ಈಗಾಗಲೇ ಸುಮಾರು 1 ಕೋಟಿ ರು. ವೆಚ್ಚದಲ್ಲಿ ರೋಬೋಟ್ ಖರೀದಿಸಲು ಟೆಂಡರ್ ಆಹ್ವಾನಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷದೊಳಗೆ ಇಲಾಖೆಗೆ ರೋಬೋಟ್ ಸೇರ್ಪಡೆಯಾಗಲಿದ್ದು, ಸೇವೆಗೆ ಲಭ್ಯವಾಗಲಿದೆ. ಬೆಂಕಿ ನಂದಿಸಲು ರೋಬೋಟ್ ಬಳಕೆ ಹೊಸದೇನಲ್ಲ.
ಬೆಂಗಳೂರು (ಜು.08): ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಅಗ್ನಿ ಅವಘಡಗಳ ಸಂದರ್ಭಗಳಲ್ಲಿ ಬೆಂಕಿ ನಂದಿಸಲು ಹಾಗೂ ಅಪಾಯದಲ್ಲಿ ಸಿಲುಕಿದ ಜನರನ್ನು ರಕ್ಷಿಸಲು ಸಹಾಯವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ರಿಮೋಟ್ ನಿಯಂತ್ರಿತ ಅತ್ಯಾಧುನಿಕ ತಂತ್ರಜ್ಞಾನದ ರೋಬೋಟ್ ಪರಿಚಯಿಸಲು ಮುಂದಾಗಿದೆ. ಅಗ್ನಿ ದುರಂತ ಸಂದರ್ಭದಲ್ಲಿ ಕ್ಲಿಷ್ಟ ಸ್ಥಳಗಳಿಗೆ ತೆರಳಿ ಅಗ್ನಿ ನಂದಿಸುವ ಹಾಗೂ ಕಟ್ಟಡಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಈ ರೋಬೋಟ್ ನೆರವಾಗಲಿದೆ. ಶೀಘ್ರದಲ್ಲೇ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಅತ್ಯಾಧುನಿಕ ತಂತ್ರಜ್ಞಾನದ ರೋಬೋಟ್ ಸೇರ್ಪಡೆಯಾಗಲಿದೆ.
ಈಗಾಗಲೇ ಸುಮಾರು 1 ಕೋಟಿ ರು. ವೆಚ್ಚದಲ್ಲಿ ರೋಬೋಟ್ ಖರೀದಿಸಲು ಟೆಂಡರ್ ಆಹ್ವಾನಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷದೊಳಗೆ ಇಲಾಖೆಗೆ ರೋಬೋಟ್ ಸೇರ್ಪಡೆಯಾಗಲಿದ್ದು, ಸೇವೆಗೆ ಲಭ್ಯವಾಗಲಿದೆ. ಬೆಂಕಿ ನಂದಿಸಲು ರೋಬೋಟ್ ಬಳಕೆ ಹೊಸದೇನಲ್ಲ. ಈಗಾಗಲೇ ದೇಶದ ದೆಹಲಿ, ಮುಂಬೈ, ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ರೋಬೋಟ್ ಸೇವೆ ಲಭ್ಯವಿದೆ. ಈ ಹಿಂದೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಕಮಲ್ ಪಂತ್ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಆಯುಷ್ಮಾನ್ ಭಾರತದಡಿ ಇನ್ನು 10 ಲಕ್ಷ ರು. ಆರೋಗ್ಯ ವಿಮೆ?: 70 ವರ್ಷ ಮೇಲ್ಪಟ್ಟವರಿಗೂ ವಿಮಾ ಸೌಲಭ್ಯ
