Karnataka Government Survey: ಸರ್ಕಾರದ ಸಮೀಕ್ಷೆಗೆ ಆಧಾರ್‌ ಕಡ್ಡಾಯ : ಹಿಂದುಳಿದ ವರ್ಗಗಳ ಆಯೋಗ

Kannadaprabha News   | Kannada Prabha
Published : Sep 22, 2025, 05:57 AM IST
Baal Aadhar Card Update

ಸಾರಾಂಶ

ನಾಗರಿಕರು ಒಂದಕ್ಕಿಂತ ಹೆಚ್ಚು ಬಾರಿ ಸಮೀಕ್ಷೆಗೆ ಒಳಪಡುವುದನ್ನು ತಪ್ಪಿಸಲು ಆಧಾರ್ ಸಂಖ್ಯೆ ಒದಗಿಸುವುದು ಕಡ್ಡಾಯ. 6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಆಧಾರ್ ಸಿದ್ಧವಿಟ್ಟುಕೊಳ್ಳಿ.

ಬೆಂಗಳೂರು : ‘ಬೆಂಗಳೂರು ನಗರ ಹೊರತುಪಡಿಸಿ ರಾಜ್ಯಾದ್ಯಂತ ಸೆ.22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡುತ್ತಿದ್ದು, ಶಿಕ್ಷಕರು ಹಾಗೂ ಇತರೆ 2 ಲಕ್ಷ ಸಿಬ್ಬಂದಿ ಗಣತಿ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ವಿಶ್ವಾಸವಿದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್‌ ನಾಯಕ್‌ ಹೇಳಿದ್ದಾರೆ.

ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾಗರಿಕರು ಒಂದಕ್ಕಿಂತ ಹೆಚ್ಚು ಬಾರಿ ಸಮೀಕ್ಷೆಗೆ ಒಳಪಡುವುದನ್ನು ತಪ್ಪಿಸಲು ಆಧಾರ್ ಸಂಖ್ಯೆ ಒದಗಿಸುವುದು ಕಡ್ಡಾಯ. 6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಆಧಾರ್ ಸಿದ್ಧವಿಟ್ಟುಕೊಳ್ಳಿ. ಪ್ರತಿಯೊಬ್ಬ ಗಣತಿದಾರರು ದಿನಕ್ಕೆ 7-8 ಮನೆ ಸಮೀಕ್ಷೆ ನಡೆಸಿದರೂ 2 ಕೋಟಿ ಕುಟುಂಬದ ಮಾಹಿತಿ 16 ದಿನಗಳಲ್ಲಿ ಸಂಗ್ರಹ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಯೋಗ ಈಗಾಗಲೇ ಎರಡು ಕೋಟಿ ಮನೆಗಳ ಪಟ್ಟಿ ತಯಾರಿಸುವ, ಜಿಯೋ-ಟ್ಯಾಗಿಂಗ್ ಹಾಗೂ ಗಣತಿ ಬ್ಲಾಕಿನ ನಕ್ಷೆ ಮಾಡುವ ಕಾರ್ಯ ಮಾಡಿ ಮುಗಿಸಿದ್ದೇವೆ. ಬ್ಲಾಕ್ ನಕ್ಷೆಗಳಲ್ಲಿ ಮನೆಗಳನ್ನು ಗುರುತಿಸುವುದಲ್ಲದೆ ರಸ್ತೆಗಳನ್ನು ನಕ್ಷೆಗಳಲ್ಲಿ ನಮೂದಿಸಿದ್ದು, ಗಣತಿದಾರರು ಸಮೀಕ್ಷೆ ಮಾಡಬೇಕಾದ ಮನೆ ತಲುಪಲು ಅನುಕೂಲವಾಗುವಂತೆ ಮಾಡಿದ್ದೇವೆ ಎಂದು ವಿವರಣೆ ನೀಡಿದರು.

