ಗೃಹಜ್ಯೋತಿ ಯೋಜನೆಯಡಿ ಜನರಿಗೆಲ್ಲ ಉಚಿತ ವಿದ್ಯುತ್ ನೀಡಿ ರಾಜ್ಯ ಸರ್ಕಾರ ಸೈ ಎನಿಸಿಕೊಂಡಿದೆ. ಆದರೆ, ಸರ್ಕಾರಿ ಇಲಾಖೆಗಳೇ ಹೆಸ್ಕಾಂಗೆ ಬರೋಬ್ಬರಿ .885 ಕೋಟಿಗೂ ಅಧಿಕ ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಕೊಂಡಿವೆ!
ಶಿವಾನಂದ ಗೊಂಬಿ
ಹುಬ್ಬಳ್ಳಿ (ಆ.24) : ಗೃಹಜ್ಯೋತಿ ಯೋಜನೆಯಡಿ ಜನರಿಗೆಲ್ಲ ಉಚಿತ ವಿದ್ಯುತ್ ನೀಡಿ ರಾಜ್ಯ ಸರ್ಕಾರ ಸೈ ಎನಿಸಿಕೊಂಡಿದೆ. ಆದರೆ, ಸರ್ಕಾರಿ ಇಲಾಖೆಗಳೇ ಹೆಸ್ಕಾಂಗೆ ಬರೋಬ್ಬರಿ .885 ಕೋಟಿಗೂ ಅಧಿಕ ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಕೊಂಡಿವೆ!
ಇದರಿಂದಾಗಿ ಹೆಸ್ಕಾಂ ಆರ್ಥಿಕ ಸಂಕಷ್ಟದಿಂದ ನರಳುವಂತಾಗಿದೆ. ಇಲಾಖೆಗಳ ವಿದ್ಯುತ್ ಬಿಲ್ ಬಾಕಿ ವಸೂಲಿಗಾಗಿಯೇ ಹೆಸ್ಕಾಂ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಜತೆಗೆ ಸರ್ಕಾರವೇ ನೇರವಾಗಿ ಈ ಹಣವನ್ನು ಹೆಸ್ಕಾಂಗೆ ಪಾವತಿಸಲಿ ಎಂಬ ಬೇಡಿಕೆಯನ್ನೂ ಇದೀಗ ಹೆಸ್ಕಾಂ ಮುಂದಿಟ್ಟಿದೆ.
ಸರ್ಕಾರಿ ಇಲಾಖೆಗಳಿಂದಲೇ ಎಸ್ಕಾಂಗಳಿಗೆ ₹12240 ಕೋಟಿ ಬಾಕಿ!
ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ, ಉತ್ತರ ಕನ್ನಡ ಹೀಗೆ ಏಳು ಜಿಲ್ಲೆಗಳ ಸರ್ಕಾರಿ ಕಚೇರಿ, ಬಹುಗ್ರಾಮ ಕುಡಿಯುವ ನೀರು ಯೋಜನೆ, ಸೇರಿದಂತೆ ವಿವಿಧೆಡೆ ಬರೋಬ್ಬರಿ 104519 ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಈ ಎಲ್ಲ ಇಲಾಖೆಗಳು ವಿದ್ಯುತ್ ಬಿಲ್‌ನ್ನು ಮಾತ್ರ ಬಾಕಿಯಿರಿಸಿಕೊಳ್ಳುತ್ತಲೇ ಹೋಗುತ್ತಿವೆ. ಇದರ ಮೊತ್ತವೇ ಇದೀಗ .885.22 ಕೋಟಿ ಆಗಿದೆ.
