
ಲಿಂಗರಾಜು ಕೋರಾ
ಬೆಂಗಳೂರು : ಹಣಕಾಸು ಕೊರತೆಯ ಸವಾಲಿನ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಮಾಡಿದ್ದಾರೆ. ಅಷ್ಟೇ ಅಲ್ಲ, 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಸುಮಾರು ಶೇ.85 ರಿಂದ 90 ರಷ್ಟು ಯೋಜನೆ, ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.
ಕಳೆದ ವರ್ಷ ರಾಜ್ಯದ ತೆರಿಗೆ, ತೆರಿಗೆಯೇತರ, ಕೇಂದ್ರದ ತೆರಿಗೆ ಪಾಲು, ಅನುದಾನ, ಉದ್ದೇಶಿತ ಸಾಲ ಎಲ್ಲವನ್ನೂ ಒಳಗೊಂಡು ₹4,09 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಸುಮಾರು ₹19 ಸಾವಿರ ಕೋಟಿ ರಾಜಸ್ವ ಕೊರತೆ, ₹90 ಸಾವಿರ ಕೋಟಿಗಳಿಗೂ ಹೆಚ್ಚಿನ ವಿತ್ತೀಯ ಕೊರತೆಯಾಗಬಹುದೆಂದು ಅಂದಾಜಿಸಿದ್ದರು.
ಈ ಕೊರತೆ ನಿಭಾಯಿಸಲು ಖಾಲಿ ಇರುವ ಮದ್ಯದ ಪರವಾನಗಿ ಹರಾಜು, ತೆರಿಗೆ ವಂಚನೆ ತಡೆಗೆ ಇ-ಖಾತಾ, ನೋಂದಾಯಿಸಲಾದ ದಾಖಲೆಗಳಿಗೆ ಇ-ಸ್ಟ್ರ್ಯಾಂಪಿಂಗ್ ಜಾರಿ, ಮದ್ಯದ ದರ ಹೆಚ್ಚಳ ಸೇರಿ ಆದಾಯ ಹೆಚ್ಚಳಕ್ಕೆ ಮಾಡಿದ ಹಲವು ಪ್ರಯತ್ನಗಳು, ಅಬಕಾರಿ, ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಸಾಧಿಸಲಾಗಿದೆ.
ಆದರೂ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಹಿಂದಿನ ಕೆಲ ವರ್ಷಗಳಲ್ಲಿದ್ದ ಆರ್ಥಿಕ ಅಶಿಸ್ತು ಹಾಗೂ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಳಕೆಯಿಂದ ನಿರೀಕ್ಷೆಯಂತೆ ಒಂದಷ್ಟು ರಾಜಸ್ವ ಕೊರತೆ ಮತ್ತು ವಿತ್ತೀಯ ಕೊರತೆ ಹಿನ್ನೆಲೆಯಲ್ಲಿ ಇನ್ನೂ ಶೇ.5ರಿಂದ 10ರಷ್ಟು ಘೋಷಣೆಗಳ ಜಾರಿಗೆ ಇನ್ನೂ ಅನುದಾನ ದೊರೆಯುವುದು ಬಾಕಿ ಇದೆ. ಜೊತೆಗೆ ಮೇಕೆದಾಟು, ಕಳಸಾ ಬಂಡೂರಿ ಸೇರಿ ಕೆಲ ನೀರಾವರಿ ಯೋಜನೆಗಳನ್ನು ಒಳಗೊಂಡು ಕೇಂದ್ರ ಸರ್ಕಾರದ ಅನುಮೋದನೆ ಹಾಗೂ ಆರ್ಥಿಕ ನೆರವು ಸಿಗಬೇಕಿರುವ ಯೋಜನೆಗಳ ಅನುಷ್ಠಾನ ಬಾಕಿ ಉಳಿದಿದೆ ಎನ್ನುತ್ತವೆ ಸರ್ಕಾರದ ಆರ್ಥಿಕ ಇಲಾಖೆಯ ಉನ್ನತ ಮೂಲಗಳು.
