ಬೆಂಗಳೂರಿನ 15 ಲಕ್ಷ ಬಿ ಖಾತಾ ಸೈಟ್‌ಗಳಿಗೆ ಎ ಖಾತಾ ಭಾಗ್ಯ

Kannadaprabha News   | Kannada Prabha
Published : Oct 16, 2025, 05:30 AM IST
DK Shivakumar

ಸಾರಾಂಶ

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ನ. 1 ರಿಂದ ‘ಬಿ’ ಖಾತೆ ನಿವೇಶನಗಳನ್ನು ‘ಎ’ ಖಾತೆಗಳಾಗಿ ಬದಲಾವಣೆ ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡಿದ್ದು, 100 ದಿನಗಳ ಈ ಅಭಿಯಾನದಿಂದ 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗ ಆಗಲಿದೆ. ನಗರದ ಎಲ್ಲಾ ಆಸ್ತಿಗಳಿಗೂ ಏಕರೂಪದ ಖಾತಾ ವ್ಯವಸ್ಥೆ

ಬೆಂಗಳೂರು : ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ನ. 1 ರಿಂದ ‘ಬಿ’ ಖಾತೆ ನಿವೇಶನಗಳನ್ನು ‘ಎ’ ಖಾತೆಗಳಾಗಿ ಬದಲಾವಣೆ ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡಿದ್ದು, 100 ದಿನಗಳ ಈ ಅಭಿಯಾನದಿಂದ 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗ ಆಗಲಿದೆ. ನಗರದ ಎಲ್ಲಾ ಆಸ್ತಿಗಳಿಗೂ ಏಕರೂಪದ ಖಾತಾ ವ್ಯವಸ್ಥೆ ಜಾರಿಯಾಗಲಿದೆ.

ಮೊದಲ ಹಂತದಲ್ಲಿ ಬಿ ಖಾತಾ ನಿವೇಶನಗಳಿಗೆ ಮಾತ್ರ ಎ ಖಾತಾ ನೀಡಲಾಗುವುದು. ಬಿ ಖಾತಾ ನಿವೇಶನದಲ್ಲಿನ ಬಹುಮಹಡಿ ಕಟ್ಟಡಗಳು ಎ‌ ಖಾತೆಗಳಾಗಿ ಬದಲಾವಣೆ ಆಗುವುದಿಲ್ಲ. ಬಿ ಖಾತಾ ಫ್ಲ್ಯಾಟ್‌ಗಳಿಗೂ ಇದು ಅನ್ವಯವಾಗುವುದಿಲ್ಲ. ಮೊದಲ ಹಂತದಲ್ಲಿ ಭೂಮಿಗೆ ಮಾತ್ರ ‘ಎ’ ಖಾತಾ ಅವಕಾಶ ಕಲ್ಪಿಸಲಾಗಿದೆ. ಬಿ ಖಾತಾ ನಿವೇಶನದಲ್ಲಿ ಮನೆ ಕಟ್ಟಿದ್ದರೂ ನಿವೇಶನಕ್ಕೆ ಅಷ್ಟೇ ಎ ಖಾತಾ ನೀಡಲು ನಿರ್ಧರಿಸಲಾಗಿದೆ.

ಜಿಬಿಎ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್ ಲೈನ್ ವ್ಯವಸ್ಥೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಎಲ್ಲಾ ಬಿ ಖಾತಾ ನಿವೇಶನಗಳಿಗೂ ಎ ಖಾತಾ ನೀಡುವ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಇದೊಂದು ಕ್ರಾಂತಿಕಾರಕ ತೀರ್ಮಾನ.‌ ಆಸ್ತಿ ಶುದ್ಧೀಕರಣಕ್ಕೆ ನಾಂದಿ. ಇದರಿಂದ ಸಂಗ್ರಹವಾಗುವ ಆದಾಯ ಆಯಾ ಪಾಲಿಕೆಗೆ ನೀಡಲಾಗುವುದು ಎಂದು ಹೇಳಿದರು.

