ಮಂಗಾರು ಮಳೆಯ ಅಬ್ಬರಕ್ಕೆ ನದಿ ಮುಖಜ ಭೂಮಿಯಲ್ಲಿ ಶೇಖರಣೆಗೊಳ್ಳುವ ಅಪಾರ ಪ್ರಮಾಣದ ನೀರನ್ನು ಸಮುದ್ರಕ್ಕೆ ಹರಿ ಬಿಡುವ ‘ಕೋಡಿ ಕಡಿಯುವ’ ವೈಶಿಷ್ಟ್ಯಮಯ, ಸಾಂಪ್ರದಾಯಕ ಕಾರ್ಯವು ಬುಧವಾರ ಸಂಜೆ ಇಲ್ಲಿಯ ನದಿ ಭಾಗದ ಸಂಗಮ ತೀರದಲ್ಲಿ ನಡೆಯಿತು.
ರಾಘು ಕಾಕರಮಠ
ಅಂಕೋಲಾ (ಜೂ.29) : ಮಂಗಾರು ಮಳೆಯ ಅಬ್ಬರಕ್ಕೆ ನದಿ ಮುಖಜ ಭೂಮಿಯಲ್ಲಿ ಶೇಖರಣೆಗೊಳ್ಳುವ ಅಪಾರ ಪ್ರಮಾಣದ ನೀರನ್ನು ಸಮುದ್ರಕ್ಕೆ ಹರಿ ಬಿಡುವ ‘ಕೋಡಿ ಕಡಿಯುವ’ ವೈಶಿಷ್ಟ್ಯಮಯ, ಸಾಂಪ್ರದಾಯಕ ಕಾರ್ಯವು ಬುಧವಾರ ಸಂಜೆ ಇಲ್ಲಿಯ ನದಿ ಭಾಗದ ಸಂಗಮ ತೀರದಲ್ಲಿ ನಡೆಯಿತು.
undefined
ಈ ಕೋಡಿ ಕಡಿಯುವ ಕಾರ್ಯದಲ್ಲಿ ಒಂದು ರೀತಿಯ ಸಂಭ್ರಮ ಹಾಗೂ ಅಷ್ಟೇ ಅಪಾಯ, ಆತಂಕ ಇರುತ್ತದೆ. ಈ ಆತಂಕದ ನಡುವೆಯೂ ಸುತ್ತಮುತ್ತಲಿನ ಎಂಟು ಗ್ರಾಮದ ಗ್ರಾಮಸ್ಥರು ಊರಲಿದ್ದ ನೀರನ್ನು ಸಮುದ್ರಕ್ಕೆ ಬಿಟ್ಟು ತಾಲೂಕಿನ ಜನತೆಯ ನೆಮ್ಮದಿಗೆ ಕಾರಣರಾದರು.
ಅಂಕೋಲಾ ನಾಗರಿಕ ವಿಮಾನ ನಿಲ್ದಾಣ: ಜನರ ಬೇಡಿಕೆ ಈಡೇರಿಸುತ್ತಾ ಸರ್ಕಾರ...?
ಏನಿದು ಕೋಡಿ ಕಡಿಯುವುದು..?:
ತಾಲೂಕಿನ ಸಮುದ್ರದಂಚಿನ 7 ಕಿಮೀ ವ್ಯಾಪ್ತಿಯ ಪೂಜಗೇರಿ, ತೆಂಕಣಕೇರಿ, ನದಿಭಾಗ, ಬೆಳಂಬಾರ, ಲಕ್ಷ್ಮೇಶ್ವರ, ವಂದಿಗೆ, ಖಾರ್ವಿವಾಡಾ ಭಾಗದಲ್ಲಿ ಸಮುದ್ರ ತೀರದ ಪ್ರದೇಶದ ಜನತೆಗೆ ಕೋಡಿ ಕಡಿದ ಮೇಲಿಯೇ ಇಲ್ಲಿ ಕೃಷಿ ಚಟುವಟಿಕೆ ಚಾಲನೆ ಪಡೆದುಕೊಳ್ಳುತ್ತವೆ. ಇದಲ್ಲದೇ ನದಿಭಾಗದ ಖಾರ್ವಿಕೇರಿಯಲ್ಲಿನ 40 ಮನೆಗಳು ಜಲಾವೃತದ ಆತಂಕಕ್ಕೆ ಒಳಗಾಗುತ್ತಿದ್ದವು.