ಅಗ್ನಿ ಅವಘಡಗಳಲ್ಲಿ ರೋಬೋಟ್ ಬಳಕೆಯಿಂದ ಆಗುವ ಉಪಯೋಗಗಳ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಿಸಿದ್ದರು.ಅದರಂತೆ ರಾಜ್ಯ ಸರ್ಕಾರವು 1 ರೋಬೋಟ್ ಖರೀದಿಗೆ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳ ಒಂದು ತಂಡವು ದೆಹಲಿಗೆ ತೆರಳಿ ಈ ಅಗ್ನಿ ಶಮನ ರೋಬೋಟ್ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ರೋಬೋಟ್ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕ್ಲಿಷ್ಟ ಸ್ಥಳಗಳಲ್ಲಿ ಕಾರ್ಯಾಚರಣೆ: ಅಗ್ನಿ ಅವಘಡದ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ಅಪಾಯಕಾರಿ ಸ್ಥಿತಿಯಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಾರೆ. ಕಿರಿದಾದ ರಸ್ತೆಗಳು, ಗೋದಾಮು, ಬೇಸ್‌ಮೆಂಟ್, ಬಹುಮಹಡಿಗಳು ಸೇರಿದಂತೆ ಕೆಲವು ಕ್ಲಿಷ್ಟ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುವುದು ಸಿಬ್ಬಂದಿಗೆ ಸವಾಲಾಗಿದೆ. ಇಂತಹ ಸಂದರ್ಭಗಳಲ್ಲಿ ರೋಬೋಟ್ ಬಳಕೆ ಮಾಡಿ ಬೆಂಕಿ ನಂದಿಸಬಹುದಾಗಿದೆ. ಸಿಬ್ಬಂದಿ ಹೋಗಲಾದ ಸ್ಥಳಗಳಿಗೆ ರಿಮೋಟ್ ನಿಯಂತ್ರಿತ ರೋಬೋಟ್ ಬಳಸಿಕೊಂಡು ಬೆಂಕಿ ಶಮನಗೊಳಿಸುವ ಕಾರ್ಯಾಚರಣೆ ಮಾಡಬಹುದಾಗಿದೆ.
ಅಕ್ಕಿ ಕೊಡ್ತೇವೆ, ಆದರೆ ಖರೀದಿಗೆ ರಾಜ್ಯದಲ್ಲಿ ಹಣವೇ ಇಲ್ಲ: ಪ್ರಲ್ಹಾದ್ ಜೋಶಿ
ಅತ್ಯಾಧುನಿಕ ತಂತ್ರಜ್ಞಾನ: ಈ ರೋಬೋಟ್‌ನಲ್ಲಿ ಅಗ್ನಿ ನಿರೋಧಕ ಹೊದಿಕೆ, ವಾಟರ್ ಜೆಟ್, ಚಿಕ್ಕ ಗಾಲಿಗಳು, ಚೈನ್ ವ್ಯವಸ್ಥೆ ಇರಲಿದೆ. ಎಲೆಕ್ಟ್ರಾನಿಕ್ ಕಣ್ಣು ಇರಲಿದ್ದು, ಘಟನಾ ಸ್ಥಳದ ಚಿತ್ರವನ್ನು ಸೆರೆದು ಕಂಟ್ರೋಲ್ ಯೂನಿಟ್‌ಗೆ ರವಾನಿಸಲಿದೆ. ದಿಢೀರ್ ಅಗ್ನಿ ಅವಘಡಗಳ ವೇಳೆ ಹೆಚ್ಚಿನ ಜೀವಹಾನಿ ತಪ್ಪಿಸಲು ಹಾಗೂ ಸಿಬ್ಬಂದಿ ನಿಖರವಾಗಿ ಕಾರ್ಯ ನಿರ್ವಹಿಸಲು ಈ ರೋಬೋಟ್ ನೆರವಾಗಲಿದೆ. ಈ ರೋಬೋಟ್ ಬಳಸಿಕೊಂಡು ಸುಮಾರು ನೂರು ಅಡಿ ದೂರದಿಂದಲೂ ಬೆಂಕಿಯ ಜ್ವಾಲೆಯನ್ನು ನಿಯಂತ್ರಿಸಬಹುದು. ಸುಮಾರು ನೂರು ಅಡಿ ದೂರದಿಂದ ಘಟನಾ ಸ್ಥಳಕ್ಕೆ ನೀರು ಸಿಂಪಡಿಸುವ ಸಾಮರ್ಥ್ಯ ಹೊಂದಿದೆ. ಜೆಟ್ ಮುಖಾಂತರ ಕೇವಲ ನೀರು ಮಾತ್ರವಲ್ಲದೆ, ನೊರೆ, ವಿವಿಧ ದ್ರಾವಣಗಳನ್ನು ಸಂಪಡಿಸಬಹುದು ಎಂದು ರಾಜ್ಯ ಅಗ್ನಿಶಾಮಕ ಮತ್ತು ಸಿಬ್ಬಂದಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.