2 ಸಾವಿರ ಚ.ಮೀ. ವಿಸ್ತೀರ್ಣದವರೆಗಿನ ಆಸ್ತಿಗಳು ಇದರ ವ್ಯಾಪ್ತಿಗೆ ಬರುತ್ತವೆ. 2 ಸಾವಿರ ಚದರ ಮೀಟರ್ ಗಿಂತ ಹೆಚ್ಚು ವಿಸ್ತೀರ್ಣದ ಆಸ್ತಿಗಳಿಗೆ ಕ್ಯಾಡ್ ಡ್ರಾಯಿಂಗ್ ಸೇರಿ ಇತರೆ ದಾಖಲೆಗಳನ್ನು ನೀಡಬೇಕಾಗುತ್ತದೆ. ನವೆಂಬರ್ 1 ರಿಂದ ಪ್ರಾರಂಭವಾಗುವ ಈ ಅಭಿಯಾನ 100 ದಿನಗಳ ನಡೆಯಲಿದೆ. 500 ರೂಪಾಯಿ ಅರ್ಜಿ ಶುಲ್ಕವನ್ನು ಕಟ್ಟಿ (2,000 ಚ.ಮೀ.ವರೆಗೆ ಅರ್ಜಿ ಶುಲ್ಕವಿಲ್ಲ) ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡರೆ ಪಾಲಿಕೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ ಎಂದು ಹೇಳಿದರು.

ಮಾರ್ಗಸೂಚಿ ದರದ ಶೇ.5 ರಷ್ಟು ಶುಲ್ಕ:

ಬಿ ಖಾತಾ ಆಸ್ತಿ ಮಾಲೀಕರು ಸದರಿ ಆಸ್ತಿಯ ಮಾರ್ಗಸೂಚಿ ದರದ (ಗೈಡೆನ್ಸ್ ವ್ಯಾಲ್ಯೂ) ಶೇ.‌5 ರಷ್ಟನ್ನು ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. 100 ದಿನದ ನಂತರ ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಗುತ್ತದೆ.‌ ಹೆಚ್ಚುವರಿ ಶುಲ್ಕದ ಪ್ರಮಾಣ ಆನಂತರ ತಿಳಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಪ್ರತಿ ಪಾಲಿಕೆಯಲ್ಲಿ ಎರಡು ಹೆಲ್ಪ್‌ ಡೆಸ್ಕ್:

ಪ್ರತಿ ಪಾಲಿಕೆ ವ್ಯಾಪ್ತಿಯಲ್ಲೂ ಎರಡೆರಡು ಸ್ಥಳಗಳಲ್ಲಿ ''''''''ಹೆಲ್ಪ್ ಡೆಸ್ಕ್'''''''' (ಕಚೇರಿ) ಮಾಢುತ್ತೇವೆ. ಬೆಂಗಳೂರು ಒನ್ ಕೇಂದ್ರದಲ್ಲಿಯೂ ನೋಂದಣಿಯಾಗಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಯಾರೂ ಸಹ ಒಂದೇ ಒಂದು ರೂಪಾಯಿ ಲಂಚ ನೀಡುವಂತಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು.

ಮೊದಲು ಭೂಮಿಗೆ ನಾವು ಖಾತೆ ನೀಡುತ್ತೇವೆ. ಆ ಜಾಗದಲ್ಲಿರುವ ಕಟ್ಟಡ ಕಾನೂನಿನ ವ್ಯಾಪ್ತಿಯಲ್ಲಿ ಇದೆಯೇ ಇಲ್ಲವೇ ಎಂದು ಮೊದಲು ಪರಿಶೀಲಿಸಿ ನಂತರ ಕಟ್ಟಡಕ್ಕೆ ಏನು ಶುಲ್ಕ ಎಂದು ನಿಗದಿ ಮಾಡಬೇಕು ಎಂಬ ಬಗ್ಗೆ ಮಾಡುತ್ತೇವೆ. ಅನಿಯಂತ್ರಿತ, ಅನಧಿಕೃತ‌ ಮಾರಾಟ ಮತ್ತು ಅಕ್ರಮ ಆಸ್ತಿಗಳಿಗೆ ಮುಂದಕ್ಕೆ ಅವಕಾಶ ದೊರೆಯದಂತೆ ಮಾಡುವುದು, ನಕಲಿ ಖಾತೆಗಳನ್ನು ಸೃಷ್ಟಿಸಿ ಮೋಸ ಮಾಡುವುದನ್ನು ತಪ್ಪಿಸುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.

