ಒಂದು ವಾರದ ಹಿಂದೆ, 'ಹೆಟೆರೋಕ್ರೋಮಿಯಾ ಇರಿಡಿಯಮ್' ಎಂಬ ಅಪರೂಪದ ರೂಪಾಂತರ ಹೊಂದಿರುವ ಚಿರತೆ ಯಾವುದೇ ಅಪರೂಪದ ರೂಪಾಂತರ ಹೊಂದಿಲ್ಲ ಎಂದು ಪಶು ವೈದ್ಯ ಡಾ. ವಸೀಂ ಮಿರ್ಜಾ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಬಂಡೀಪುರ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು (ಆ.15): ಒಂದು ವಾರದ ಹಿಂದೆ, 'ಹೆಟೆರೋಕ್ರೋಮಿಯಾ ಇರಿಡಿಯಮ್' ಎಂಬ ಅಪರೂಪದ ರೂಪಾಂತರ ಹೊಂದಿರುವ ಚಿರತೆಯ ಕುರಿತಾದ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು.ಈ ಕುರಿತಾಗಿ ಹಲವು ಮಾಹಿತಿಗಳನ್ನೂ ಕೇಳಲಾಗಿತ್ತು. ಇದೀಗ ಆ ಚಿರತೆ ಯಾವುದೇ ಅಪರೂಪದ ರೂಪಾಂತರ ಹೊಂದಿಲ್ಲ ಎಂದು ಪಶು ವೈದ್ಯ ಡಾ. ವಸೀಂ ಮಿರ್ಜಾ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಬಂಡೀಪುರ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ನಮ್ಮ ಪಶು ವೈದ್ಯ ಡಾ. ವಸೀಂ ಮಿರ್ಜಾ ಅವರು ಹೇಳುವ ಪ್ರಕಾರ, 'ನಮ್ಮ ಸಫಾರಿ ಪ್ರದೇಶದಲ್ಲಿ ಕಂಡುಬರುವ ಈ ಚಿರತೆ 'ಹೆಟೆರೋಕ್ರೊಮಿಯಾ ಇರಿಡಿಯಮ್' ಎಂಬ ಅಪರೂಪದ ಆನುವಂಶಿಕ ರೂಪಾಂತರವನ್ನು ಹೊಂದಿಲ್ಲ. ಬದಲಿಗೆ, ಅದರ ಕಣ್ಣಿನಲ್ಲಿ ಉರಿಯೂತವನ್ನು ಹೊಂದಿತ್ತು, ಇದನ್ನು ಹೆಟೆರೋಕ್ರೊಮಿಕ್ ಇರಿಡೋಸೈಕ್ಲಿಟಿಸ್ ಎಂದು ಕರೆಯಲಾಗುತ್ತದೆ (ತಾತ್ಕಾಲಿಕ ಗಾಯವು ತನ್ನಿಂದ ತಾನೆ ವಾಸಿಯಾಗುತ್ತಿದೆ). ಒಂದು ಸಾಮಾನ್ಯ ವಿದ್ಯಮಾನ, ಅಪರೂಪವಲ್ಲ'. ಎಂದು ಹೇಳಿದ್ದಾರೆ. ಈ ಕುರಿತಂತೆ ಹೆಚ್ಚಿನ ಸ್ಪಷ್ಟನೆ ನೀಡಲು, ಗಾಯದ ಮೊದಲು, ಸಮಯದಲ್ಲಿ ಮತ್ತು ನಂತರ ತೆಗೆದ ಅದೇ ಚಿರತೆಯ ಚಿತ್ರಗಳನ್ನು ಕೂಡ ಹಂಚಿಕೊಳ್ಳಲಾಗಿದೆ. ದಯವಿಟ್ಟು ಈ ಚಿತ್ರಗಳನ್ನು ಪರಿಶೀಲಿಸಿ ಎಂದು ಪೋಸ್ಟ್‌ನಲ್ಲಿ ಹಾಕಲಾಗಿದೆ.
ನಡೆದಿದ್ದೇನು?: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಭಿನ್ನ ರೀತಿಯ ಕಣ್ಣುಗಳುಳ್ಳ ವಿಶೇಷ ಚಿರತೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ವನ್ಯಜೀವಿ ಛಾಯಾಗ್ರಾಹಕ, ಸಚಿವ ಎಂ.ಬಿ.ಪಾಟೀಲ್ ಮಗ ಧ್ರುವ ಪಾಟೀಲ್ ಈ ಚಿತ್ರವನ್ನು ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ರೀತಿಯ ಚಿರತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಅವರು ಬರೆದುಕೊಂಡಿದ್ದರು. ಹೆಣ್ಣು ಚಿರತೆಯೊಂದು ಮರದ ಮೇಲೆ ವಿರಮಿಸುತ್ತಿದ್ದು, ಅದರ ಎರಡೂ ಕಣ್ಣುಗಳೂ ಬೇರೆ ಬಣ್ಣ ಹೊಂದಿರುವುದನ್ನು ನೋಡಬಹುದು. ಎಡಗಣ್ಣು ನೀಲಿ ಹಸಿರಿನಲ್ಲಿದ್ದರೆ, ಬಲಗಣ್ಣು ಕಂದು ಬಣ್ಣದಲ್ಲಿದೆ. ಇದಕ್ಕೆ 'ಹೆಟ್ರೋಕ್ರೊಮಿಯಾ' ಎಂಬ ಅಂಶ ಕಾರಣವಾಗಿದ್ದು ಭಾರತದಲ್ಲಿ ಈ ರೀತಿಯ ವಿಭಿನ್ನ ಕಣ್ಣುಗಳನ್ನು ಹೊಂದಿರುವ ಚಿರತೆ ಈವರೆಗೆ ದಾಖಲಾಗಿಲ್ಲ ಎಂದು ತಿಳಿದುಬಂದಿತ್ತು.