ಯಾವ್ಯಾವ ಇಲಾಖೆ:
ಅತಿ ಹೆಚ್ಚು ಬಾಕಿ ಇರಿಸಿಕೊಂಡಿರುವ ಇಲಾಖೆಯೆಂದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್. ಇದು ಬರೋಬ್ಬರಿ .616.93 ಕೋಟಿ ಬಾಕಿ ಇರಿಸಿಕೊಂಡಿದೆ. ಇನ್ನುಳಿದಂತೆ ಪಟ್ಟಣ ಅಭಿವೃದ್ಧಿ ಇಲಾಖೆ .99.75 ಕೋಟಿ, ಸಣ್ಣ ನೀರಾವರಿ ಇಲಾಖೆ .36.22 ಕೋಟಿ, ಕರ್ನಾಟಕ ನೀರಾವರಿ ನಿಗಮ .19.57 ಕೋಟಿ, ಕೃಷ್ಣ ಭಾಗ್ಯ ಜಲನಿಗಮ .6.80 ಕೋಟಿ, ಬಹುಗ್ರಾಮ ನೀರು ಸರಬರಾಜು ಯೋಜನೆ .48.25 ಸೇರಿದಂತೆ ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳು .25.65 ಕೋಟಿ ಸೇರಿದಂತೆ ಒಟ್ಟು .885.22 ಕೋಟಿ ವಿದ್ಯುತ್ ಬಿಲ್ ಪಾವತಿಸಬೇಕಿದೆ.
ಹಾಗಂತ ಇಲಾಖೆಗಳು ಬಿಲ್ ಪಾವತಿಸುತ್ತಲೇ ಇಲ್ಲ ಅಂತೇನೂ ಇಲ್ಲ. ಪ್ರತಿ ತಿಂಗಳು, ಅಥವಾ ಮೂರು ತಿಂಗಳಿಗೊಮ್ಮೆ ಅಷ್ಟೋ ಇಷ್ಟೋ ಪಾವತಿಸುತ್ತವೆ. ಅಂದರೆ ಏಪ್ರಿಲ್‌ನಿಂದ ಜೂನ್‌ವರೆಗೆ ಈ ಇಲಾಖೆಗಳು .346.18 ಕೋಟಿ ವಿದ್ಯುತ್ ಬಳಸಿಕೊಂಡಿವೆ. ಆದರೆ ಬಿಲ್ ಪಾವತಿ ಮಾಡಿದ್ದು ಮಾತ್ರ .202.11 ಕೋಟಿ ಮಾತ್ರ. ಹಿಂದಿನದು ಬಾಕಿಯುಳಿಯುವುದರ ಜೊತೆಗೆ ಈಗ ಖರ್ಚು ಮಾಡಿದ್ದರಲ್ಲೂ ಸ್ವಲ್ಪ ಹಣವನ್ನು ಬಾಕಿ ಉಳಿಸಿಕೊಂಡಿವೆ. ಹೀಗೆ ಬಾಕಿ ಉಳಿದಿರುವ ಮೊತ್ತ ಹಾಗೆ ಏರುತ್ತಲೇ ಇದೆ.
ನೋಡಲ್ ಅಧಿಕಾರಿಗಳ ನೇಮಕ:
ಹೀಗೆ ನೂರಾರು ಕೋಟಿ ಬಾಕಿಯಿರಿಸಿಕೊಂಡಿರುವುದರಿಂದ ಹೆಸ್ಕಾಂ ಆರ್ಥಿಕ ಸಮಸ್ಯೆಯಿಂದ ನರಳುವಂತಾಗುತ್ತದೆ. ಇದರಿಂದ ಹೊರಬರಲು ಹೆಸ್ಕಾಂ ಕೂಡ ಹರಸಾಹಸ ಪಡುತ್ತಿದೆ. ಇದಕ್ಕಾಗಿ ಹೆಸ್ಕಾಂನಲ್ಲಿ ಬೆಳಗಾವಿ ವಲಯ ಹಾಗೂ ಹುಬ್ಬಳ್ಳಿ ವಲಯ ಹೀಗೆ ಎರಡು ವಲಯಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿಕೊಂಡಿದೆ. ಅವರಿಗೆ ವಿದ್ಯುತ್ ಬಿಲ್ ವಸೂಲಾತಿಯ ಜವಾಬ್ದಾರಿ ನೀಡಿದೆ. ಜತೆಗೆ ವಿವಿಧ ಇಲಾಖೆಗಳು ಹೆಸ್ಕಾಂಗೆ ನೀಡಬೇಕಿರುವ ವಿದ್ಯುತ್ ಬಿಲ್ ಅನ್ನು ನೇರವಾಗಿ ಸರ್ಕಾರವೇ ಒಂದೇ ಹಂತಕ್ಕೆ ಬಿಡುಗಡೆ ಮಾಡಬೇಕು. ಹೀಗೆ ಬಿಡುಗಡೆ ಮಾಡಿರುವ ಹಣವನ್ನು ಆಯಾ ಇಲಾಖೆಗಳ ಬಜೆಟ್‌ನಲ್ಲಿ ಕಡಿತಗೊಳಿಸಬೇಕು ಎಂಬ ಪ್ರಸ್ತಾವನೆ ಕೂಡ ಸರ್ಕಾರಕ್ಕೆ ಹೋಗಿದೆ. ಸರ್ಕಾರ ಈ ಬಗ್ಗೆ ಇನ್ನೂ ಚಿಂತನೆ ನಡೆಸಿದೆ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ಆರ್ಥಿಕವಾಗಿ ಸುಧಾರಣೆಯಾಗುತ್ತದೆ ಎಂಬ ಅಭಿಪ್ರಾಯ ಹೆಸ್ಕಾಂನದ್ದು.
