಪಿಎಸ್‌ಸಿಯನ್ನು ಸರಿದಾರಿಗೆ ತರಲು ಸಾಧ್ಯವಾಗದಿದ್ದರೆ ಅದನ್ನು ಮುಚ್ಚಿ ಬಿಡುವುದು ಒಳ್ಳೆಯದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಎಪಿ ಮುಖಂಡರಾದ ಜಗದೀಶ್‌ ಸದಂ, ಚನ್ನಪ್ಪಗೌಡ ನೆಲ್ಲೂರು, ಲಕ್ಷ್ಮೇಕಾಂತ್‌ ರಾವ್‌, ರವಿಚಂದ್ರ ನೆರಬೆಂಚಿ, ಸಮೀರ್‌, ಫರೀದ್‌, ಡಾ.ಸತೀಶ್‌ ಕುಮಾರ್‌, ಶಾಶಾವಲ್ಲಿ, ಗೀತಾ, ಪ್ರಕಾಶ್‌ ನೆಂಡುಗಂಡಿ, ಮರಿಯಾ, ರಾಕಿಬಲ್ಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಕೆಪಿಎಸ್‌ಸಿ ನೇಮಕಾತಿ ಅಕ್ರಮ ಖಂಡಿಸಿ ಗಂಗಾವತಿಯಲ್ಲೂ ಪ್ರತಿಭಟನೆ

ಗಂಗಾವತಿ (ಮೇ.5): ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಭಾರಿ ಭ್ರಷ್ಟಾಚಾರ ಮತ್ತು ಅಕ್ರಮ ಖಂಡಿಸಿ ಬುಧವಾರ ಆಮ್‌ ಆದ್ಮಿ ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಇಲ್ಲಿನ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬನ್ನಿ ಹುಡುಕೋಣ ಕರ್ನಾಟಕದ 7 ಅದ್ಭುತಗಳನ್ನು, ವಿಶೇಷ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ!

ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಹುಸೇನಸಾಬ ಗಂಗನಾಳ ಮಾತನಾಡಿ, ಈ ಹಿಂದೆ 40 ಪರ್ಸೆಂಟ್‌ ಸರ್ಕಾರ ಎಂದು ಕುಖ್ಯಾತಿ ಪಡೆದಿದ್ದ ಬಿಜೆಪಿ ಸರ್ಕಾರ ಈಗ ಮತ್ತೆ ಕೆಪಿಎಸ್‌ಸಿ ನೇಮಕಾತಿ ಹಗರಣದ ಮೂಲಕ ಇದು ತನ್ನ ಭ್ರಷ್ಟಮುಖವನ್ನು ಇನ್ನಷ್ಟುಬಯಲು ಮಾಡಿಕೊಂಡಿದೆ. ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಲೂಟಿಕೋರ ಬಿಜೆಪಿ ಸರ್ಕಾರವಾಗಿದ್ದು, ಲೂಟಿ ಮಾಡುವ ಸಲುವಾಗಿ ಅಧಿಕಾರಕ್ಕೆ ಬಂದಿದೆ ಎಂದು ಕಿಡಿಕಾರಿದರು. ಅಕ್ರಮದಿಂದಾಗಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹಣವುಳ್ಳವರು ಹಣವನ್ನು ನೀಡಿ ಅಧಿಕಾರಕ್ಕೆ ಬಂದಲ್ಲಿ ಲೂಟಿಯೊಂದೇ ಅವರ ಕಾಯಕವಾಗಲಿದೆ. ಭ್ರಷ್ಟರು ಅಧಿಕಾರಕ್ಕೆ ಬರುವುದನ್ನು ತಡೆಯುವ ಅವಶ್ಯಕತೆ ಇದೆ. ಈ ಅಕ್ರಮದಲ್ಲಿ ಭಾಗವಹಿಸಿರುವ ಎಲ್ಲ ಆರೋಪಿಗಳ ಬಂಧನವಾಗಬೇಕು ಮತ್ತು ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಪಿಎಸ್‌ಐ ನೇಮಕಾತಿ ಹಗರಣ: ಮಾಜಿ ಸಿಎಂ ಪುತ್ರನ ವಿರುದ್ಧ ದೂರು

ಗಂಗಾವತಿ ತಾಲೂಕು ಅಧ್ಯಕ್ಷ ಶರಣಪ್ಪ ಸಜ್ಜಿಹೊಲ ವಕೀಲರು ಮಾತನಾಡಿ, ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಆಮ್‌ ಆದ್ಮಿ ಪಕ್ಷ ಬಿಡುವುದಿಲ್ಲ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಅಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಗಂಗಾವತಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಬಸವರಾಜ ಮ್ಯಾಗಳಮನಿ, ಸಂಘಟನಾ ಕಾರ್ಯದರ್ಶಿಗಳಾದ ಚನ್ನಬಸವ ಮಾತನಾಡಿದರು. ಪಕ್ಷದ ನಗರ ಘಟಕ ಅಧ್ಯಕ್ಷ ಪರಶುರಾಮ್‌ ಒಡೆಯರ, ಮಹಿಳಾ ಘಟಕದ ತಾಲೂಕು ಅಧ್ಯಕ್ಷ ರೇಣುಕಾ ಬಸವರಾಜ, ರಾಘವೇಂದ್ರ ಸಿದ್ಧಿ ಕೇರಿ, ವೆಂಕಟೇಶ್‌ ಚಂದ್ರಶೇಖರ್‌ ಒಗ್ಗ, ಚಂದ್ರಶೇರ್ಖ ನಿಸರ್ಗ, ಅಮರೇಶ, ಖಾಜಾಹುಸೇನ, ಗಣೇಶ, ಮಂಜುನಾಥ್‌ ಕೊರಮ್ಮ ಕ್ಯಾಂಪ್‌, ವೆಂಕಟೇಶ್‌ ಕೊರಮ್ಮ ಕ್ಯಾಂಪ್‌ ಇತರರು ಭಾಗವಹಿಸಿದ್ದರು.

--

click me!