ಎಲ್ಲಾ ಬಡಾವಣೆ ರಸ್ತೆಗಳು ಸರ್ಕಾರಿ ರಸ್ತೆಗಳಾಗಿ ಘೋಷಣೆ:

ಎ ಖಾತಾ ನೀಡುವ ಮೊದಲು ಕಂದಾಯ ಜಮೀನಿನಲ್ಲಿ ಇರುವ ಎಲ್ಲಾ ಬಡಾವಣೆ ರಸ್ತೆಗಳನ್ನು ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಿದ್ದೇವೆ. ಜಮೀನಿನ ಮಾಲೀಕರು ಎರಡಕ್ಕಿಂತ ಹೆಚ್ಚು ಖರೀದಿದಾರರಿಗೆ ನಿವೇಶನ ನೋಂದಣಿ ಮಾಡಿಸಿ ದೋಖಾ ಮಾಡುತ್ತಿದ್ದರು.‌ ಇದನ್ನು ತಪ್ಪಿಸಲು ಸಾರ್ವಜನಿಕ ರಸ್ತೆಗಳಾಗಿ ಘೋಷಿಸಿ ನಿವೇಶನಗಳಿಗೆ ನಿವೇಶನ ಮಾನ್ಯತೆ ದೊರೆಯುವಂತೆ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು

ಸರ್ಕಾರಿ ರಸ್ತೆ ಎಂದು ಎಷ್ಟು ರಸ್ತೆ ಘೋಷಣೆಯಾಗಿಲ್ಲ ಎಂಬ ಪ್ರಶ್ನೆಗೆ, ಈ ಯೋಜನೆ ಜಾರಿ ನಂತರ ಒಂದು ಆಸ್ತಿ ಪಕ್ಕ ರಸ್ತೆ ಇದ್ದರೂ ಅದನ್ನು ಸರ್ಕಾರಿ ರಸ್ತೆ ಎಂದೇ ಪರಿಗಣಿಸಲಾಗುವುದು. ಕೆಲವರು ಗೇಟೆಡ್ ಕಮ್ಯುನಿಟಿ ಎಂದು ಮಾಡಿಕೊಂಡಿದ್ದರು. ಆಗ ರಸ್ತೆ ಜಾಗದ ಪಹಣಿ ಆ ಜಮೀನಿನ ಮಾಲೀಕ ಹೆಸರಿನಲ್ಲೇ ಇರುತ್ತಿತ್ತು. ಈಗ ಇದೆಲ್ಲವನ್ನು ಸರಿಪಡಿಸುತ್ತಿದ್ದೇವೆ ಎಂದರು.

ಅರ್ಜಿ ಪ್ರಕ್ರಿಯೆ ಹೇಗೆ?

ಪಾಲಿಕೆ ವ್ಯಾಪ್ತಿಯ ಹೆಲ್ಪ್ ಡೆಸ್ಕ್‌, ಬೆಂಗಳೂರು ಒನ್‌ ಮೂಲಕ 500 ರು. ಪಾವತಿಸಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಹಾಕಿದ ನಂತರ ಪಾಲಿಕೆ ಅಧಿಕಾರಿಗಳು ಪ್ರತಿ ಆಸ್ತಿಯ ಮುಂದೆ ಮಾಲೀಕನ ನಿಲ್ಲಿಸಿ ವಿಡಿಯೋ, ಫೋಟೊ ದಾಖಲೀಕರಣ ಮಾಡಿ ಅಪ್‌ ಲೋಡ್ ಮಾಡುತ್ತಾರೆ. ಇದನ್ನು ಪರಿಶೀಲಿಸಲು ಹಾಗೂ ತಕರಾರುಗಳನ್ನು ಸಲ್ಲಿಸಲು ಸಹ ಅವಕಾಶ ನೀಡಲಾಗಿದೆ. ಸರ್ಕಾರಿ ಜಾಗ, ಪಿಟಿಸಿಎಲ್ ಪ್ರಕರಣಗಳ ಆಸ್ತಿಗಳು, 94 ಸಿ ಸೇರಿದಂತೆ ಇತರೇ ಪ್ರಕರಣಗಳ ಜಾಗ ಇಲ್ಲಿ ಒಳಪಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