ಆಕ್ರೋಶ:
ಇಲಾಖೆಗಳು ವಿದ್ಯುತ್ ಬಿಲ್ ಪಾವತಿಸದೇ ಇರುವುದರಿಂದ ಹೆಸ್ಕಾಂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇದರಿಂದ ಹೊರಬರಲು ಹೆಸ್ಕಾಂ ಕೈಗಾರಿಕೆ, ವಾಣಿಜ್ಯೋದ್ಯಮ ಸಂಸ್ಥೆಗಳ ವಿದ್ಯುತ್ ಬಿಲ್ ಅನ್ನು ಯರ್ರಾಬಿರ್ರಿ ಏರಿಸುತ್ತಿದೆ. ಇದರ ಹೊರೆ ನಾವು ಹೊರುವಂತಾಗಿದೆ. ಸರ್ಕಾರಿ ಇಲಾಖೆಗಳು ಕೊಡಬೇಕಾದ ವಿದ್ಯುತ್ ಬಿಲ್ ಅನ್ನು ತಕ್ಷಣವೇ ಸರ್ಕಾರವೇ ಮುತುವರ್ಜಿ ವಹಿಸಿ ಬಿಡುಗಡೆ ಮಾಡಬೇಕು. ಜತೆಗೆ ನಮ್ಮ ವಿದ್ಯುತ್ ಶುಲ್ಕವನ್ನು ಇಳಿಸಬೇಕು ಎಂಬ ಬೇಡಿಕೆ ಕೈಗಾರಿಕೆಗಳದ್ದು.
ಒಟ್ಟಿನಲ್ಲಿ ಇಲಾಖೆಗಳ ನೂರಾರು ಕೋಟಿ ವಿದ್ಯುತ್ ಬಿಲ್ ಬರಬೇಕಿರುವುದರಿಂದ ಹೆಸ್ಕಾಂ ಆರ್ಥಿಕ ಸಮಸ್ಯೆಯನ್ನು ಎದುರಿಸುವಂತಾಗಿರುವುದಂತೂ ಸತ್ಯ. ಗೃಹಜ್ಯೋತಿ ಮೂಲಕ ಸೈ ಎನಿಸಿಕೊಂಡಿರುವ ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಅಂಬೋಣ.
ಗೃಹ ಜ್ಯೋತಿ: ಹೆಸ್ಕಾಂ ವ್ಯಾಪ್ತಿಯಲ್ಲಿ 28 ಲಕ್ಷ ಕುಟುಂಬಗಳಿಗೆ ಮೊದಲ ತಿಂಗಳು ಶೂನ್ಯ ಬಿಲ್..!
ಹೆಸ್ಕಾಂಗೆ ಸರ್ಕಾರಿ ಇಲಾಖೆಗಳಿಂದ ಕೊಡಬೇಕಿರುವ ವಿದ್ಯುತ್ ಬಿಲ್ ಪಾವತಿಗೆ ಕ್ರಮ ಕೈಗೊಂಡು, ಹೆಸ್ಕಾಂ ಆರ್ಥಿಕ ಸುಧಾರಣೆಗೆ ಮುಂದಾಗಬೇಕು. ಕೈಗಾರಿಕೆಗಳ ಬಿಲ್ ಏರಿಸಿರುವುದನ್ನು ಇಳಿಸಬೇಕು.
ಮೃತ್ಯುಂಜಯ ಮಠದ, ಕೈಗಾರಿಕೋದ್ಯಮಿ, ಹುಬ್ಬಳ್ಳಿ