ಇಲ್ಲಿನ ಪ್ರದೇಶದಲ್ಲಿ ಬಿದ್ದ ಮಳೆ ಸಹಜವಾಗಿ ಹರಿದು ಸಮುದ್ರ ಸೇರಬೇಕು. ಆದರೆ ಘಟ್ಟದ ಮೇಲಿಂದ ಬಂದ ನೀರನೊಡನೆ ಇಲ್ಲಿಯ ಮಳೆ ನೀರು ಸೇರಿ ಸಮುದ್ರಕ್ಕೆ ಸಾಗದೇ ಇಲ್ಲಿನ ಪ್ರದೇಶಗಳೇ ಜಲಾವೃತಗೊಳ್ಳುತ್ತದೆ. ಹೀಗಾಗಿ ನದಿಭಾಗದ ಭೂ ಪ್ರದೇಶದಲ್ಲಿ ಸಂಗ್ರಹವಾದ ನೀರನ್ನು ನದಿಭಾಗದ ಮುಖಜ ಪ್ರದೇಶದಿಂದ ಸಮುದ್ರ ಸಂಗಮದಲ್ಲಿ ಮರಳನ್ನು ತೆಗೆದು ನೀರನ್ನು ಬಿಡಲಾಗುತ್ತದೆ. ಇದಕ್ಕೆ ಕೋಡಿ ಕಡಿಯುವುದು ಎನ್ನಲಾಗುತ್ತದೆ. ಒಂದು ವೇಳೆ ಪ್ರತಿ ವರ್ಷ ಕೋಡಿ ಕಡಿಯದೇ ಹೋದರೆ ಸುತ್ತಲಿನ 8 ಗ್ರಾಮಗಳು ಪ್ರವಾಹದ ಸುಳಿಗೆ ಸಿಲುಕಿ ತನ್ನ ನೆಲೆಯನ್ನು ಕಳೆದುಕೊಳ್ಳುವ ಅಪಾಯವಿದೆ.
ಕೋಡಿಯ ಆತಂಕ:
ಕೋಡಿ ಕಡಿಯುವ ಸಮಯದಲ್ಲಿ ಆತಂಕದ ವಾತಾವರಣವೂ ಸೃಷ್ಟಿಯಾಗುತ್ತದೆ. ಈ ಸಂದರ್ಭದಲ್ಲಿ ನಿಂತ ನೀರು ಸಮುದ್ರ ಕಡೆಗೆ ರಭಸವಾಗಿ ನುಗ್ಗುವುದರಿಂದ ಆ ಕೆಲಸದಲ್ಲಿ ತೊಡಗಿದ ಜನ ಕೊಚ್ಚಿ ಹೋಗುವ ಸಾಧ್ಯತೆ ಇರುತ್ತದೆ. 30 ವರ್ಷದ ಹಿಂದೆ ದುರ್ಘಟನೆಯೊಂದು ಸಂಭವಿಸಿ ಇಬ್ಬರು ಸಮುದ್ರ ಪಾಲಾಗಿದ್ದರು. ಸಮುದ್ರ ದೇವನಿಗೆ ಪೂಜಾ ಕಾರ್ಯ, ಬಲಿ ವಿಧಾನಗಳು ಪೂರೈಸಿ ಇಲ್ಲಿ ಕೋಡಿ ಕಡಿಯುವ ಅನುಭವವಿದ್ದವರು ಮಾತ್ರ ಕೋಡಿ ಕಡಿಯುವ ಕಾರ್ಯಕ್ಕೆ ಕೈ ಹಚ್ಚುತ್ತಾರೆ.
ಸುಮಾರು 18 ವರ್ಷಗಳ ಹಿಂದೆ ಜಲಾವೃತಗೊಳ್ಳುವ ಎಲ್ಲ ಗ್ರಾಮದವರೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರಂತೆ. ಆದರೆ ಈಗ ನದಿಭಾಗದ ಜನತೆ ಮಾತ್ರ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಬೊಬ್ರವಾಡ ಗ್ರಾಪಂ ಹಾಗೂ ತಾಲೂಕಾಡಳಿತದ ಆಶ್ರಯದಲ್ಲಿ ನದಿಭಾಗದ ನೂರಾರು ನಾಗರಿಕರು ಕೋಡಿ ಕಡಿಯುವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಬ್ರಿಟಿಷ ಆಡಳಿತಾವಧಿಯಲ್ಲಿ ಕೋಡಿ ಕಡಿಯುವುದಕ್ಕಾಗಿ .20 ನೀಡುತ್ತಿದ್ದರಂತೆ. ಆದರೆ ಈಗ ಬೊಬ್ರವಾಡ ಗ್ರಾಪಂ ಈ ಕಾರ್ಯಕ್ಕೆ ಪ್ರತಿವರ್ಷ .10 ಸಾವಿರ ನೀಡುತ್ತಿದೆ.