15 ಲಕ್ಷ ಆಸ್ತಿಗಳಿಗೆ 6ನೇ ಗ್ಯಾರಂಟಿ:

ನಗರದಲ್ಲಿ 25 ಲಕ್ಷ‌‌‌ ಆಸ್ತಿಗಳಿದ್ದು, ಇದರಲ್ಲಿ 7.5 ಲಕ್ಷ‌‌ ಎ‌ ಖಾತೆಗಳಿವೆ. 7.5 ಲಕ್ಷ‌ ಆಸ್ತಿಗಳು ಬಿ ಖಾಥಾ ಹೊಂದಿದ್ದು, ಇನ್ನು 7-8 ಲಕ್ಷ‌ ಆಸ್ತಿಗಳು ಬಿ ಖಾತೆ ಪಡೆಯಲೂ ಅನುಮೋದನೆ ಪಡೆಯದೆ ಕಂದಾಯ ನಿವೇಶನಗಳಾಗಿಯೇ ಉಳಿದಿವೆ. ಈ ಕಾರ್ಯಕ್ರಮದ ಮೂಲಕ ಜನರ 15 ಲಕ್ಷ ಆಸ್ತಿ ದಾಖಲೆಗಳನ್ನು ಕಾಪಾಡಿಕೊಳ್ಳಲು ನಮ್ಮ ಸರ್ಕಾರ 6ನೇ ಗ್ಯಾರಂಟಿ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಬಿ-ಖಾತಾದಿಂದ ಸಮಸ್ಯೆಯೇನು?

ಕೆಟಿಸಿಪಿ ಕಾಯ್ದೆ 61 ರ ಅಡಿಯ ಭೂ ಪರಿವರ್ತನೆ ಆಗದೆ ಮಾಡಿರುವ ಕಂದಾಯ ನಿವೇಶನ, ಇಂತಹ ಜಾಗದಲ್ಲಿ ಕಟ್ಟಡ ನಿರ್ಮಾಣ ಆಗಿದೆ. ಈ ಆಸ್ತಿಗಳಿಗೆ ಬಿ ಖಾತಾ ನೀಡಲಾಗಿತ್ತು. ಇಂತಹವರಿಗೆ ಬ್ಯಾಂಕ್ ಸಾಲ ದೊರೆಯುತ್ತಿರಲಿಲ್ಲ, ಕಾನೂನು ಪ್ರಕಾರ ಕಟ್ಟಡ ನಕ್ಷೆಗೆ ಅನುಮತಿ ಸೇರಿದಂತೆ ಯಾವುದೇ ಸೌಲಭ್ಯಕ್ಕೆ ಕಾನೂನಿನಲ್ಲಿ ಅವಕಾಶವಿರಲಿಲ್ಲ.

ಇತ್ತೀಚೆಗೆ ನಕ್ಷೆ ಮಂಜೂರಾತಿ ಇಲ್ಲದೆ ಓಸಿ, ಸಿಸಿ ನೀಡುವಂತಿಲ್ಲ. ಓಸಿ, ಸಿಸಿ ಇಲ್ಲದ ಮನೆಗಳಿಗೆ ವಿದ್ಯುತ್‌, ನೀರು ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇಂತಹ ಸಮಸ್ಯೆಗಳಿಂದ ಬಿ ಖಾತಾದಾರರು ಪಾರಾಗಬಹುದು.

ಬಿ ಖಾತಾದಿಂದ ಎ-ಖಾತಾಗೆ ಪರಿವರ್ತಿಸುವ ವಿಧಾನ (2,000 ಚದರ ಮೀಟರ್‌ವರೆಗಿನ ನಿವೇಶನ)

1- https://BBMP.karnataka.gov.in/BtoAKhata ಲಿಂಕ್‌ ಮೂಲಕ ಆನ್ಲೈನ್‌ನಲ್ಲಿ ಓಟಿಪಿ ಆಧಾರಿತ ಲಾಗಿನ್‌.

2. ಎ- ಖಾತಾ ಆಗಿ ಪರಿವರ್ತಿಸಬೇಕಾದ ಬಿ-ಖಾತಾ ಆಸ್ತಿಯ ePID ನಮೂದು.