148 ಜಾತಿಗಳ ಸೇರ್ಪಡೆ:

ಹೊಸ ಜಾತಿಗಳ ಸೇರ್ಪಡೆ ಕುರಿತು ಮಾತನಾಡಿದ ಮಧುಸೂದನ್‌ ನಾಯಕ್‌, ನಾನು ಆಯೋಗದ ಅಧ್ಯಕ್ಷನಾಗಿ ಬಂದ ಮೇಲೆ ಒಂದೇ ಒಂದು ಜಾತಿ ಸೇರಿಸಿಲ್ಲ. ಈ ಮೊದಲು 1,413 ಜಾತಿಗಳಿದ್ದವು. ನೂರಾರು ಸಮುದಾಯಗಳು ತಮ್ಮ ಜಾತಿ ಬಿಟ್ಟುಹೋಗಿದೆ ಎಂದು ಮನವಿಗಳನ್ನು ಸಲ್ಲಿಸಿದ್ದವು. ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸೇರ್ಪಡೆ ಮಾಡಲಾಗಿದೆ. ಇದರೊಂದಿಗೆ ಪ್ರಸ್ತುತ ಸಮೀಕ್ಷೆಯ ಪ್ರಶ್ನಾವಳಿ ಕಾಲಂನಲ್ಲಿ 1,561 ಜಾತಿಗಳನ್ನು ಅಳವಡಿಸಿಕೊಂಡು ಸಮೀಕ್ಷೆ ಮಾಡಲಾಗುತ್ತಿತ್ತು. ಈಗ ಗೊಂದಲದ ಹಿನ್ನೆಲೆ 33 ಜಾತಿ ಕೈಬಿಡಲಾಗಿದೆ ಎಂದು ಹೇಳಿದರು.

ಎಲ್ಲರನ್ನೂ ತಲುಪಲು 4 ರೀತಿ ಸಿದ್ಧತೆ:

ರಾಜ್ಯದ ಯಾರೊಬ್ಬರೂ ಸಮೀಕ್ಷೆಯಿಂದ ತಪ್ಪಿಹೋಗದಿರಲು ಆಯೋಗ ಒಟ್ಟು ನಾಲ್ಕು ಪ್ರಕಾರದ ಸಮೀಕ್ಷೆಗಳನ್ನು ನಡೆಸುತ್ತಿದೆ. ಇದಕ್ಕಾಗಿ ಭೌತಿಕ ಮತ್ತು ತಾಂತ್ರಿಕ ಎರಡೂ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಮೊದಲಿಗೆ ಮನೆ-ಮನೆಗೆ ಗಣತಿದಾರರು ಭೇಟಿ ನೀಡುತ್ತಾರೆ. ಅಲ್ಲಿ ತಪ್ಪಿಹೋದರೆ, ಅಂಥ ಮನೆಗಳಿಗೆ ಹಲವು ಬಾರಿ ಭೇಟಿ ನೀಡಿ ಅಂತಿಮವಾಗಿ ‘ತಮ್ಮ ಮನೆಗೆ ಹಲವು ಬಾರಿ ಭೇಟಿ ನೀಡಲಾಗಿದೆ. ತಾವು ಮನೆಗೆ ಹಿಂತಿರುಗಿದ ಬಳಿಕ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ’ ಎಂದು ಸ್ಟಿಕ್ಕರ್‌ ಅಂಟಿಸಲಾಗುತ್ತದೆ.

ಅಲ್ಲದೆ ಆನ್ಲೈನ್‌ನಲ್ಲೂ ಮಾಹಿತಿ ಒದಗಿಸಿ ಪಾಲ್ಗೊಳ್ಳಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರು ವ್ಯಾಪ್ತಿಯಲ್ಲಿ ಕರೆ ಮಾಡಿ ಸ್ಲಾಟ್‌ಗಳನ್ನು ಬುಕಿಂಗ್ ಮಾಡಿಕೊಳ್ಳಲೂ ಅವಕಾಶ ಕಲ್ಪಿಸಲಾಗಿದೆ. ಅಂದರೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೆ, ಅಲ್ಲಿಂದ ಸಮೀಕ್ಷೆದಾರರು ತಾವು ಹೇಳಿದ ದಿನಾಂಕದಂದು ಮನೆಗೆ ಬಂದು ಸಮೀಕ್ಷೆ ಮಾಡಿಕೊಂಡು ಹೋಗಲಿದ್ದಾರೆ.

