ಹೊಸ ಶಾಸಕರಿಗೆ ವಿಕಾಸಸೌಧದಲ್ಲಿ 'ಕ್ಲಾಸ್‌'!

By Web DeskFirst Published Nov 10, 2018, 8:45 AM IST
Highlights

ನೂತನ ವಿಧಾನಸಭೆಗೆ 61 ಸದಸ್ಯರು ಹಾಗೂ ವಿಧಾನ ಪರಿಷತ್‌ಗೆ 17 ಜನರು ಆಯ್ಕೆಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಥಮ ಬಾರಿಗೆ ಸದನದ ಸದಸ್ಯರಾಗಿರುವುದರಿಂದ ಕಲಾಪಗಳ ಗುಣಮಟ್ಟ ಉತ್ತಮವಾಗಿರಬೇಕು ಎಂಬ ಉದ್ದೇಶದಿಂದ ವಿಧಾನಸಭೆ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರ ಆಸಕ್ತಿಯ ಫಲವಾಗಿ ಶಿಬಿರ ಏರ್ಪಡಿಸಲಾಗಿದೆ.

ಬೆಂಗಳೂರು[ನ.11]: ಕರ್ನಾಟಕ ವಿಧಾನ ಮಂಡಳ ತರಬೇತಿ ಸಂಸ್ಥೆ 15ನೇ ವಿಧಾನಸಭೆಗೆ ಹಾಗೂ ವಿಧಾನ ಪರಿಷತ್ತಿಗೆ ಪ್ರಥಮ ಬಾರಿಗೆ ಆಯ್ಕೆಯಾದ ಸದಸ್ಯರುಗಳಿಗೆ ನ.15 ಮತ್ತು 16ರಂದು ಎರಡು ದಿನಗಳ ಕಾಲ ವಿಕಾಸಸೌಧದಲ್ಲಿ ಶಾಸಕಾಂಗದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ಶಿಬಿರವನ್ನು ಆಯೋಜಿಸಿದೆ.

ನೂತನ ವಿಧಾನಸಭೆಗೆ 61 ಸದಸ್ಯರು ಹಾಗೂ ವಿಧಾನ ಪರಿಷತ್‌ಗೆ 17 ಜನರು ಆಯ್ಕೆಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಥಮ ಬಾರಿಗೆ ಸದನದ ಸದಸ್ಯರಾಗಿರುವುದರಿಂದ ಕಲಾಪಗಳ ಗುಣಮಟ್ಟ ಉತ್ತಮವಾಗಿರಬೇಕು ಎಂಬ ಉದ್ದೇಶದಿಂದ ವಿಧಾನಸಭೆ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರ ಆಸಕ್ತಿಯ ಫಲವಾಗಿ ಶಿಬಿರ ಏರ್ಪಡಿಸಲಾಗಿದೆ.

ಮೊದಲ ದಿನವಾದ ನ. 15 ರಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ.ಎಲ್‌. ಶಂಕರ್‌ ಪ್ರಜಾಪ್ರಭುತ್ವ, ಸಂವಿಧಾನ, ಶಾಸಕರ ಹಕ್ಕು, ಕರ್ತವ್ಯಗಳ ಬಗ್ಗೆ ತಿಳಿಸಲಿದ್ದಾರೆ. ಹಿರಿಯರಾದ ಬಿ.ಆರ್‌. ಯಾವಗಲ್‌ ಅವರು ಪ್ರಶ್ನೋತ್ತರ ವೇಳೆ, ಗಮನ ಸೆಳೆಯುವ ಸೂಚನೆ ಮುಂತಾದಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಸದಸ್ಯ ಎಚ್‌. ವಿಶ್ವನಾಥ್‌ ಅವರು ಸದನದಲ್ಲಿ ಅಸಂಸದೀಯ ಶಬ್ದಗಳನ್ನು ಬಳಸದೇ ಇರುವುದು, ವ್ಯಂಗ್ಯ, ಹಾಸ್ಯ ಇತ್ಯಾದಿಗಳ ಬಗ್ಗೆ ತಿಳಿಸಿಕೊಡಲಿದ್ದಾರೆ.

ನ. 16 ರಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ಅವರು ವಿವಿಧ ರೀತಿಯ ಸಮಿತಿಗಳ ರಚನೆ, ಅವುಗಳ ಕಾರ್ಯವ್ಯಾಪ್ತಿಯ ಬಗ್ಗೆ ಹಾಗೂ ವಿತ್ತೀಯ ಕಲಾಪಗಳ ಬಗ್ಗೆ ನಿವೃತ್ತ ಐಎಎಸ್‌ ಅಧಿಕಾರಿ ಡಾ. ಎಂ.ಆರ್‌. ಶ್ರೀನಿವಾಸಮೂರ್ತಿ, ಪತ್ರಕರ್ತ ಶಶಿಧರ್‌ ಭಟ್‌ ಅವರು ಶಾಸಕಾಂಗ ಮತ್ತು ಪತ್ರಿಕಾರಂಗದ ಬಗ್ಗೆ ಹಾಗೂ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರು ಸದಸ್ಯರು ಸದನದ ಕಲಾಪದಲ್ಲಿ ಅನುಸರಿಸಬೇಕಾದ ನಿಯಮ, ನಡವಳಿಕೆ ಬಗ್ಗೆ ತಿಳಿಸಲಿದ್ದಾರೆ.

ಕಡ್ಡಾಯವಲ್ಲ:

ಶಿಬಿರದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲದಿದ್ದರೂ, ಸದನದ ನೀತಿ, ನಿಯಮ, ರಿವಾಜು ತಿಳಿದುಕೊಳ್ಳುವುದರಿಂದ ಕಲಾಪದ ಗುಣಮಟ್ಟಇನ್ನಷ್ಟುಉತ್ತಮಗೊಳ್ಳುತ್ತದೆ ಎಂಬ ಕಾರಣದಿಂದ ಎಲ್ಲ ಸದಸ್ಯರು ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ. ಜೊತೆಗೆ ಆಸಕ್ತ ಇತರೆ ಸದಸ್ಯರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವಿಧಾನಸಭೆಯ ನಿರ್ದೇಶಕರಾದ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.

click me!