
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ಮಾ.5): ಸಿಇಟಿಯಲ್ಲಿ ಸರ್ಕಾರಿ ಮೆಡಿಕಲ್ ಸೀಟು ಸಿಕ್ಕರೆ ಸಾಕಪ್ಪ ಎಂದು ಬಹುತೇಕ ವಿದ್ಯಾರ್ಥಿಗಳು ಕನವರಿಸುವಾಗ, ಇದಕ್ಕೆ ಅಪವಾದವೆಂಬಂತೆ ವೈದ್ಯಕೀಯ ಸೀಟು ತಿರಸ್ಕರಿಸಿ ತನಗಿಷ್ಟವಾದ ಕೃಷಿ ಕೋರ್ಸ್ ಆಯ್ಕೆ ಮಾಡಿಕೊಂಡ ಎಸ್.ಸ್ನೇಹಶ್ರೀ ಅವರು ಈಗ ಅವರು ಬರೋಬ್ಬರಿ 13 ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಸೋಮವಾರ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 58ನೇ ಘಟಿಕೋತ್ಸವಕ್ಕೆ ಆಗಮಿಸಿದ್ದ ಬಹುತೇಕರು ಸ್ನೇಹಶ್ರೀ ಅವರನ್ನು ಬೆರಗುಗಣ್ಣಿನಿಂದ ನೋಡಿದ್ದು ಸುಳ್ಳಲ್ಲ. ಸ್ನೇಹಶ್ರೀ ಅವರು ಬಿಎಸ್ಸಿ (ಆನರ್ಸ್) ಕೃಷಿಯಲ್ಲಿ 10 ಚಿನ್ನದ ಪದಕ ಮತ್ತು ದಾನಿಗಳ 3 ಚಿನ್ನದ ಪದಕದ ಪ್ರಮಾಣ ಪತ್ರ ಪಡೆದುಕೊಂಡರು.
ಬೆಂಗಳೂರು: ನಾಳೆ ಕೃಷಿ ವಿವಿ ಘಟಿಕೋತ್ಸವ:156 ಚಿನ್ನದ ಪ್ರದಕಗಳ ಪ್ರದಾನ
ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಿಳ್ಳೇನಹಳ್ಳಿಯವರಾದ ಸ್ನೇಹಶ್ರೀ, ಚಿಕ್ಕಮಗಳೂರಿನ ಸಾಯಿ ಏಂಜಲ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪಿಸಿಎಂಬಿ ಅಭ್ಯಾಸ ನಡೆಸಿ ಶೇ.97ರಷ್ಟು ಅಂಕ ಗಳಿಸಿದ್ದರು. 2019ರಲ್ಲಿ ನಡೆದ ಸಿಇಟಿಯಲ್ಲಿ ಸರ್ಕಾರಿ ಕೋಟಾದಡಿ ದಾವಣಗೆರೆಯ ಕಾಲೇಜೊಂದರಲ್ಲಿ ಮೆಡಿಕಲ್ ಸೀಟು ಸಿಕ್ಕಿದರೂ ಬಿಎಸ್ಸಿ (ಆನರ್ಸ್) ಕೃಷಿ ಪದವಿಗೆ ಹೆಬ್ಬಾಳದ ಜಿಕೆವಿಕೆ ಸೇರ್ಪಡೆಯಾದರು. ಸತತ ಪರಿಶ್ರಮದಿಂದಾಗಿ ಶೇ.93.82ರಷ್ಟು ಫಲಿತಾಂಶ ಪಡೆಯುವುದರ ಜೊತೆಗೆ ಘಟಿಕೋತ್ಸವದಲ್ಲೇ ಅತಿ ಹೆಚ್ಚು ಚಿನ್ನದ ಪದಕ ಪಡೆದವರು ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ನೇಹಶ್ರೀ ತಂದೆ ಆರ್.ಸತೀಶ್, ‘ಚಿಕ್ಕಮಗಳೂರಿನ ಅಂಬಳೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಶಿಕ್ಷಕನಾಗಿದ್ದೇನೆ. ಮಗಳ ಈ ಸಾಧನೆ ಖುಷಿ ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತಾಯಿ ಎನ್.ಎನ್.ಅರುಣಕುಮಾರಿ ಮಾತನಾಡಿ, ಸಖರಾಯಪಟ್ಟಣದ ಗುಬ್ಬಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಾನು ಕನ್ನಡ ಶಿಕ್ಷಕಿಯಾಗಿದ್ದೇನೆ. ನಮ್ಮ ಪ್ರೋತ್ಸಾಹಕ್ಕಿಂತ ಅವಳ ಕಠಿಣ ಪರಿಶ್ರಮವೇ ಸಾಧನೆಗೆ ಕಾರಣವಾಗಿದೆ ಎಂದು ತಿಳಿಸಿದರು.
ರಾಯಚೂರು ಕೃಷಿ ವಿವಿ ಘಟಿಕೋತ್ಸವದಲ್ಲಿ ಕಂಡಕ್ಟರ್ ಮಗಳು 5, ಕುರಿಗಾಯಿ ಮಗನಿಗೆ 3 ಚಿನ್ನದ ಪದಕ!
ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ಅಭ್ಯಾಸಿಸಿದ್ದು ಸಹ ಸಾಧನೆಗೆ ಕಾರಣವಾಗಿದೆ. ಇಷ್ಟೊಂದು ಪದಕಗಳಿಗೆ ಭಾಜನಳಾಗುತ್ತೇನೆ ಎಂದುಕೊಂಡಿರಲಿಲ್ಲ. ಐಎಎಸ್ ಅಧಿಕಾರಿಯಾಗಿ ಕೃಷಿಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂಬ ಮಹತ್ವಾಕಾಂಕ್ಷೆ ಇದೆ.
-ಎಸ್.ಸ್ನೇಹಶ್ರೀ, ವಿದ್ಯಾರ್ಥಿನಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