ಬೆಂಗಳೂರು (ಆ.15): ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 8 ಗಡಿ ಜಿಲ್ಲೆಯಲ್ಲಿ ಎರಡನೇ ವಾರವೂ ವಾರಾಂತ್ಯದ ಲಾಕ್‌ಡೌನ್ ಮುಂದುವರಿಸಲಾಗಿದ್ದರೂ ಬಹುತೇಕ ಜಿಲ್ಲೆಗಳಲ್ಲಿ ಶನಿವಾರ ಕರ್ಫ್ಯೂ ನಿಯಮ ಉಲ್ಲಂಘನೆ ಎದ್ದು ಕಾಣುತ್ತಿತ್ತು.
ಮೊದಲ ವಾರದ ಕರ್ಫ್ಯೂ ಹೋಲಿಸಿದರೆ ಎರಡನೇ ವಾರ ಕಟ್ಟುನಿಟ್ಟು ಸ್ವಲ್ಪ ಸಡಿಲವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ವಾರಾಂತ್ಯದ ಕರ್ಫ್ಯೂಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆದರೆ, ಈಗ ಎರಡನೇ ವಾರದಲ್ಲಿ ವೀಕೆಂಡ್ ಕರ್ಫ್ಯೂ ಕುರಿತು ಜನರ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಯಲ್ಲೂ ಇದೇ ಸ್ಥಿತಿ ಇತ್ತು. ಆದರೆ, ಚಾಮರಾಜನಗರ, ಮೈಸೂರು ಮತ್ತು ಕೊಡಗು ಸಂಪೂರ್ಣ ಸ್ತಬ್ಧವಾಗಿತ್ತು. ವಿಜಯಪುರದಲ್ಲಿ ಮಧ್ಯಾಹ್ನ 2 ಗಂಟೆ ನಂತರವೂ ವಹಿವಾಟು ನಡೆಸುತ್ತಿದ್ದ ಅಂಗಡಿ-ಮುಂಗಟ್ಟುಗಳನ್ನು ಪೊಲೀಸರು ಬಲವಂತವಾಗಿ ಬಂದ್ ಮಾಡಿಸಬೇಕಾಯಿತು. ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂತು.
ಕರ್ನಾಟಕದ 11 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಳ
ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ- ಬೆಳಗಾವಿ ಜಿಲ್ಲೆಯಲ್ಲಿ ಜಾರಿ ಮಾಡಲಾಗಿದ್ದ ವೀಕೆಂಡ್ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ಶಿನೋಳಿ, ನಿಪ್ಪಾಣಿ, ಸಂಕೇಶ್ವರ, ಕಾಗವಾಡ, ಅಥಣಿ ತಾಲೂಕಿನ ಗಡಿ ಪ್ರದೇಶಗಳಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದವೀ ಬೆಳಗಾವಿ ನಗರ, ಅಥಣಿ, ಕಾಗವಾಡ, ನಿಪ್ಪಾಣಿ, ಚಿಕ್ಕೋಡಿಗಳಲ್ಲಿ ಜನಸಂಚಾರ ಎಂದಿನಂತೆ ಕಂಡುಬಂತು.