ಹಿಂದುಳಿದ ವರ್ಗದ ಇಲಾಖೆ ಆಯುಕ್ತರೂ ಹಾಗೂ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ದಯಾನಂದ ಅಪ್ಪಾಜಿ ಹಾಜರಿದ್ದರು.

ನಮೂನೆಯಿಂದ ಡಿಲೀಟ್‌ ಮಾಡಲಾಗಿರುವ ಜಾತಿಗಳು:

ವೈಶ್ಯ ಬ್ರಾಹ್ಮಣ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ರೆಡ್ಡಿ ಕ್ರಿಶ್ಚಿಯನ್‌, ಬ್ರಾಹ್ಮಣ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌, ಬಿಲ್ಲವ ಕ್ರಿಶ್ಚಿಯನ್‌, ಅಕ್ಕಸಾಲಿಗ ಕ್ರಿಶ್ಚಿಯನ್, ಬಣಜಿಗ ಕ್ರಿಶ್ಚಿಯನ್, ಬಾರಿಕಾರ್ ಕ್ರಿಶ್ಚಿಯನ್, ಬೆಸ್ತರು ಕ್ರಿಶ್ಚಿಯನ್, ಚರೋಡಿ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಗೊಲ್ಲ ಕ್ರಿಶ್ಚಿಯನ್, ಗೊಂಡ ಲಾಲಗೊಂಡ ಕ್ರಿಶ್ಚಿಯನ್, ಗೌಡಿ ಕ್ರಿಶ್ಚಿಯನ್, ಚಲಗಾರ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್, ಕಮ್ಮ ಕ್ರಿಶ್ಚಿಯನ್, ಕಮ್ಮ ನಾಯ್ಡು ಕ್ರಿಶ್ಚಿಯನ್, ಕಂಸಾಳೆ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಮಾಂಗ ಕ್ರಿಶ್ಚಿಯನ್, ಮೊದಲಿಯಾರ್ ಕ್ರಿಶ್ಚಿಯನ್, ನಾಡಾರ್ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್, ಪಡಯಾಚಿ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ಶೆಟ್ಟಿ ಬಲಿಜ ಕ್ರಿಶ್ಚಿಯನ್, ಸುದ್ರಿ ಕ್ರಿಶ್ಚಿಯನ್, ತಿಗಳ ಕ್ರಿಶ್ಚಿಯನ್, ತುಳು ಕ್ರಿಶ್ಚಿಯನ್, ವೈಶ್ಯ/ಶೆಟ್ರು ಕ್ರಿಶ್ಚಿಯನ್.

ಬೆಂಗಳೂರಲ್ಲಿ ಜಾತಿಗಣತಿ ಎರಡ್ಮೂರು ದಿನ ವಿಳಂಬ

ರಾಜ್ಯಾದ್ಯಂತ ಸೋಮವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗುತ್ತಿದ್ದರೂ ರಾಜಧಾನಿ ಬೆಂಗಳೂರಿನಲ್ಲಿ ಸಿಬ್ಬಂದಿ ಕೊರತೆ, ಸಿದ್ಧತೆ ವಿಳಂಬದ ಹಿನ್ನೆಲೆಯಲ್ಲಿ ಸಮೀಕ್ಷೆ ತುಸು ತಡವಾಗಲಿದೆ.ರಾಜ್ಯ ಸರ್ಕಾರದಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಹಾಗೂ ಐದು ಪಾಲಿಕೆಗಳ ರಚನೆಯ ಆಡಳಿತಾತ್ಮಕ ಪ್ರಕ್ರಿಯೆಗಳಿಂದ ಬೆಂಗಳೂರು ನಗರದಲ್ಲಿ ಸಮೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. 

