ನಾಡಿದ್ದಿನ ಒಳಗೆ ನೋಂದಣೆ ಆಗದ ನೀರಿನ ಟ್ಯಾಂಕರ್‌ಗಳು ವಶಕ್ಕೆ: ಡಿಕೆ ಶಿವಕುಮಾರ್ ವಾರ್ನಿಂಗ್

By Kannadaprabha NewsFirst Published Mar 5, 2024, 5:31 AM IST
Highlights

ನಗರದಲ್ಲಿರುವ ಟ್ಯಾಂಕರ್‌ ಮಾಲೀಕರು ಮಾ.7ರ ಒಳಗಾಗಿ ನೋಂದಣಿ ಮಾಡಿಕೊಳ್ಳದಿದ್ದರೆ ಸೀಜ್‌ (ವಶಕ್ಕೆ) ಮಾಡಲಾಗುವುದು. ಜತೆಗೆ, ಸಮಸ್ಯೆ ಪರಿಹಾರಗೊಳ್ಳುವವರೆಗೆ ನಿರುಪಯುಕ್ತ ಹಾಲಿನ ಟ್ಯಾಂಕರ್‌ಗಳನ್ನು ನೀರು ಪೂರೈಕೆಗೆ ಬಳಸುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

 ಬೆಂಗಳೂರು (ಮಾ.5): ನಗರದಲ್ಲಿರುವ ಟ್ಯಾಂಕರ್‌ ಮಾಲೀಕರು ಮಾ.7ರ ಒಳಗಾಗಿ ನೋಂದಣಿ ಮಾಡಿಕೊಳ್ಳದಿದ್ದರೆ ಸೀಜ್‌ (ವಶಕ್ಕೆ) ಮಾಡಲಾಗುವುದು. ಜತೆಗೆ, ಸಮಸ್ಯೆ ಪರಿಹಾರಗೊಳ್ಳುವವರೆಗೆ ನಿರುಪಯುಕ್ತ ಹಾಲಿನ ಟ್ಯಾಂಕರ್‌ಗಳನ್ನು ನೀರು ಪೂರೈಕೆಗೆ ಬಳಸುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನಗರದಲ್ಲಿ 3500ಕ್ಕೂ ಅಧಿಕ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳಿದ್ದು, ಮಾ.1ರಿಂದ ಮಾ.7ರವರೆಗೆ ನೋಂದಣಿಗೆ ಸೂಚಿಸಲಾಗಿದೆ. ಈಗಾಗಲೇ ನಾಲ್ಕು ದಿನ ಕಳೆದಿದ್ದು, 219 ಟ್ಯಾಂಕರ್‌ ಮಾಲೀಕರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಮೂರು ದಿನ ಕಾಲಾವಕಾಶವಿದ್ದು, ಅಷ್ಟೊಳಗೆ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದರೆ, ಟ್ಯಾಂಕರ್‌ಗಳನ್ನು ಸೀಜ್‌ ಮಾಡುತ್ತೇವೆ ಎಂದರು.

ಹಾಲಿನ ಟ್ಯಾಂಕರ್‌ಗಳ ಮೂಲಕ ಕುಡಿವ ನೀರು ಪೂರೈಕೆ: ಡಿಕೆಶಿ

ಇನ್ನು ರಾಜ್ಯದಲ್ಲಿ ಹಾಲು ಸರಬರಾಜಿಗೆ ಬಳಕೆ ಮಾಡುವ ಕೆಎಂಎಫ್‌ ಹಾಗೂ ಇತರೆ ಹಾಲು ಒಕ್ಕೂಟಗಳಲ್ಲಿನ ನಿರುಪಯುಕ್ತ ಹಾಲಿನ ಟ್ಯಾಂಕರ್‌ಗಳನ್ನು ನೀರು ಪೂರೈಕೆಗೆ ನೀಡುವಂತೆ ಸೂಚಿಸಲಾಗಿದೆ. ನಗರದ ನೀರಿನ ಸಮಸ್ಯೆ ಪರಿಹಾರಗೊಳ್ಳುವವರೆಗೆ ಬಳಕೆ ಮಾಡಲಾಗುವುದು ಎಂದು ಹೇಳಿದರು.

ಕೃಷಿ ಕೊಳವೆ ಬಾವಿ ವಶಕ್ಕೆ ಚಿಂತನೆ:

ಇನ್ನು ನಗರದ ಹೊರ ಭಾಗದಲ್ಲಿರುವ ಕೃಷಿ ಕೊಳವೆ ಬಾವಿಗಳನ್ನು ಮಾಹಿತಿ ಸಂಗ್ರಹಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯ ಬಿದ್ದರೆ, ಕೃಷಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆದು ನಗರಕ್ಕೆ ನೀರು ಪೂರೈಕೆ ಮಾಡಲಾಗುವುದು. ಕೊಳವೆ ಬಾವಿ ವಶಕ್ಕೆ ಪಡೆಯುವುದಕ್ಕೆ ಸರ್ಕಾರಕ್ಕೆ ಅಧಿಕಾರವಿದೆ. ನೀರಿನ ಸಮಸ್ಯೆ ಬಗೆಹರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬೀಳಗಿ ಮೊದಲಾದವರಿದ್ದರು.ಕಿ.ಮೀ ಆಧಾರದಲ್ಲಿ ದರ ನಿಗದಿ