ಈ ಕೋಡಿ ಕಡಿಯುವ ಕಾರ್ಯದಲ್ಲಿ ವೆಂಕಪ್ಪ ಟಿ. ನಾಯ್ಕ, ಪಾಂಡುರಂಗ ಡಾಂಗಿ ನಾಯ್ಕ, ರಮೇಶ ಎಂ. ನಾಯ್ಕ, ದಿನಕರ ಡಿ. ನಾಯ್ಕ, ಶಿವಾನಂದ ಬಿ. ನಾಯ್ಕ, ರವಿ ಆನಂದು ನಾಯ್ಕ, ಮಹೇಶ ವಿ. ನಾಯ್ಕ, ಸತೀಶ ಆರ್, ನಾಯ್ಕ, ಶ್ರೀನಿವಾಸ ಎಚ್. ನಾಯ್ಕ, ನಂದಾ ಎಲ್. ನಾಯ್ಕ, ಜ್ಞಾನೇಶ್ವರ ಎ. ನಾಯ್ಕ, ನಿತ್ಯಾನಂದ ಎಂ. ನಾಯ್ಕ, ಮಂಜುನಾಥ ಎಸ್. ನಾಯ್ಕ, ಸೋಮಶೇಖರ್ ಎಚ್. ನಾಯ್ಕ ಮೊದಲಾದವರು ಈ ಕಾರ್ಯದಲ್ಲಿ ಭಾಗವಹಿಸಿದ್ದರು.
ಕಂದಾಯ ನೀರಿಕ್ಷಕ ಮಂಜುನಾಥ ನಾಯ್ಕ, ಗ್ರಾಮ ಸೇವಕ ವಿನೋದ ನಾಯ್ಕ, ಪಿಡಿಒ ಸೀತಾ ಮೇತ್ರಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಜನಹಿತ ಕೈಂಕರ್ಯ ಹಿಂದಿನಿಂದಲೂ ನಡೆದುಬಂದಿದೆ. ಇದಕ್ಕೆ ಧಾರ್ಮಿಕವಾಗಿ ಒಂದು ಪ್ರತೀತಿ ಇದೆ. ಬೊಬ್ರದೇವರು, ನದಿ ಆಚೆ ಇರುವ ಬೆಳಂಬಾರ ಕುಸ್ಲ ದೇವಸ್ಥಾನಕ್ಕೆ ಬಂಡೆ ಆಟವಾಡಲು ಹೋಗಿಬರುತ್ತದೆ. ಸಮುದ್ರ ಸಂಗಮ ಪ್ರದೇಶದಲ್ಲಿ ನಡೆದಾಡಲು ಮರಳಿನ ರಾಶಿಯೇ ಸೇತುವೆಯಾಗುತ್ತದೆ. ಈ ದಾರಿಯನ್ನೇ ದೈವದತ್ತ ಕೋಡಿ ಎಂದು ಕರೆಯುಲಾಗುತ್ತದೆ.
ನಿತ್ಯಾ ಎಂ. ನಾಯ್ಕ ನದಿಭಾಗ
ಕೋಡಿ ಕಡಿಯುವ ಕಾರ್ಯಕ್ಕೆ ಬೊಬ್ರವಾಡ, ಶೆಟಗೇರಿ, ವಂದಿಗೆ, ಬೆಳಂಬಾರ ಗ್ರಾಪಂ ವ್ಯಾಪ್ತಿಯ ನಾಗರಿಕರು ಸಹ ಕೈ ಜೋಡಿಸುವಂತಾಗಬೇಕು. ಬೊಬ್ರವಾಡ ಗ್ರಾಪಂ ಮಾತ್ರ 10 ಸಾವಿರ ಅನುದಾನ ನೀಡುತ್ತಿದೆ. ಉಳಿದ ಗ್ರಾಪಂಗಳು ತಲಾ 10 ಸಾವಿರದಂತೆ ನೀಡಲು ಠರಾವು ಕೂಡ ಮಾಡಲಾಗಿದೆ. ಆದರೆ ಇದ್ಯಾವುದು ಕಾರ್ಯರೂಪಕ್ಕೆ ಬರದಿರುವುದು ದುರದೃಷ್ಟಕರ.
ದೀಪಾ ಸೋಮಶೇಖರ ನಾಯ್ಕ ಬೊಬ್ರವಾಡ ಗ್ರಾಪಂ ಸದಸ್ಯ