 ಇನ್ನೂ 2-3 ದಿನ ವಿಳಂಬವಾಗುವ ಸಾಧ್ಯತೆಯಿದೆ.ಸೆ.17 ರಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ.ಮಹೇಶ್ವರರಾವ್‌ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದಿದ್ದು, ಸಮೀಕ್ಷೆಗೆ ಅಗತ್ಯವಿರುವ ಬಿ ಮತ್ತು ಸಿ ವೃಂದದ 22,672 ಮಂದಿ ಸಿಬ್ಬಂದಿಯನ್ನು ವಿವಿಧ ಇಲಾಖೆಗಳಿಂದ ನಿಯೋಜಿಸಿಕೊಳ್ಳಲು ಅನುಮತಿ ಕೋರಿದ್ದಾರೆ. 

ಶಿಕ್ಷಣ ಇಲಾಖೆಯಿಂದ 5,132, ಬಿಬಿಎಂಪಿಯಿಂದ (ಹಿಂದಿನ) 1,684, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ 1,566, ಬೆಂಗಳೂರು ಜಲಮಂಡಳಿಯಿಂದ 936, ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 860, ಕೆಪಿಟಿಸಿಎಲ್‌ನಿಂದ 810, ತಾಂತ್ರಿಕ ಶಿಕ್ಷಣ ಇಆಖೆಯಿಂದ 806 ಹೀಗೆ 152 ಇಲಾಖೆ ಹಾಗೂ ಸಂಸ್ಥೆಗಳಿಂದ 22,672 ಮಂದಿ ಸಿಬ್ಬಂದಿ ಒದಗಿಸಲು ಕೋರಿದ್ದಾರೆ.ಈ ಸಂಬಂಧ ಸೆ.18 ರಂದು ಶಾಲಿನಿ ರಜನೀಶ್‌ ಅವರು ತುರ್ತು ಆದೇಶ ಹೊರಡಿಸುವಂತೆ ಎಲ್ಲಾ ಇಲಾಖೆಗಳ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು. 

ನಿಯೋಜನೆಗೊಂಡಿರುವ ಸಿಬ್ಬಂದಿಗೆ ತಡವಾಗಿ ಸಮೀಕ್ಷೆ ತರಬೇತಿ ಆರಂಭವಾಗಿದೆ. ಹೀಗಾಗಿ ತರಬೇತಿ ಹಾಗೂ ಅಗತ್ಯ ಸಿದ್ಧತೆ ಪೂರ್ಣಗೊಂಡ ಬಳಿಕ ಬೆಂಗಳೂರು ನಗರದಲ್ಲಿ ಸಮೀಕ್ಷೆಗೆ ಚಾಲನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.ಸಮೀಕ್ಷೆ ದಿನಾಂಕವೂ ವಿಸ್ತರಣೆ:ಸಮೀಕ್ಷೆಯು ಸೆ.22 ರಂದು ಶುರುವಾಗಿ ಅ.2 ರವರೆಗೆ ನಡೆಯಬೇಕಾಗಿತ್ತು. ಬೆಂಗಳೂರಿನಲ್ಲಿ ತಡವಾಗಿ ಶುರುವಾಗುತ್ತಿರುವುದರಿಂದ ಅಂತಿಮ ದಿನಾಂಕವೂ ವಿಸ್ತರಣೆಯಾಗಲಿದೆ. ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಸಮೀಕ್ಷೆ ನಡೆಯಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷ 2026ಕ್ಕೆ ಕೆಲವೇ ದಿನ, 2025ರಲ್ಲಿ ದೇಶಮಟ್ಟದಲ್ಲಿ ಸುದ್ದಿಯಾದ ಬೆಂಗಳೂರಿನ ಅಪರಾಧ ಲೋಕದ ಕರಾಳ ಅಧ್ಯಾಯಗಳಿವು!
ರಾಜ್ಯದಲ್ಲಿ ವಿಪರೀತ ಚಳಿ ಹಲವು ದಿನ ಮುಂದುವರಿಕೆ, ಬೀದರ್‌ನಲ್ಲಿ ದಾಖಲೆಯ ತಾಪಮಾನ ಕುಸಿತ! 17 ಜಿಲ್ಲೆಗಳಿಗೆ ಎಚ್ಚರಿಕೆ