3. ಎಲ್ಲಾ ಮಾಲೀಕರ ಆಧಾರ್‌ ದೃಢೀಕರಣ

4. ನಿವೇಶನ ಮುಂಭಾಗ ರಸ್ತೆ ‘ಸಾರ್ವಜನಿಕ ರಸ್ತೆ’ ಆಗಿರಬೇಕು ಮತ್ತು ಅದು ‘ಖಾಸಗಿ ರಸ್ತೆ’ ಆಗಿದ್ದರೆ ನಾಗರಿಕರು ‘ಸಾರ್ವಜನಿಕ ರಸ್ತೆ’ ಗೆ ಪರಿವರ್ತಿಸಲು ಒಪ್ಪಿಗೆ ನೀಡಬೇಕು.

5. ಭೂ ಪರಿವರ್ತಿತ ಮತ್ತು ಪರಿವರ್ತಿಸದ (ಕಂದಾಯ ನಿವೇಶನ) ಎರಡೂ ನಿವೇಶನಗಳೂ ಅರ್ಜಿ ಸಲ್ಲಿಸಬಹುದು. ಫ್ಲಾಟ್‌ಗಳು ಅರ್ಹವಲ್ಲ.

6. ಸ್ಥಳ ಮತ್ತು ಇತರ ವಿವರಗಳೊಂದಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು.

7-. ನಗರ ಪಾಲಿಕೆಯಿಂದ ಸ್ಥಳ ಭೇಟಿ ಮತ್ತು ದೃಢೀಕರಣ. ಅಗತ್ಯವಿದ್ದರೆ ಖಾಸಗಿರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸುವುದು.

8. ಅರ್ಹತೆ ಇದ್ದರೆ ನಿವೇಶನ ನಿವೇಶನದ ಮಾರ್ಗಸೂಚಿ ದರದ ಶೇ.5 ರಷ್ಟು ಆನ್ಲೈನ್‌ ಮೂಲಕ ಪಾವತಿ.

9- ಆಯುಕ್ತರ ಅನುಮೋದನೆಯ ನಂತರ ಸ್ವಯಂ ಚಾಲಿತ ಅನುಮೋದನೆ.12. ಬಿ-ಖಾತಾದಿಂದ ಎ-ಖಾತಾಗೆ ಸ್ವಯಂಚಾಲಿತ ಪರಿವರ್ತನೆ.

2000 ಚ.ಮೀಟರ್‌ಗಿಂತ ಹೆಚ್ಚುವ ವಿಸ್ತೀರ್ಣದ ನಿವೇಶನಗಳಿಗೆ ಎ ಖಾತಾ ಆಗಿ ಪರಿವರ್ತಿಸುವ ವಿಧಾನ:

1. https://BPAS.bbmpgov.in ನಲ್ಲಿ ನೋಂದಾಯಿತ ಆರ್ಕಿಟೆಕ್ಟ್‌ ಅಥವಾ ಎಂಜಿನಿಯರ್‌ ಮೂಲಕ ಅರ್ಜಿ ಸಲ್ಲಿಸಬೇಕು.

2- ನಿವೇಶನಗಳ ಅಗತ್ಯ ದಾಖಲೆ ಹಾಗೂ ಕ್ಯಾಡ್‌ ಡ್ರಾಯಿಂಗ್‌ ಅಪ್ಲೋಡ್‌ ಮಾಡಬೇಕು.

3. 500 ರು. ಆರಂಭಿಕ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು.

4. ನಗರ ಪಾಲಿಕೆ ಅಧಿಕಾರಿಗಳಿಂದ ನಿವೇಶನ ಪರಿಶೀಲಿಸಿ, ಅರ್ಹತೆ ಇದ್ದರೆ ಅನ್ವಯವಾಗುವ ಶುಲ್ಕ ಸಂಗ್ರಹಿಸಿ ಅನುಮೋದನೆ.

5- ಏಕ ನಿವೇಶನದ ಅನುಮೋದನೆ ಪ್ರಮಾಣಪತ್ರ ಹಾಗೂ ಡ್ರಾಯಿಂಗ್ ಬಿಡುಗಡೆ. ಬಳಿಕ ಸ್ವಯಂ ಚಾಲಿತವಾಗಿ ಎ ಖಾತಾಗೆ ಪರಿವರ್ತನೆ ಆಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!