ಟ್ಯಾಂಕರ್ ನೀರು ಪೂರೈಕೆಗೆ ₹500 ರಿಂದ ₹2 ಸಾವಿರ, ₹3 ಸಾವಿರದ ವರೆಗೂ ವಸೂಲಿ ಮಾಡುತ್ತಿದ್ದಾರೆ. ಈ ಗೊಂದಲವನ್ನು ಅಸೋಸಿಯೇಷನ್ ಬಳಿ ಮಾತನಾಡಿ ನೀರಿನ ದರವನ್ನು ಕಿ.ಮೀ ಆಧಾರದಲ್ಲಿ ನಿಗದಿ ಪಡಿಸಲಾಗುವುದು. ಮೊದಲು ಟ್ಯಾಂಕರ್‌ ನೋಂದಣಿ ಮಾಡಿಕೊಳ್ಳಲಿ. ಆ ನಂತರ ದರ ನಿಗದಿ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

6,997 ಕೊಳವೆ ಬಾವಿಯಲ್ಲಿ ನೀರಿಲ್ಲ

ನಗರದಲ್ಲಿ 16,781 ಕೊಳವೆ ಬಾವಿಗಳಿದ್ದು, ಈ ಪೈಕಿ 6,997 ಕೊಳವೆ ಬಾವಿಗಳು ಬತ್ತಿ ಹೋಗಿದ್ದು, 7,784 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಹೊಸ ಕೊಳವೆ ಬಾವಿ ಕೊರೆಸಲು ಸ್ಥಳೀಯ ಗುತ್ತಿಗೆದಾರರು ಮತ್ತು ತಮಿಳುನಾಡಿನ ಕೊಳವೆಬಾವಿ ಕೊರೆಯುವವರ ನಡುವೆ ದರದ ವಿಚಾರವಾಗಿ ಒಂದಷ್ಟು ಗೊಂದಲಗಳಿದ್ದು ಇದನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಡಿಕೆಶಿ ತಿಳಿಸಿದರು.

ನೀರಿಗೆ ₹556 ಕೋಟಿ ಮೀಸಲು

ಬೆಂಗಳೂರು ನಗರದ ಎಲ್ಲಾ ಶಾಸಕರಿಗೆ ನೀರಿನ ಸಮಸ್ಯೆ ಬಗೆಹರಿಸಲು ತಲಾ ₹10 ಕೋಟಿ ಅನುದಾನ ನೀಡಲಾಗಿದೆ. ಬಿಬಿಎಂಪಿಗೆ ₹148 ಕೋಟಿ, ಜಲಮಂಡಳಿ ₹128 ಕೋಟಿ ಸೇರಿದಂತೆ ಒಟ್ಟು ₹556 ಕೋಟಿ ಕುಡಿಯುವ ನೀರಿನ ಪೂರೈಕೆಗೆ ಮೀಸಲಿಡಲಾಗಿದೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.ಗಾಬರಿ ಬೇಡ: ಡಿಕೆಶಿ ಅಭಯ

ಕುಡಿಯುವ ನೀರನ್ನು ಪೂರೈಕೆಯಿಂದ ಜನತೆ ಗಾಬರಿಯಾಗುವುದು ಬೇಡ. ಪ್ರತಿಯೊಬ್ಬರಿಗೂ ನೀರು ನೀಡುವುದು ನಮ್ಮ ಕರ್ತವ್ಯವಾಗಿದೆ. ನಾಗರಿಕರು ಸಹ ಅನಗತ್ಯವಾಗಿ ನೀರನ್ನು ಬಳಕೆ ಮಾಡಬಾರದು. ಉದ್ಯಾನಗಳಿಗೆ, ಇತರೇ ಬಳಕೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು. ಬೀಕರ ಬರಗಾಲದಲ್ಲಿ ನೀರಿನ ಮಿತ ಬಳಕೆ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಬಿಬಿಎಂಪಿ ಅನ್ಯಾಯ: ಲೋಕಾಯುಕ್ತಕ್ಕೆ ದೂರು

ಕಾವೇರಿ 5ನೇ ಹಂತ ತ್ವರಿತ ಪೂರ್ಣ

110 ಹಳ್ಳಿಗಳಿಗೆ ಮೇ ಅಂತ್ಯದ ವೇಳೆಗೆ ಕಾವೇರಿ ನೀರು ಪೂರೈಕೆ ಮಾಡಲಾಗುವುದು. 775 ಎಂಎಲ್ ಡಿ ನೀರು ಆದಷ್ಟು ಬೇಗ ಜನರಿಗೆ ಪೂರೈಸಲಾಗುವುದು. ಕೆಲವು ಸಮಸ್ಯೆಗಳಿವೆ. ಅದನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿದರು.ಖಾಲಿ ಕೊಡ ಪ್ರದರ್ಶನ

ಯಶವಂತಪುರ ವಿಭಾಗದ ಸಭಾ ಕ್ಷೇತ್ರದ ಅಂಜನಾನಗರದ ನಿವಾರಿಗಳು ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಖಾಲಿ ಕೊಡ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು. ನೀರಿನ ಸಮಸ್ಯೆ ಪರಿಹಾರ ಮಾಡಿಲ್ಲ, ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ. 10 ದಿನದಲ್ಲಿ ಹೊಸ ಕೊಳವೆ ಬಾವಿ ತೆಗೆದು ನೀರು ಪೂರೈಕೆ ಕ್ರಮವಹಿಸಬೇಕು. ಇಲ್ಲವಾದರೆ, ಉಪವಾಸ ಧರಣಿ ಸತ್ಯಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

click me!