ಮುಖ್ಯಮಂತ್ರಿ ತಮ್ಮ ಬಜೆಟ್ ಘೋಷಣೆಗಳ ಅನುಷ್ಠಾನದಲ್ಲಿ ಸಾರ್ವನಿಕ ಅಗತ್ಯ ಸೇವೆಗಳಾದ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಎರಡೂ ಇಲಾಖೆಗಳಲ್ಲಿ ಘೋಷಿಸಿದ್ದ 700 ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ, ಅತಿಥಿ ಉಪನ್ಯಾಸಕರು, ಅಡುಗೆ ಸಿಬ್ಬಂದಿ ಗೌರವಧನ ಹೆಚ್ಚಳ, ಮರು ಸಿಂಚನ, ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ, ವಿಶ್ವಬ್ಯಾಂಕ್‌ನಿಂದ ₹2500 ಕೋಟಿ ಸಾಲದಲ್ಲಿ ಕಾಲೇಜುಗಳಲ್ಲಿ ಎಕ್ಸಲೆನ್ಸ್ ಸೆಂಟರ್‌ಗಳ ಆರಂಭ, ಪದವಿ, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 2000 ಬೋಧಕ ವರ್ಗದ ನೇಮಕ ಸೇರಿ ಬಹುತೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿದೆ. ಆದರೆ, 10 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ.
ಕೆಲ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ, ಅನುಷ್ಠಾನಕ್ಕೆ ಆದೇಶ ಆದರೂ ಅನುದಾನ ಬಿಡುಗಡೆ ಬಾಕಿ ಇದೆ ಎಂಬುದು ಅಧಿಕಾರಿಗಳ ಹೇಳಿಕೆ. ಜೊತೆಗೆ ನಗರಾಭಿವೃದ್ಧಿ, ಮೂಲಸೌಕರ್ಯ, ವಸತಿ, ನೀರಾವರಿ, ಸಮಾಜ ಕಲ್ಯಾಣ, ಕಂದಾಯ, ಗ್ರಾಮೀಣ ಅಭಿವೃದ್ಧಿ ಮತ್ತಿತರ ಇಲಾಖಾ ಯೋಜನೆಗಳನ್ನೂ ಆದ್ಯತೆ ಮೇಲೆ ಜಾರಿಗೆ ತರುವ ಕೆಲಸ ಆಗಿದೆ. ಉಳಿದಂತೆ ಬಜೆಟ್‌ಟನಲ್ಲಿ ಅತಿ ಕಡಿಮೆ ಅನುದಾನದ ಪಾಲು ಹೊಂದಿರುವ ಕೃಷಿ, ಪಶುಸಂಗೋಪನೆ ಇಲಾಖೆಯಡಿ ಘೋಷಿಸಿದ್ದ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಅಗತ್ಯ ಅನುದಾನ ಒದಗಿಸಿದ್ದಾರೆ.
ಒಟ್ಟಾರೆ ಬಜೆಟ್‌ನಲ್ಲಿ ಘೋಷಿಸಿದ್ದ ಶೇ.85ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಈವರೆಗೆ ಅನುಷ್ಠಾನಕ್ಕೆ ತರಲಾಗಿದೆ. ಉಳಿದವುಗಳಲ್ಲಿ ಕೆಲ ಯೋಜನೆಗಳ ಜಾರಿಗೆ ಆಡಳಿತಾತ್ಮಕ ಅನುದೋದನೆ ದೊರಕಿದ್ದರೂ ಅನುದಾನ ಸಿಕ್ಕಿಲ್ಲ, ಕೇಂದ್ರದ ಅನುಮತಿ, ಆರ್ಥಿಕ ಸಹಕಾರ ದೊರೆಯಬೇಕಾದ ನೀರಾವರಿ ಮತ್ತಿತರ ಕೆಲ ಯೋಜನೆಗಳ ಅನುಷ್ಠಾನ ಬಾಕಿ ಉಳಿದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಉಚಿತ ಪಂಚ ಗ್ಯಾರಂಟಿ ಯೋಜನೆಗಳ ಹೊರತಾಗಿ ಶಾಶ್ವತ ಅಥವಾ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳಿಗೆ ಸಮರ್ಪಕ ಅನುದಾನ ದೊರೆಯುತ್ತಿಲ್ಲ, ಶಾಸಕರ ಕ್ಷೇತ್ರಾಭಿವೃದ್ಧಿಗೂ ಅನುದಾನ ಸಿಗುತ್ತಿಲ್ಲ ಎನ್ನುವುದು ಪ್ರತಿಪಕ್ಷ ಮಾತ್ರವಲ್ಲ, ಆಡಳಿತ ಪಕ್ಷದವರಿಂದಲೂ ಕೇಳಿಬರುತ್ತಿರುವ ಆರೋಪ. ಹಾಗಾಗಿ ಇದೇ ಮಾ.6ರಂದು ಮಂಡಿಸಲಿರುವ 2026-27ನೇ ಸಾಲಿನ ತಮ್ಮ 17ನೇ ಬಜೆಟ್‌ನಲ್ಲಿ ಜನಪ್ರಿಯ ಯೋಜನೆಗಳನ್ನು (ಗ್ಯಾರಂಟಿ) ಉಳಿಸಿಕೊಂಡು, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೂ ಹಣ ಒದಗಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿರುವ ಬಹುದೊಡ್ಡ ಸವಾಲು.
ಈ ಬಾರಿಯೂ ಬಜೆಟ್‌ಗಾತ್ರ ಸುಮಾರು 60 ಸಾವಿರ ಕೋಟಿ ರು.ಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಗ್ಯಾರಂಟಿ ಯೋಜನೆ, ಬದ್ಧತಾ ವೆಚ್ಚ, ಯೋಜನಾ ವೆಚ್ಚ, ಸಾಲ ತೀರುವಳಿಯಂಥವುಗಳಿಗೇ ಬಜೆಟ್‌ನ ಬಹುಪಾಲ ಹಣ ವೆಚ್ಚಮಾಡಬೇಕಾಗುತ್ತದೆ. ಇದರಿಂದ ಈಗಾಗಲೇ ಘೋಷಿಸಿರುವಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 56 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ 3ನೇ ಹಂತಕ್ಕೆ ಮುಳುಗಡೆಯಾಗುವ ಹಳ್ಳಿಗಳ ರೈತರ ಜಮೀನಿಗೆ ಘೋಷಿಸಿರುವಂತೆ ಸುಮಾರು 75 ಸಾವಿರ ಕೋಟಿ ರು. ಪರಿಹಾರ ಒದಗಿಸಬೇಕಾದ ಅನಿವಾರ್ಯತೆ, ಗುತ್ತಿಗೆದಾರರಿಗೆ ಸುಮಾರು 38 ಸಾವಿರ ಕೋಟಿ ರು. ಯೋಜನೆಗಳಿಗೆ ಸಂಬಂಧಿಸಿದ ಬಾಕಿ ಬಿಲ್ ಪಾವತಿಗೆ ಅನುದಾನ ಒದಗಿಸುವುದು ಮುಖ್ಯಮಂತ್ರಿ ಅವರ ಮುಂದಿರುವ ಸವಾಲುಗಳು.
ಅಷ್ಟೇ ಅಲ್ಲ, ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಮೂಲಸೌಕರ್ಯ, ನೀರಾವರಿ ಮತ್ತು ಕೃಷಿ ಕ್ಷೇತ್ರಗಳಿಗೆ ಸಾಕಷ್ಟು ಹಣ ಒದಗಿಸುವುದು ಕಷ್ಟಸಾಧ್ಯವಾಗುತ್ತಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಬಳಿಕ ರಾಜ್ಯ ಸರಕಾರಕ್ಕೆ ತೆರಿಗೆ ಮೂಲದಿಂದ ಬರುತ್ತಿದ್ದ ಆದಾಯ ಕಡಿಮೆಯಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲೂ ದೊಡ್ಡಮಟ್ಟದ ತಾರತಮ್ಯ ಮಾಡುತ್ತಿದೆ. ಜೊತೆಗೆ ಗ್ಯಾರಂಟಿಗಳ ಹೊರೆ ಬಾಧಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸಂಪ್ರದಾಯವಾದಿ ಮಾರ್ಗಗಳು ಫಲಕೊಡಲಾರವು. ಇದ್ದುದರಲ್ಲೇ ಹಂಚುತ್ತೇನೆ ಎನ್ನುವ ಸಂಪ್ರದಾಯವಾದಿತನ ಒಳ್ಳೆಯದಲ್ಲ, ಆರ್ಥಿಕ ಸವಾಲುಗಳಿಂದ ಹೊರಬರಲು ಹೊಸ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